'ನವೆಂಬರ್ ಕ್ರಾಂತಿ' ವದಂತಿಗಳ ನಡುವೆ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ದಿಢೀರ್ ದೆಹಲಿ ಪ್ರವಾಸವು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಈ ಭೇಟಿಯಲ್ಲಿ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿಯಾಗುವ ನಿರೀಕ್ಷೆಯಿದೆ
ಬೆಳಗಾವಿ (ನ.3): ರಾಜ್ಯ ಸರ್ಕಾರದಲ್ಲಿ ನವೆಂಬರ್ ಕ್ರಾಂತಿ ಎಂಬ ವದಂತಿ ನಡುವೆಯೇ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು 3 ದಿನಗಳ ದೆಹಲಿ ಪ್ರವಾಸಕ್ಕೆ ಹೊರಟಿರುವುದು ರಾಜಕೀಯ ವಲಯದಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ. ಅವರು ಸೋಮವಾರ ದೆಹಲಿಗೆ ಹೋಗುವರು ಎಂದು ಮಾಹಿತಿ ಲಭ್ಯವಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಪ್ರವಾಸ ಮುಂದೂಡಿಕೆ ಆಗಿದೆ. ಮಂಗಳವಾರ ಅವರು ದೆಹಲಿಗೆ ತೆರಳುವ ಸಾಧ್ಯತೆ ಎಂದು ಮೂಲಗಳು ತಿಳಿಸಿವೆ.
ಸತೀಶ್ ಜಾರಕಿಹೊಳಿ ದೆಹಲಿ ಪ್ರವಾಸ ಏಕೆ?
ದೆಹಲಿಯಲ್ಲಿ ಜಾರಕಿಹೊಳಿ ಅವರು ಯಾರನ್ನು ಭೇಟಿ ಮಾಡಲಿದ್ದಾರೆ ಎನ್ನುವ ಮಾಹಿತಿ ಇನ್ನೂ ಅಧಿಕೃತವಾಗಿ ಹೊರಬಿದ್ದಿಲ್ಲ. ಮೂಲಗಳ ಪ್ರಕಾರ ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೇವಾಲ ಅವರನ್ನು ಸೇರಿದಂತೆ ವಿವಿಧ ನಾಯಕರನ್ನು ಭೇಟಿ ಆಗುವ ಸಾಧ್ಯತೆ ಇದೆ. ಆದರೆ ಬಿಹಾರ ಚುನಾವಣೆ ನಡೆಯುತ್ತಿರುವುದರಿಂದ ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಕಷ್ಟ ಸಾಧ್ಯ ಎನ್ನಲಾಗುತ್ತಿದೆ.
ಜಾರಕಿಹೊಳಿ ಮುಂದಿನ ಸಿಎಂ?
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರು ಸಿದ್ದರಾಮಯ್ಯನವರ ನಂತರ ಸತೀಶ್ ಅವರೇ ಅಹಿಂದ ಸಂಘಟನೆಯ ಸಿದ್ಧಾಂತ ಮುಂದುವರಿಸಬೇಕು ಎಂದು ಮಾರ್ಮಿಕವಾಗಿ ನುಡಿದಿದ್ದರು. ಈ ಎಲ್ಲ ಬೆಳವಣಿಗೆ ನಡುವೆಯ ಸತೀಶ್ ಅವರು ದೆಹಲಿಗೆ ಹೊರಟಿರುವುದು ಕುತೂಹಲಕ್ಕೆ ಕಾರಣವಾಗಿದೆ.
