ಕೊಪ್ಪಳದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು 'ಶುಭವಾಗಲಿ' ಎಂದು ಬರೆಯಲು ಪರದಾಡಿದ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಚಿವರಿಗೆ ಕನ್ನಡ ಬರೆಯಲು ಬಾರದೆ ಇರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಪ್ಪಳ (ಫೆ.2): ಶಿಕ್ಷಣ ಸಚಿವರಿಗೆ ಕನ್ನಡ ಬರೋಲ್ಲ ಎಂದು ಕನ್ನಡಿಗರು ಟೀಕಿಸುತ್ತಿದ್ದರು. ಆದರೆ ಇದೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೂ ಸಹ ಕನ್ನಡ ಬರೆಯಲು ಬರೋದಿಲ್ಲ ಎಂಬುದು ಬಯಲಾಗಿದೆ.

 ನಿನ್ನೆ ಕೊಪ್ಪಳ ಜಿಲ್ಲೆಯ ಕಾರಟಗಿ ಜೆಪಿ ನಗರದ ಅಂಗನವಾಡಿಗೆ ಸಚಿವ ಶಿವರಾಜ ತಂಗಡಗಿ ಭೇಟಿ ನೀಡಿದ್ದರು. ಈ ವೇಳೆ ಅಂಗನವಾಡಿ ಮಕ್ಕಳಿಗೆ 'ಶುಭವಾಗಲಿ' ಎಂದು ಬರೆಯಲು ಮುಂದಾಗಿದ್ದಾರೆ. ಆದರೆ ಏನು ಬರೆಯಬೇಕು ತೋಚದೇ ಲಾಸ್ಟ್ ಬೆಂಚ್ ಸ್ಟೂಡೆಂಟ್ ರೀತಿ ತಂಗಡಗಿ ಪರದಾಡಿದ್ದಾರೆ. ಆಗ ಹಿಂದೆ ನಿಂತ ಬೆಂಬಲಿಗರು ಹೇಗೆ ಬರೆಯಬೇಕು ಎಂದು ಹೇಳಿದ ಬಳಿಕ ಕೊನೆಗೂ 'ಶುಭವಾಗಲಿ' ಎಂದು ಬರೆದಿದ್ದಾರೆ. 

ಇದನ್ನೂ ಓದಿ:ಪ್ರಿಯಾಂಕಾ ಗಾಂಧಿಯವರನ್ನ ಕಿತ್ತೂರು ರಾಣಿ ಚೆನ್ನಮ್ಮಗೆ ಹೋಲಿಸಿದ್ರೆ ತಪ್ಪೇನು? : ಸಚಿವ ಶಿವರಾಜ ತಂಗಡಗಿ

ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಅತ್ತ ಶಿಕ್ಷಣ ಸಚಿವರಿಗೆ ಕನ್ನಡ ಬರೋಲ್ಲ, ಇತ್ತ ಕನ್ನಡ ಸಂಸ್ಕೃತಿ ಇಲಾಖೆ ಸಚಿವರಿಗೇ ಕನ್ನಡ ಬರೆಯೋದಕ್ಕೆ ಬರೋದಿಲ್ಲ ಇಂಥವರಿಂದಲೇ ನಮ್ಮ ಕನ್ನಡ ಈ ಸ್ಥಿತಿಗೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯನವರೇ ಮೊದಲು ನಿಮ್ಮ ಸಚಿವರಿಗೆ ಕನ್ನಡ ಕಲಿಸಿ:

ಶುಭವಾಗಲಿ ಅಂತಾ ಬರೆಯಲು ಪರದಾಡುತ್ತಿರುವ ಕನ್ನಡ ಸಚಿವ ಶಿವರಾಜ ತಂಗಡಗಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಕನ್ನಡಿಗರು ಕೆರಳಿದ್ದಾರೆ. ಇಂಥವರಿಂದಲೇ ನಮ್ಮ ಕನ್ನಡ, ನಾಡು, ನುಡಿ ಈ ಸ್ಥಿತಿಗೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕನ್ನಡಿಗರು, ಸಿಎಂ ಸಿದ್ದರಾಮಯ್ಯರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಕನ್ನಡ ಓದಲು ಬರೆಯಲು ಬಾರದ ಇಂಥ ಸಚಿವರಿಗೆ 'ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸ್ಥಾನ ಯಾವ ಪುರುಷಾರ್ಥಕ್ಕೆ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ. 

ಮತ್ತೊಬ್ಬ ಬಳಕೆದಾರ, ಸಿದ್ದರಾಮಯ್ಯನವರೇ ನೀವು ಕನ್ನಡ ಮೇಷ್ಟು ರೀತಿ ವಿರೋಧ ಪಕ್ಷಗಳಿಗೆ ಕನ್ನಡ ವ್ಯಾಕರಣ ತಿಳಿಸಿಕೊಟ್ಟಿದ್ದು ಇದೆ. ಆದರೆ ನಿಮ್ಮದೇ ಪಕ್ಷದ ಈ ಸಚಿವರಿಗೆ ಸರಿಯಾಗಿ ಸರಳ ಕನ್ನಡವೂ ಬರೆಯಲು ಬರೋದಿಲ್ಲ ಎಂದರೆ ಹೇಗೆ? ಮೊದಲು ನಿಮ್ಮ ಸಚಿವರಿಗೆ ಕನ್ನಡ ಕಲಿಸಿ ಇಲ್ಲವೇ ಕನ್ನಡ ಓದು ಬರಹ ಬಲ್ಲವರಿಗೆ ಇಂಥ ಸಚಿವ ಸ್ಥಾನ ನೀಡಿ ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯಗೆ ಕನ್ನಡರಾಮಯ್ಯ ಎಂದು ಹೆಸರಿಡಬೇಕು: ಸಚಿವ ಶಿವರಾಜ ತಂಗಡಗಿ

ಈ ಹಿಂದೆ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಕನ್ನಡ ಬರುವುದಿಲ್ಲ ಟ್ರೋಲ್ ಮಾಡಿದ್ದ ಕನ್ನಡಿಗರು. ರಾಜ್ಯ ಸರ್ಕಾರಕ್ಕೆ ಮುಜುಗರ ಸೃಷ್ಟಿಸಿತ್ತು. ಇದೀಗ ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೆ 'ಶುಭವಾಗಲಿ' ಎಂದು ಬರೆಯಲು ಪರದಾಡಿದ್ದಾರೆ. ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಕನ್ನಡಿಗರು ಸಚಿವರ ವಿರುದ್ಧ ಹಿಗ್ಗಾಮುಗ್ಗಾ ಝಾಡಿಸುತ್ತಿದ್ದಾರೆ.