ನವದೆಹಲಿ (ನ.19):  ಮೇಕೆದಾಟು ಸಮಾನಾಂತರ ಅಣೆಕಟ್ಟು ಯೋಜನೆಗೆ ಬೇಕಿರುವ ಕೇಂದ್ರದ ವಿವಿಧ ಅನುಮತಿಗಳನ್ನು ಶೀಘ್ರ ಒದಗಿಸುವಂತೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್‌ ಶೇಖಾವತ್‌ ಅವರಿಗೆ ಮನವಿ ಮಾಡಿದ್ದಾರೆ.

ಬುಧವಾರ ನವದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್‌ ಶೇಖಾವತ್‌ರನ್ನು ಭೇಟಿ ಮಾಡಿದ ಸಚಿವ ರಮೇಶ ಜಾರಕಿಹೊಳಿ, ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಬೆಂಗಳೂರಿಗೆ 4.75 ಟಿಎಂಸಿ ಕುಡಿಯುವ ನೀರೊದಗಿಸಲು ಮೇಕೆದಾಟು ಸಮಾನಾಂತರ ಅಣೆಕಟ್ಟು ನಿರ್ಮಾಣದ ಅವಶ್ಯಕತೆ ಇದೆ. ಈ ಯೋಜನೆಗಿರುವ ಬಾಕಿ ಅನುಮತಿ ಒದಗಿಸಲು ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಕೃಷ್ಣಾ ಜಲ ವಿವಾದಕ್ಕೆ ಸಂಬಂಧಿಸಿ ತುರ್ತಾಗಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬೇಕು ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಬೇಕೆಂದು ಇದೇ ಸಂದರ್ಭದಲ್ಲಿ ಜಲಶಕ್ತಿ ಸಚಿವರನ್ನು ಕೋರಿದರು.

ಸಿಎಂಗಿಂತ ಮೊದಲೇ ಹೋಗಿ ಕುಂತ ಸಾಹುಕಾರ: ದಿಲ್ಲಿಯಲ್ಲಿ ಜಾರಕಿಹೊಳಿ ನಡೆ ಕುತೂಹಲ ..

ಕೃಷ್ಣಾ ನದಿ ನೀರು ಹಂಚಿಕೆ ವಿಷಯದಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ನಡುವಿನ ಜಲ ವಿವಾದವನ್ನು ಆಯಾ ರಾಜ್ಯಗಳೇ ನ್ಯಾಯಾಧಿಕರಣದಲ್ಲಿ ಬಗೆಹರಿಸಿಕೊಳ್ಳಬೇಕು. ಕರ್ನಾಟಕ ಪಾಲಿನ ನೀರನ್ನು ಯಾವುದೇ ಕಾರಣಕ್ಕೂ ಮರು ಹಂಚಿಕೆ ಮಾಡಬಾರದು. ಜತೆಗೆ ಈ ವಿಷಯದಲ್ಲಿ ಕೇಂದ್ರ ಸರ್ಕಾರ ಯಾವುದೇ ಮಧ್ಯಸ್ಥಿಕೆ ವಹಿಸಬಾರದೆಂದೂ ಒತ್ತಾಯಿಸಿದರು. ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಈ ಸಂದರ್ಭದಲ್ಲಿ ಹಾಜರಿದ್ದರು.