ಪರಿಹಾರ ಘೋಷಣೆಯಾದ ನಂತರ ರೈತರು ಆತ್ಮಹತ್ಯೆ: ಅನ್ನದಾತರ ಕ್ಷಮೆ ಯಾಚಿಸಿದ ಸಚಿವ ಶಿವಾನಂದ ಪಾಟೀಲ
₹5 ಲಕ್ಷ ಪರಿಹಾರ ಘೋಷಣೆ ನಂತರ ರೈತರ ಆತ್ಮಹತ್ಯೆ ಹೆಚ್ಚು ವರದಿಯಾಗುತ್ತಿವೆ ಎಂದು ಸಚಿವರು ಹೇಳಿಕೆ ನೀಡಿದ್ದು, ಈ ಕುರಿತು ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ರೈತ ಸಂಘದವರು ಕೂಡ ಈ ಹೇಳಿಕೆ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದರು.
ಹಾವೇರಿ(ಸೆ.26): 5 ಲಕ್ಷ ಪರಿಹಾರ ಘೋಷಣೆಯಾದ ನಂತರ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ ಎಂದು ಹೇಳಿದ್ದ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ಕೊನೆಗೂ ರೈತರ ಕ್ಷಮೆಯಾಚಿಸಿದ್ದಾರೆ. ಈ ಮೂಲಕ ರೈತರ ಆತ್ಮಹತ್ಯೆಗೆ ಸಂಬಂಧಿಸಿದ ತಮ್ಮ ಹೇಳಿಕೆಯಿಂದ ಸೃಷ್ಟಿಯಾಗುವ ವಿವಾದಕ್ಕೆ ತೆರೆ ಎಳೆದಿದ್ದಾರೆ.
₹5 ಲಕ್ಷ ಪರಿಹಾರ ಘೋಷಣೆ ನಂತರ ರೈತರ ಆತ್ಮಹತ್ಯೆ ಹೆಚ್ಚು ವರದಿಯಾಗುತ್ತಿವೆ ಎಂದು ಸಚಿವರು ಹೇಳಿಕೆ ನೀಡಿದ್ದು, ಈ ಕುರಿತು ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ರೈತ ಸಂಘದವರು ಕೂಡ ಈ ಹೇಳಿಕೆ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಹೇಳಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ಕ್ಷಮೆಯಾಚಿಸಬೇಕು. ಜಿಲ್ಲೆಯ ಉಳಿದ ಮೂರು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಇಲ್ಲಿನ ಪ್ರವಾಸಿ ಮಂದಿರದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಸೋಮವಾರ ಪ್ರತಿಭಟನೆ ನಡೆಯಿತು.
ಸಚಿವರೇ ನಿಮಗೆ 10 ಕೋಟಿ ರೂ. ಕೋಡ್ತೀವಿ, ನೇಣು ಹಾಕಿಕೊಳ್ಳಿ: ಮಾಜಿ ಸಚಿವ ಬೆಳ್ಳುಬ್ಬಿ ಸವಾಲು
ಈ ವೇಳೆ ಸ್ಥಳಕ್ಕೆ ಆಗಮಿಸಿದ ಸಚಿವ ಪಾಟೀಲ ಅವರು, ತಾವು ಹಾಗೆ ಹೇಳಿದ್ದನ್ನು ಮಾಧ್ಯಮಗಳು ತಿರುಚಿ ವರದಿ ಮಾಡಿವೆ. ಆದರೂ ರೈತರಿಗೆ ನೋವಾಗಿದ್ದಲ್ಲಿ ವಿಷಾದ ವ್ಯಕ್ತಪಡಿಸುತ್ತೇನೆ. ಅಲ್ಲದೆ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದರು. ಬಳಿಕ ರೈತರು ಪ್ರತಿಭಟನೆ ಹಿಂಪಡೆದರು.
ಸಚಿವರು ಆಗಮಿಸುವ ಮೊದಲು, ನಾವು ರೈತ ಸಂಘದಿಂದ ₹50 ಲಕ್ಷ ಕೊಡುತ್ತೇವೆ. ಸಚಿವರು ಆತ್ಮಹತ್ಯೆ ಮಾಡಿಕೊಳ್ಳಲಿ ಎಂದು ರೈತರು ₹500 ಮೌಲ್ಯದ ನೋಟು ಹಿಡಿದು ಪ್ರತಿಭಟನೆ ಆರಂಭಿಸಿದರು. ಸಚಿವರಿಗೆ ಘೇರಾವ್ ಹಾಕಲು ರೈತರು ಸಜ್ಜಾಗಿದ್ದರು. ರೈತ ಮುಖಂಡರನ್ನು ಸಚಿವರ ಬಳಿ ಮಾತುಕತೆಗೆ ಕರೆದೊಯ್ಯಲು ಪೊಲೀಸರು ಪ್ರಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ಕೊನೆಗೆ ಪ್ರತಿಭಟನಾ ಸ್ಥಳಕ್ಕೆ ಸಚಿವ ಪಾಟೀಲ, ಸ್ಥಳೀಯ ಶಾಸಕರು ಆಗಮಿಸಿ ಮಾತುಕತೆ ನಡೆಸಿದರು.
ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಹಣದ ಆಸೆಗೆ ಯಾವ ರೈತರು ಪ್ರಾಣ ಕಳೆದುಕೊಳ್ಳುವುದಿಲ್ಲ, ಸಾಲಬಾಧೆಯಿಂದ, ಮಾನ-ಮರ್ಯಾದೆಗೆ ಅಂಜಿ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಸರ್ಕಾರದ ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭರವಸೆ ಇಟ್ಟು ನಿಮ್ಮ ಸರ್ಕಾರ ತಂದಿದ್ದೇವೆ, ಮರೆಯಬೇಡಿ ಎಂದು ಎಚ್ಚರಿಕೆ ನೀಡಿದರು.