Pralhad Joshi on Siddaramaiah: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ನವೆಂಬರ್-ಡಿಸೆಂಬರ್‌ನಲ್ಲಿ ಕಾಂಗ್ರೆಸ್‌ನಲ್ಲಿ ಕ್ರಾಂತಿಯಾಗಲಿದ್ದು, ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಏಕವಚನ ಬಳಕೆ ಖಂಡಿಸಿದರು.
ಹುಬ್ಬಳ್ಳಿ (ಅ.25): ಕಾಂಗ್ರೆಸ್ಸಿನಲ್ಲಿ ನವೆಂಬರ್-ಡಿಸೆಂಬರ್ ಕ್ರಾಂತಿಯಾಗಲಿದೆ. ಸತೀಶ್ ಜಾರಕಿಹೊಳಿ ಮುಂದಿನ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ತಮ್ಮ ಪುತ್ರ ಯತೀಂದ್ರ ಅವರ ಮೂಲಕ ಹೇಳಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭವಿಷ್ಯ ನುಡಿದಿದ್ದಾರೆ.
ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಸ್ತೆಯಲ್ಲಿರುವ ತಗ್ಗು-ಗುಂಡಿ ಮುಚ್ಚಿಸಲಾಗದ ಸಿದ್ದರಾಮಯ್ಯಗೆ ಕೇಂದ್ರ ಸರ್ಕಾರದ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ಕಾಂಗ್ರೆಸ್‌ಗೆ ಯಾವುದೇ ಉದ್ಯೋಗವಿಲ್ಲದೇ ನಿರುದ್ಯೋಗಿಗಳಾಗಿದ್ದಾರೆ. ಆಡಳಿತಾತ್ಮಕವಾಗಿ ಅಧೋಗತಿಗೆ ಇಳಿದಿರುವ ರಾಜ್ಯ ಸರ್ಕಾರಕ್ಕೆ ರಾಜಕೀಯ ಅಸ್ಥಿರತೆ ಕಾಡುತ್ತಿದೆ ಎಂದು ಟೀಕಿಸಿದರು.
ಸೋನಿಯಾರನ್ನೂ ಏಕವಚನದಲ್ಲಿ ಮಾತಾಡಿಸ್ತಾರಾ?:
ಪ್ರಧಾನಿ, ರಾಷ್ಟ್ರಪತಿ, ಸಂಸದರು, ಅಧಿಕಾರಿಗಳಿಗೆ ಏಕವಚನದಲ್ಲಿ ಮಾತನಾಡುವ ಸಿಎಂ ಸಿದ್ದರಾಮಯ್ಯ ಅವರು, ಸೋನಿಯಾ ಗಾಂಧಿಗೆ ಏಕವಚನದಲ್ಲೇ ಮಾತನಾಡುತ್ತಾರೆಯೇ? ಹಾಗೊಂದು ವೇಳೆ ಮಾತನಾಡಿದರೆ ಮರುಕ್ಷಣವೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕಾಗುತ್ತದೆ ಎಂದು ಜೋಶಿ ಹೇಳಿದರು. ಸಾರ್ವಜನಿಕ ಜೀವನದಲ್ಲಿ ಇರುವವರು, ಅದರಲ್ಲೂ ಎರಡು ಬಾರಿ ಸಿಎಂ, ಪ್ರತಿಪಕ್ಷದ ನಾಯಕರಾದವರು ನಾಲಿಗೆಯ ಮೇಲೆ ಹಿಡಿತವಿಟ್ಟುಕೊಂಡು ಮಾತನಾಡಬೇಕು. ಸಂಸದ ತೇಜಸ್ವಿ ಸೂರ್ಯ ಅವರಿಗೆ ಅವಾಚ್ಯ ಪದ ಬಳಸಿ ಮಾತನಾಡಿದ್ದೀರಿ, ನಿಮಗೆ ನಾಚಿಕೆಯಾಗಬೇಕು. ನಿಮ್ಮ ಹಾಗೆ ಕೆಟ್ಟಭಾಷೆ ಬಳಸಲು ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ ಅವರು ನಮಗೆ ಹೇಳಿ ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.
ಅಡ್ರೆಸ್ ಇಲ್ಲದಂತಾಗುತ್ತೀರಿ:
ಸಿದ್ದರಾಮಯ್ಯನವರಿಗೆ ಒಂದು ಬಾರಿಯೂ ಸಂಸತ್ ಸದಸ್ಯರಾಗುವ ಯೋಗ್ಯತೆಯಿಲ್ಲ. ಸಂಸದ ತೇಜಸ್ವಿ ಸೂರ್ಯ ರಾಜಕಾರಣದಲ್ಲಿ ನಿಮಗಿಂತ ಕಿರಿಯರು, ಒಬ್ಬ ಹಿರಿಯ ರಾಜಕಾರಣಿಯಾಗಿ ಕಿರಿಯರಿಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದೀರಿ. ಈ ಮನಸ್ಥಿತಿಯಲ್ಲಿರುವ ಕಾಂಗ್ರೆಸ್‌ನ್ನು ದೇಶದ ಜನತೆ ಮೂಲೆಗುಂಪು ಮಾಡಿದ್ದಾರೆ. ಇನ್ನಾದರೂ ನಡವಳಿಕೆ ಸುಧಾರಿಸಿಕೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ಅಡ್ರೆಸ್ ಇಲ್ಲದಂತೆ ಆಗುತ್ತಾರೆ ಎಂದು ಟೀಕಿಸಿದರು.
ಶೇ. 273 ಪಟ್ಟು ಅನುದಾನ:
2004ರಿಂದ 2014ರ ವರೆಗೆ ಕೇಂದ್ರದಲ್ಲಿದ್ದ ಕಾಂಗ್ರೆಸ್, ರಾಜ್ಯಕ್ಕೆ ಕೇವಲ ₹81,795 ಕೋಟಿ ಅನುದಾನ ನೀಡಿತ್ತು. ಆದರೆ, 2014-2024ರವರೆಗೆ ನಮ್ಮ ಸರ್ಕಾರ ರಾಜ್ಯಕ್ಕೆ ₹2.93 ಲಕ್ಷ ಕೋಟಿ ಅನುದಾನ ನೀಡಿದೆ. ಅವರ ಅವಧಿಗೆ ಹೋಲಿಸಿದರೆ ಶೇ.273ರಷ್ಟು ಹೆಚ್ಚು ಅನುದಾನ ಒದಗಿಸಿದೆ. ಇದನ್ನು ರಾಜ್ಯದ ಅಭಿವೃದ್ಧಿಯ ಬಗ್ಗೆ ಪ್ರಶ್ನಿಸಿದಾಗ ನೇರವಾಗಿ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡುವ ಕಾಂಗ್ರೆಸ್ ನಾಯಕರು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಜೋಶಿ ಹೇಳಿದರು.
