ವಿಧಾನಸಭೆ (ಡಿ.10):  ಇನ್ನು ಮುಂದೆ ಪಿಂಚಣಿ ಹಣವನ್ನು ಅಂಚೆ ಕಚೇರಿ ಮೂಲಕ ನೀಡುವ ಬದಲು ನೇರವಾಗಿ ಅರ್ಹರ ಬ್ಯಾಂಕ್‌ ಖಾತೆಗೆ ಜಮೆ ಮಾಡುವ ವ್ಯವಸ್ಥೆ ಜಾರಿ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಅಕ್ರಮಗಳಿಗೆ ಕಡಿವಾಣ ಹಾಕಲು ಆಧಾರ್‌ ಲಿಂಕ್‌ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ.

 ಬುಧವಾರ ಪೂರಕ ಅಂದಾಜು ಮೇಲಿನ ಚರ್ಚೆ ವೇಳೆ ಮಾತನಾಡಿ ಅವರು, ಪಿಂಚಣಿ ಪಡೆಯುತ್ತಿರುವವರ ಆಧಾರ್‌ ಕಾರ್ಡ್‌ ಅನ್ನು ಬ್ಯಾಂಕ್‌ಗೆ ಜೋಡಣೆ ಮಾಡುವ ಕೆಲಸ ನಡೆಯುತ್ತಿದೆ. ಅರ್ಹ ಫಲಾನುಭವಿಗಳಿಗೆ ಪಿಂಚಣಿ ಸರಿಯಾಗಿ ತಲುಪುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. 
ಮಧ್ಯವರ್ತಿಗಳು ಫಲಾನುಭವಿಗಳ ಹೆಸರಲ್ಲಿ ನಕಲಿ ಕಾರ್ಡ್‌ಗಳನ್ನು ತಯಾರಿಸಿ ಪಿಂಚಣಿ ಪಡೆಯುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಇದಕ್ಕೆ ಕಡಿವಾಣ ಹಾಕಲು ಆಧಾರ್‌ ಲಿಂಕ್‌ ಮಾಡಲಾಗುತ್ತಿದೆ. ಸುಮಾರು 4 ಲಕ್ಷದಷ್ಟುನಕಲಿ ಕಾರ್ಡ್‌ಗಳು ಪತ್ತೆಯಾಗಿವೆ. ಆಧಾರ್‌ ಲಿಂಕ್‌ ಮಾಡಿದರೆ ನಕಲಿ ಕಾರ್ಡ್‌ಗಳ ಹಾವಳಿ ನಿಯಂತ್ರಣಕ್ಕೆ ಬರಲಿದೆ ಎಂದು ಹೇಳಿದರು.

60 ವರ್ಷ ಮೇಲ್ಪಟ್ಟವರಿಗೆ ಇಲ್ಲಿದೆ ಗುಡ್ ನ್ಯೂಸ್ ..

ಗ್ರಾಮ ಪಂಚಾಯಿತಿ ಚುನಾವಣೆ ಇರುವ ಕಾರಣ ಆಧಾರ್‌ ಲಿಂಕ್‌ ಕಾರ್ಯಕ್ಕೆ ತಾತ್ಕಾಲಿಕ ಹಿನ್ನಡೆಯಾಗಿದೆ. ಚುನಾವಣೆ ಮುಗಿಯುತ್ತಿದ್ದಂತೆ ಆಧಾರ್‌ ಲಿಂಕ್‌ ಕಾರ್ಯವನ್ನು ಚುರುಕುಗೊಳಿಸಲಾಗುವುದು. ಪಿಂಚಣಿಯನ್ನು ಪಡೆಯಲು ಅಂಚೆ ಕಚೇರಿಗೆ ಅಲೆದಾಡಬೇಕಾಗಿದೆ. ಇದನ್ನು ತಪ್ಪಿಸಲು ನೇರವಾಗಿ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗುತ್ತದೆ. ಅಲ್ಲದೇ, ನೇರ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಮಾಡಿದರೆ ಅನರ್ಹ ಫಲಾನುಭವಿಗಳನ್ನು ಸುಲಭವಾಗಿ ಗುರುತಿಸಬಹುದು ಎಂದರು.

ಈ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕಳೆದ 3-4 ತಿಂಗಳಿನಿಂದ ಪಿಂಚಣಿ ಮೊತ್ತ ಸರ್ಕಾರ ನೀಡಿಲ್ಲ ಎಂಬ ಆರೋಪ ಇದೆ. ಇದರಿಂದ ಪಿಂಚಣಿ ಮೇಲೆ ಅವಲಂಬಿತರಾಗಿರುವವರಿಗೆ ಜೀವನ ನಡೆಸುವುದು ಕಷ್ಟವಾಗಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ಅಕ್ಟೋಬರ್‌ವರೆಗೆ 9 ಲಕ್ಷ ಮಂದಿಗೆ ಪಿಂಚಣಿಯನ್ನು ತಲುಪಿಸಲಾಗಿದೆ ಎಂದು ಮಾಹಿತಿ ನೀಡಿದರು. ಸಿದ್ದರಾಮಯ್ಯ ಮಾತನಾಡಿ, ನವೆಂಬರ್‌ ಮತ್ತು ಡಿಸೆಂಬರ್‌ ತಿಂಗಳ ಪಿಂಚಣಿಯನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕು. ಪ್ರತಿ ತಿಂಗಳು ಅವರಿಗೆ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.