ಪಿಂಚಣಿದಾರರಿಗೆ ಸಂತಸದ ಸುದ್ದಿ..!
ಮುಂದಿನ ತಿಂಗಳು ಮುಖ್ಯಮಂತ್ರಿಗಳಿಂದ ಯೋಜನೆಗೆ ಚಾಲನೆ| 60 ವರ್ಷ ತುಂಬಿದ ಹಿರಿಯ ನಾಗರಿಕರಿಗೆ ಆಧಾರ್ ಕಾರ್ಡ್‌ನಲ್ಲಿರುವ ವಯಸ್ಸಿನ ಆಧಾರದಲ್ಲಿ ಪರಿಗಣಿಸಿ ಪಿಂಚಣಿ| ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿದಂತೆ ವಿವಿಧ ಪಿಂಚಣಿಗಳು ಫಲಾನುಭವಿಗಳಿಗೆ ತಲುಪಲು ವಿಳಂಬ|
ಬೆಂಗಳೂರು(ಜ.13): ಇನ್ನು ಮುಂದೆ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನ ಸೇರಿದಂತೆ ವಿವಿಧ ಸಾಮಾಜಿಕ ಪಿಂಚಣಿ ವೇತನಗಳನ್ನು ಅಂಚೆ ಕಚೇರಿ ಬದಲಿಗೆ ನೇರವಾಗಿ ಬ್ಯಾಂಕ್ ಮೂಲಕ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು. ಮುಂದಿನ ತಿಂಗಳು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಮಂಗಳವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಸಭೆಯಲ್ಲಿ ಮಾತನಾಡಿದ ಅವರು, 60 ವರ್ಷ ತುಂಬಿದ ಹಿರಿಯ ನಾಗರಿಕರಿಗೆ ಆಧಾರ್ ಕಾರ್ಡ್‌ನಲ್ಲಿರುವ ವಯಸ್ಸಿನ ಆಧಾರದಲ್ಲಿ ಪರಿಗಣಿಸಿ ಪಿಂಚಣಿ ನೀಡಲಾಗುತ್ತದೆ. ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿದಂತೆ ವಿವಿಧ ಪಿಂಚಣಿಗಳು ಫಲಾನುಭವಿಗಳಿಗೆ ತಲುಪಲು ವಿಳಂಬವಾಗುತ್ತಿರುವ ಗಮನಕ್ಕೆ ಬಂದಿದೆ.
ಇನ್ನು ಅಂಚೆ ಕಚೇರಿ ಸಿಬ್ಬಂದಿ ಪಿಂಚಣಿ ವಿತರಿಸಲು ಲಂಚ ಕೇಳುತ್ತಿರುವ ಘಟನೆಗಳು ನಡೆಯುತ್ತಿವೆ. ಹೀಗಾಗಿ, ಸಮಸ್ಯೆಗೆ ಪರಿಹಾರ ನೀಡಲು ಸರ್ಕಾರ ಮುಂದಾಗಿದೆ. ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಜಿಲ್ಲಾಡಳಿತಗಳು ಒದಗಿಸಬೇಕು ಎಂದು ಹೇಳಿದರು.
ಪಿಂಚಣಿದಾರರೇ ಇಲ್ಲೊಮ್ಮೆ ಗಮನಿಸಿ : ನಿಮಗಿಲ್ಲಿದೆ ಗುಡ್ ನ್ಯೂಸ್
ಈ ವೇಳೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ, ಪಿಂಚಣಿ ಮಾಹಿತಿ ಕಲೆ ಹಾಕುತ್ತಿದ್ದೇವೆ. ಮುಂದಿನ ಎರಡು ತಿಂಗಳಲ್ಲಿ ಸಂಪೂರ್ಣ ಮಾಹಿತಿ ಸಲ್ಲಿಸಲಾಗುವುದು ಎಂದರು.