* ಭೂ ಕಂದಾಯ ಕಾಯ್ದೆ ತಿದ್ದುಪಡಿಗೆ ನಿರ್ಧಾರ* ಫೋನ್ ಮಾಡಿ ಪಿಂಚಣಿಗೆ ಅರ್ಜಿ ಸಲ್ಲಿಸಲು ‘ಹಲೋ, ಕಂದಾಯ ಸಚಿವರೇ’ ಸಹಾಯವಾಣಿ* ವಿನೂತನ ಕಾರ್ಯಕ್ರಮಕ್ಕೆ ಶೀಘ್ರ ಸಿಎಂ ನಿಶಾನೆ
ಬೆಂಗಳೂರು(ಮೇ.01): ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬಳಸಲು ಭೂಮಾಲೀಕರಿಗೆ ಮೂರು ದಿನದಲ್ಲಿ ಅವಕಾಶ ಕಲ್ಪಿಸಲು ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ಮತ್ತು ರಾಜ್ಯದ ಒಂಭತ್ತು ವಿವಿಧ ಮಾಸಿಕ ಪಿಂಚಣಿಗಳ ಅರ್ಹರಿಗೆ 72 ಗಂಟೆಯಲ್ಲಿ ಮನೆ ಬಾಗಿಲಿಗೆ ಪಿಂಚಣಿ ತಲುಪಿಸಲು ದೇಶದಲ್ಲಿಯೇ ಮೊದಲ ಬಾರಿಗೆ ‘ಹಲೋ, ಕಂದಾಯ ಸಚಿವರೇ’ ಸಹಾಯವಾಣಿ ಕಾರ್ಯಕ್ರಮವನ್ನು ಶೀಘ್ರದಲ್ಲಿಯೇ ಅನುಷ್ಠಾನಗೊಳಿಸಲು ಸರ್ಕಾರ ತೀರ್ಮಾನಿಸಿದೆ.
ಶನಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಂದಾಯ ಸಚಿವ ಆರ್.ಅಶೋಕ್(R Ashok) ಅವರು, ಇಲಾಖೆಯಲ್ಲಿ ಕೈಗೊಂಡ ಸುಧಾರಣಾ ಕ್ರಮಗಳ ಕುರಿತು ವಿಸ್ತೃತವಾಗಿ ಮಾಹಿತಿ ನೀಡಿದರು. ದೇಶದಲ್ಲಿಯೇ ಮೊದಲ ಬಾರಿಗೆ ದೂರವಾಣಿ ಮೂಲಕವೇ ಪಿಂಚಣಿ ಕೋರಿಕೆ ಸ್ವೀಕರಿಸಿ 72 ಗಂಟೆಯಲ್ಲಿ ನವೋದಯ ಮೊಬೈಲ್ ಆ್ಯಪ್(Mobile App) ಆಧರಿಸಿ ಪಿಂಚಣಿ(Pension) ಮಂಜೂರಾತಿ ಮಾಡುವ ವಿನೂತನ ಕಾಗದ ರಹಿತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿಗಳು ಶೀಘ್ರದಲ್ಲಿಯೇ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಲಿದ್ದು, ಆ ಸಮಯದಲ್ಲಿ ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದರು.
ಒತ್ತುವರಿ ಭೂಮಿ ಗುತ್ತಿಗೆ ನೀಡಲು ನಾಲ್ಕು ಹಂತದ ಸ್ಲ್ಯಾಬ್, ಸಚಿವ ಅಶೋಕ್
ಕುಟುಂಬದ ವಾರ್ಷಿಕ ಆದಾಯ 32 ಸಾವಿರ ರು.ಗಿಂತ ಕಡಿಮೆ ಇರುವ ವೃದ್ಧರು, ಅಂಗವಿಕಲರು, ವಿಧವೆಯರು ಮತ್ತು ಅವಿವಾಹಿತ ಅಥವಾ ವಿಚ್ಛೇದಿತ ಮಹಿಳೆಯರು ಮಾಸಿಕ ಪಿಂಚಣಿ ಸೌಲಭ್ಯಕ್ಕಾಗಿ ದೂರವಾಣಿ ಮೂಲಕ ಕೋರಿಕೆ ಸಲ್ಲಿಸಬಹುದು. ಆಧಾರ್ ಸಂಖ್ಯೆ ಒದಗಿಸಿ ಪಿಂಚಣಿ ಸೌಲಭ್ಯಕ್ಕೆ ಮನವಿ ಮಾಡಬಹುದಾಗಿದೆ. ದೂರವಾಣಿ ಮೂಲಕ ಸ್ವೀಕರಿಸಲಾದ ಕೋರಿಕೆ ಮೇರೆಗೆ ಗ್ರಾಮಲೆಕ್ಕಾಧಿಕಾರಿಗಳು ಅರ್ಜಿದಾರರ ಮನೆಬಾಗಿಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನವೋದಯ ಮೊಬೈಲ್ ಆ್ಯಪ್(Navodaya Mobile App) ಮೂಲಕ ಅರ್ಜಿದಾರರ ಮಾಹಿತಿ ನಮೂದಿಸುತ್ತಾರೆ. ಅರ್ಜಿದಾರರು ಕಡ್ಡಾಯವಾಗಿ ಆಧಾರ್ ಕಾರ್ಡ್, ಬ್ಯಾಂಕ್/ಅಂಚೆ ಖಾತೆ ವಿವರ, ವಿಳಾಸ ಮತ್ತು ವಯಸ್ಸಿಗೆ ಸಂಬಂಧಿಸಿದ ದಾಖಲಾತಿಗಳನ್ನು ಒದಗಿಸಬೇಕು. ಅರ್ಹರಿಗೆ 72 ಗಂಟೆಯೊಳಗೆ ಉಪತಹಸೀಲ್ದಾರರಿಂದ ಪಿಂಚಣಿ ಮಂಜೂರಾತಿ ಅನುಮೋದನೆ ನೀಡಲಾಗುತ್ತದೆ ಎಂದು ವಿವರಿಸಿದರು.
ಮೂರೇ ದಿನದಲ್ಲಿ ಭೂ ಪರಿವರ್ತನೆ:
ಕೃಷಿ ಭೂಮಾಲೀಕರು ತಮ್ಮ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬಳಸಿಕೊಳ್ಳಲು ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ. ಭೂ ಮಾಲೀಕರ ಸ್ವಯಂ ಘೋಷಿತ ಪ್ರಮಾಣ ಪತ್ರದ ಆಧಾರದಲ್ಲಿ ಮೂರೇ ದಿನದಲ್ಲಿ ಭೂ ಪರಿವರ್ತನೆ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ. ಸದ್ಯಕ್ಕೆ ಭೂಪರಿವರ್ತನೆಗೆ 6-8 ತಿಂಗಳು ಕಾಯಬೇಕಾಗಿದೆ. ಇದನ್ನು ತಪ್ಪಿಸಲು ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ. ಹಸಿರು ವಲಯದಲ್ಲಿರುವ ಭೂಮಿಯ ಪರಿವರ್ತನೆಗೆ ಅವಕಾಶ ಇಲ್ಲ. ಸರ್ಕಾರಿ, ಜಮೀನು, ಅರಣ್ಯ ಪ್ರದೇಶ, ಎಸ್‌ಸಿ/ಎಸ್‌ಟಿ ಪರಭಾರೆ ನಿಷೇಧ ಕಾಯ್ದೆ ವ್ಯಾಪ್ತಿಯಲ್ಲಿನ ಜಮೀನುಗಳ ಭೂ ಪರಿವರ್ತನೆಗೂ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
Grama Vastavya: 72 ಗಂಟೆಯಲ್ಲಿ ಪಿಂಚಣಿ ಪತ್ರ, ದೇಶದಲ್ಲೇ ಕರ್ನಾಟಕ ಮೊದಲು: ಅಶೋಕ್
ಸ್ವಾವಲಂಬಿ ಯೋಜನೆ:
ನಾಗರಿಕರು ತಮ್ಮ ಸ್ವಂತ ಜಮೀನಿನ(Land) ನಕ್ಷೆಯನ್ನು ಇನ್ನು ಮುಂದೆ ‘ಸ್ವಾವಲಂಬಿ’ ಯೋಜನೆ ಮೂಲಕ ಸಮೀಕ್ಷೆ ಮಾಡಿ ಸಿದ್ಧಪಡಿಸಿಕೊಳ್ಳುವ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದ್ದು, ಈ ಮೂಲಕ ರೈತರು ಮತ್ತು ನಾಗರಿಕರು ತಮ್ಮ ಸ್ವಂತ ಜಮೀನಿನ 11 ಇ-ಸ್ಕೆಚ್, ಪೋಡಿ, ಭೂ ಪರಿವರ್ತನಾ ನಕ್ಷೆಗಳನ್ನು ತಾವೇ ತಯಾರಿಸಿಕೊಳ್ಳಬಹುದಾಗಿದೆ ಎಂದರು.
3.58 ಲಕ್ಷ ಅನರ್ಹರ ಪತ್ತೆ, 430 ಕೋಟಿ ರು. ಪಿಂಚಣಿ ಉಳಿತಾಯ: ಅಶೋಕ್
ಸಾಮಾಜಿಕ ಭದ್ರತಾ ಯೋಜನೆಯಡಿ ಕಾನೂನುಬಾಹಿರವಾಗಿ ಪಿಂಚಣಿ ಪಡೆಯುತ್ತಿದ್ದ 3.58 ಲಕ್ಷ ಅನರ್ಹ ಪಿಂಚಣಿದಾರರನ್ನು ಪತ್ತೆ ಹಚ್ಚಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಪಿಂಚಣಿ ಯೋಜನೆಗಳಲ್ಲಿ ಅರ್ಹತೆ ಇಲ್ಲದಿರುವವರು ಪಡೆಯುತ್ತಿರುವುದು ಗಮನಕ್ಕೆ ಬಂದ ಬಳಿಕ ಪತ್ತೆ ಮಾಡಿ ಸೌಲಭ್ಯಗಳನ್ನು ರದ್ದುಪಡಿಸಲಾಗಿದೆ. ಶ್ರೀಮಂತರು, ಉದ್ಯೋಗಿಗಳು ಅಕ್ರಮವಾಗಿ ಪಿಂಚಣಿ ಪಡೆಯುತ್ತಿರುವುದು ಗೊತ್ತಾಗಿದೆ. ಮೃತಪಟ್ಟವರ ಹೆಸರಲ್ಲಿ ಹಲವು ವರ್ಷಗಳಿಂದ ಪಿಂಚಣಿ ಪಾವತಿಯಾಗುತ್ತಿರುವುದು ಬೆಳಕಿಗೆ ಬಂದಿದೆ. ಅನರ್ಹರನ್ನು ರದ್ದು ಮಾಡಿದ್ದರಿಂದ ಸರ್ಕಾರ ಬೊಕ್ಕಸಕ್ಕೆ 430 ಕೋಟಿ ರು. ಉಳಿತಾಯವಾಗಲಿದೆ ಎಂದು ತಿಳಿಸಿದರು.
