ಕರ್ನಾಟಕಕ್ಕೆ ಬಸವಣ್ಣನ ನಾಡು ಎಂದು ಹೆಸರಿಟ್ಟರೆ ತಪ್ಪಿಲ್ಲ: ಎಂಬಿಪಾ
ಕರ್ನಾಟಕವನ್ನು ಬಸವಣ್ಣನವರು ಅನುಭವ ಮಂಟಪ ಹಾಗೂ ಸಾಮಾಜಿಕ ಪರಿಕಲ್ಪನೆ ನೀಡಿದವರು. ಜಗತ್ತಿನ ಮೊದಲ ಸಂಸತ್ ಅವರಿಂದ ಪ್ರಾರಂಭವಾಯಿತು. ಇನ್ನು ಇಡೀ ಮೆಟ್ರೋ ಸಂಪರ್ಕ ಜಾಲಕ್ಕೂ ಬಸವಣ್ಣ ಎಂದು ಹೆಸರಿಡುವ ಬೇಡಿಕೆ ಇದೆ. ವಿಜಯಪುರ ವಿಮಾನ ನಿಲ್ದಾಣಕ್ಕೂ ಬಸವಣ್ಣನ ಹೆಸರಿಡಬೇಕು ಎಂಬ ವಾದವಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು ಎಂದ ಎಂ.ಬಿ.ಪಾಟೀಲ್

ಬೆಂಗಳೂರು(ಅ.28): ‘ಕರ್ನಾಟಕ ರಾಜ್ಯಕ್ಕೆ ಬಸವಣ್ಣನ ನಾಡು ಎಂದು ಹೆಸರಿಡುವ ಬಗ್ಗೆ ಬೇಡಿಕೆ ಬರುತ್ತಿರುವುದರಲ್ಲಿ ತಪ್ಪೇನೂ ಇಲ್ಲ. ಇಡೀ ವಿಶ್ವಕ್ಕೆ ಅನುಭವ ಮಂಟಪದ ಮೂಲಕ ಸಂಸತ್‌ನ ಪರಿಕಲ್ಪನೆ ನೀಡಿದವರು ಬಸವಣ್ಣ. ಹೀಗಾಗಿ ಕರ್ನಾಟಕ ರಾಜ್ಯಕ್ಕೆ ಬಸವಣ್ಣನ ನಾಡು ಎಂಬ ಹೆಸರಿಡುವ ಬೇಡಿಕೆ ಸ್ವಾಭಾವಿಕ, ಇದರಲ್ಲಿ ತಪ್ಪೇನೂ ಇಲ್ಲ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕವನ್ನು ಬಸವಣ್ಣನವರು ಅನುಭವ ಮಂಟಪ ಹಾಗೂ ಸಾಮಾಜಿಕ ಪರಿಕಲ್ಪನೆ ನೀಡಿದವರು. ಜಗತ್ತಿನ ಮೊದಲ ಸಂಸತ್ ಅವರಿಂದ ಪ್ರಾರಂಭವಾಯಿತು. ಇನ್ನು ಇಡೀ ಮೆಟ್ರೋ ಸಂಪರ್ಕ ಜಾಲಕ್ಕೂ ಬಸವಣ್ಣ ಎಂದು ಹೆಸರಿಡುವ ಬೇಡಿಕೆ ಇದೆ. ವಿಜಯಪುರ ವಿಮಾನ ನಿಲ್ದಾಣಕ್ಕೂ ಬಸವಣ್ಣನ ಹೆಸರಿಡಬೇಕು ಎಂಬ ವಾದವಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು ಎಂದರು.
ಸಚಿವ ಸಂಪುಟ ಬದಲಾವಣೆ ಹೈಕಮಾಂಡ್ ನಿರ್ಧಾರ: ಸಚಿವ ಎಂ.ಬಿ.ಪಾಟೀಲ್
ವಿಜಯಪುರ ಜಿಲ್ಲೆ ಹೆಸರು ಬದಲು ಬೇಡಿಕೆ ಬಗ್ಗೆ ಸಿಎಂ ಜತೆ ಚರ್ಚೆ:
ವಿಜಯಪುರ ಜಿಲ್ಲೆ ಹೆಸರು ಬದಲಿಸಿ ಬಸವೇಶ್ವರ ಜಿಲ್ಲೆ ಎಂಬ ಹೆಸರಿಡಬೇಕು ಎಂಬ ಬೇಡಿಕೆ ಇದೆ. ವಾಸ್ತವವಾಗಿ 11ನೇ ಶತಮಾನದ ಹೊಯ್ಸಳರ ಕಾಲದಲ್ಲಿ ಜಿಲ್ಲೆಗೆ ವಿಜಯಪುರ ಎಂಬ ಹೆಸರಿತ್ತು. ಹೀಗಾಗಿ ಬಿಜಾಪುರ ಎಂದಿದ್ದ ಹೆಸರನ್ನು ವಿಜಯಪುರ ಎಂದು ಬದಲಿಸಲಾಯಿತು ಎಂದರು.
ಇದೀಗ ಬಸವಣ್ಣನ ಜನ್ಮ ಸ್ಥಳ ಆಗಿರುವುದರಿಂದ ಬಸವೇಶ್ವರ ಜಿಲ್ಲೆಯಾಗಲಿ ಎಂದು ಕೆಲವರು ಬೇಡಿಕೆ ಇಟ್ಟಿದ್ದಾರೆ. ಬೇಡಿಕೆ ಇಟ್ಟಿರುವುದರಲ್ಲಿ ತಪ್ಪೇನೂ ಇಲ್ಲ. ಆದರೆ ಜಿಲ್ಲೆಯ ಹೆಸರನ್ನು ಪದೇ ಪದೇ ಬದಲಿಸುವುದಕ್ಕೆ ತಾಂತ್ರಿಕ ಕಾರಣಗಳಿಂದ ಅಡಚಣೆಗಳು ಬರುವ ಸಾಧ್ಯತೆಯಿದೆ. ಕೆಲವೊಮ್ಮೆ ಹೆಸರು ಬದಲಾವಣೆ ಗೊಂದಲಗಳಿಗೆ ಎಡೆ ಮಾಡಿಕೊಡಬಹುದು. ಹೀಗಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಎಂ.ಬಿ.ಪಾಟೀಲ್ ತಿಳಿಸಿದರು.