ಸದ್ಯದಲ್ಲೇ ಅರ್ಜಿ ಸಲ್ಲಿಕೆಗೆ ಅವಕಾಶ ನೀಡುತ್ತೇವೆ. ಆಗಸ್ಟ್ 17 ಅಥವಾ 18 ರಂದು ಯೋಜನೆಗೆ ಚಾಲನೆ ನೀಡುತ್ತೇವೆ. ಅರ್ಜಿ ಸಲ್ಲಿಕೆಗೆ ಅಂತಿಮ ಗಡುವು ಎಂಬುದು ಇರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಹೀಗಾಗಿ ಇದು ನಿರಂತರ ಪ್ರಕ್ರಿಯೆ ಎಂದು ಸ್ಪಷ್ಟಪಡಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಬೆಂಗಳೂರು(ಜೂ.17): ಗೃಹ ಲಕ್ಷ್ಮಿ ಯೋಜನೆಯನ್ನು ಯಾವುದೇ ಗೊಂದಲಗಳಿಲ್ಲದೆ ಅನುಷ್ಠಾನಗೊಳಿಸಲು ಅಗತ್ಯ ಸಿದ್ಧತೆ ನಡೆಸುತ್ತಿದ್ದು 3-4 ದಿನಗಳಲ್ಲಿ ರೂಪುರೇಷೆ ಅಂತಿಮಗೊಳಿಸುತ್ತೇವೆ. ಆ.17 ಅಥವಾ 18 ರಂದು ಯೋಜನೆಗೆ ಚಾಲನೆ ನೀಡುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಪ್ರತಿ ಗ್ರಾಮದಲ್ಲೂ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಪ್ರಜಾಪ್ರತಿನಿಧಿ ಒಬ್ಬರನ್ನು ಒಳಗೂಡಿಸಿಕೊಳ್ಳಲು ಚಿಂತಿಸಲಾಗಿದೆ. ಅವರ ಮೂಲಕ ಮನೆಯೊಡತಿಯರಿಗೆ ಜಾಗೃತಿ ಮೂಡಿಸಿ ಯಾವುದೇ ಗೊಂದಲವಿಲ್ಲದೆ ಅರ್ಜಿ ಸಲ್ಲಿಸುವಂತೆ ಮಾಡಬೇಕು. ಅದಕ್ಕೆ ವ್ಯಕ್ತಿಗೆ ಸರ್ಕಾರದಿಂದ ಇಂತಿಷ್ಟು ಸೇವಾ ಶುಲ್ಕ ಪಾವತಿಸಬೇಕು ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಎಲ್ಲಾ ವಿಚಾರಗಳನ್ನು ಅಂತಿಮಗೊಳಿಸಿದ ಬಳಿಕ ಸದ್ಯದಲ್ಲೇ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುವುದು ಎಂದು ಹೇಳಿದರು.
ಗ್ಯಾರಂಟಿ ಜಾರಿ ಮುಂದೂಡಿಕೆ, ನಾಳೆ ನಿಮ್ಮ ಮನೆಗೆ ಬರಲ್ಲ ಗೃಹಲಕ್ಷ್ಮೀ!
ಅರ್ಜಿ ಸಲ್ಲಿಕೆಗೆ ಅಂತಿಮ ಗಡುವು ಇಲ್ಲ:
ಬೆಂಗಳೂರಿನಲ್ಲಿ ಶುಕ್ರವಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಗೃಹ ಲಕ್ಷ್ಮಿ ಯೋಜನೆ ಕುರಿತ ಸಭೆ ಬಳಿಕ ಮಾತನಾಡಿದ ಅವರು, ಸದ್ಯದಲ್ಲೇ ಅರ್ಜಿ ಸಲ್ಲಿಕೆಗೆ ಅವಕಾಶ ನೀಡುತ್ತೇವೆ. ಆಗಸ್ಟ್ 17 ಅಥವಾ 18 ರಂದು ಯೋಜನೆಗೆ ಚಾಲನೆ ನೀಡುತ್ತೇವೆ. ಅರ್ಜಿ ಸಲ್ಲಿಕೆಗೆ ಅಂತಿಮ ಗಡುವು ಎಂಬುದು ಇರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಹೀಗಾಗಿ ಇದು ನಿರಂತರ ಪ್ರಕ್ರಿಯೆ ಎಂದು ಸ್ಪಷ್ಟಪಡಿಸಿದರು.
ಗೃಹ ಲಕ್ಷ್ಮಿ ಯೋಜನೆ ಬಹಳ ಮಹತ್ವ ಯೋಜನೆ ಹೀಗಾಗಿ ಯಾವುದೇ ಗೊಂದಲ ಇಲ್ಲದೇ ಜನರಿಗೆ ಮನೆ ಬಾಗಿಲಿಗೆ ತಲುಪಿಸಬೇಕು. 13 ಸಾವಿರ ಸೇವಾ ಕೇಂದ್ರಗಳನ್ನು ಯಾವ ರೀತಿ ಬಳಕೆ ಮಾಡಬೇಕು. ಯೋಜನೆಗೆ ಚಾಲನೆ ನೀಡುವ ಮೊದಲು ಜಾಹಿರಾತು ಮೂಲಕ ಎಲ್ಲಾ ಜನರಿಗೂ ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ವಿಳಂಬವೇಕೆ?
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶುಕ್ರವಾರವೇ ಶಕ್ತಿ ಭವನದಲ್ಲಿ ಗೃಹ ಲಕ್ಷ್ಮಿ ಯೋಜನೆ ಚಾಲನೆ ಆಗಬೇಕಿತ್ತು. ಆದರೆ ಮನೆಯೊಡತಿ ಬ್ಯಾಂಕ್ ಖಾತೆ ಸಂಖ್ಯೆ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ನಡೆದಿದೆ. ಬ್ಯಾಂಕ್ ಖಾತೆ ಹಾಗೂ ಆಧಾರ್ ಲಿಂಕ್‌ನಲ್ಲಿ ಉದ್ಭವಿಸಬಹುದಾದ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿದೆ. ನಮ್ಮ ಆಸೆ ಮನೆಯ ಯಜಮಾನಿಗೆ ದುಡ್ಡು ತಲುಪಬೇಕು. ಇದನ್ನು ಹೊರತುಪಡಿಸಿ ವಿಳಂಬಕ್ಕೆ ಬೇರೆ ಕಾರಣಗಳಿಲ್ಲ ಎಂದು ಸ್ಪಷ್ಟಪಡಿಸಿದರು.
ಗೃಹಜ್ಯೋತಿ ಯೋಜನೆ ಯಾರಿಗಿದೆ..ಯಾರಿಗಿಲ್ಲ. ಬಾಡಿಗೆದಾರನಿಗೂ ಸಿಗುತ್ತಾ ಬಂಪರ್..?
ತಡವಾದರೂ ಪಾರದರ್ಶಕತೆಗೆ ಒತ್ತು- ಡಿಕೆಶಿ:
ಸಭೆ ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್, ಸೇವಾಸಿಂಧು ವೆಬ್‌ಸೈಟ್‌ನಲ್ಲಿ ಒಂದೇ ದಿನ ಲಕ್ಷಾಂತರ ಅರ್ಜಿ ಸಲ್ಲಿಸಲಾಗುವುದಿಲ್ಲ. ಪ್ರತಿ ಪಂಚಾಯ್ತಿಯಲ್ಲಿ ಒಂದು ಗ್ರಾಮ ಒನ್ ಮಾತ್ರ ಇದೆ. ಈ ಪ್ರದೇಶದಲ್ಲಿ ಎರಡೂವರೆ ಸಾವಿರ ಕುಟುಂಬಗಳಿವೆ. ಹೀಗಾಗಿ ಅಲ್ಲಿ ಮಹಿಳೆಯರನ್ನು ಸರದಿ ಸಾಲಿನಲ್ಲಿ ನಿಲ್ಲಿಸಿ ಭ್ರಷ್ಟಾಚಾರಕ್ಕೆ ಕುಮ್ಕಕ್ಕು ನೀಡಲು ಅವಕಾಶ ನೀಡುವುದಿಲ್ಲ. ಅವರ ಅರ್ಜಿ ಅವರೇ ಹಾಕಲು ಅವಕಾಶ ಮಾಡಿಕೊಡಲಾಗುತ್ತದೆ. ಸ್ವಲ್ಪ ತಡವಾದರೂ ಈ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲಿದೆ ಎಂದು ಹೇಳಿದರು.
ಸಭೆಯಲ್ಲಿ ಸಚಿವರಾದ ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುಳಾ ಸೇರಿದಂತೆ ಹಲವರು ಹಾಜರಿದ್ದರು.
