ಹೆಬ್ಬಾಳ್ಕರ್ ಸುದ್ದಿಗೋಷ್ಠಿ: ಸಿಟಿ ರವಿ ಆ ಪದ ಬಳಕೆಯಿಂದ ನನಗೆ ನೋವಾಗಿದೆ, ಮಾಧ್ಯಮಗಳ ಮುಂದೆ ಸಚಿವೆ ಕಣ್ಣೀರು!
ಬೆಳಗಾವಿ ಸುವರ್ಣ ಸೌಧದಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಬಂಧನಕ್ಕೊಳಗಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸಿ.ಟಿ. ರವಿ ಹೇಳಿಕೆಯಿಂದ ತಮಗೆ ಅವಮಾನವಾಗಿದೆ ಎಂದು ಕಣ್ಣೀರು ಹಾಕಿದ್ದಾರೆ.
ಬೆಂಗಳೂರು (ಡಿ.20): ಬೆಳಗಾವಿ ಸುವರ್ಣ ಸೌಧದಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ ಆರೋಪದಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸಿಟಿ ರವಿ ಬಂಧನ ಬೆನ್ನಲ್ಲೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ನಾನು ಒಬ್ಬಳು ತಾಯಿ. ಹೆಣ್ಣುಮಗಳು. ಸಿಟಿ ರವಿ ಹೇಳಿಕೆಯಿಂದ ನನಗೆ ಅವಮಾನವಾಗಿದೆ, ನಾನು ದುಃಖಿತಳಾಗಿದ್ದೇನೆ ಎಂದು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ.
ಇಂದು ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಅಂಬೇಡ್ಕರ್ ಅವರಿಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ನಾವು ಸದನದಲ್ಲಿ ಪ್ರತಿಭಟನೆ ಮಾಡ್ತಿದ್ವಿ. ಧರಣಿ ಮಾಡಿ ಮುಗಿದು ನಾವು ಕುಳಿತಿದ್ವಿ. ನಾನು ಸುಮ್ಮನೆ ನನ್ನ ಸೀಟ್ ಮೇಲೆ ಕುಳಿತಿದ್ದೆ. ಆಗ ರಾಹುಲ್ ಗಾಂಧೀ ಬಗ್ಗೆ ಡ್ರಗ್ ಎಡಿಕ್ಟ್ ಅಂತ ಸಿಟಿ ರವಿ ಯವರು ಅಂದರು.ತಾವು ಸಹ ಅಪಘಾತ ಮಾಡಿದ್ದಿರಿ ತಾವೂ ಸಹ ಕೊಲೆಗಾರಾಗ್ತಿರಿ ಆಗ್ತೀರಾ ಅಂದೆ. ಅಷ್ಟಕ್ಕೆ ನನಗೆ ಬಳಿಕ ಆ ಶಬ್ಧವನ್ನು ಸಿಟಿ ರವಿ ಅಂದರು. ಆ ಪದ ಬಳಕೆ ಕುರಿತು ಹೇಳುತ್ತ ಲಕ್ಚ್ಮೀ ಹೆಬ್ಬಾಳಕರ್ ಕಣ್ಣೀರಾದರು..ನಾನು ನನ್ನ ಪಾಡಿಗೆ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಸಿಟಿ ರವಿ ಮಾತಿನಿಂದ ನನಗೆ ಅವಮಾನವಾಗಿದೆ.
ನಾನೂ ಕೂಡ ಒಬ್ಬಳು ತಾಯಿ. ಒಬ್ಬ ಅಕ್ಕ. ನನ್ನ ನೋಡಿ ಸಾವಿರಾರು ಜನರು ರಾಜಕೀಯಕ್ಕೆ ಬರಬೇಕು ಅಂತಿದ್ದಾರೆ. ರಾಜಕಾರಣದಲ್ಲಿ ರೋಷಾವೇಷವಾಗಿ ಭಾಷಣ ಮಾಡ್ತಿವಿ. ನಾನು ನನ್ನ ಪಾಡಿಗೆ ರಾಜಕೀಯ ಮಾಡುತ್ತ ಕೈಲಾದಷ್ಟು ಜನರ ಸೇವೆ ಮಾಡಿಕೊಂಡು ಬಂದಿದ್ದೇನೆ. ರಾಜಕೀಯದಲ್ಲಿ ಇರಬೇಕು ಅಂದ್ರೆ ಧೈರ್ಯವಾಗಿರಬೇಕು. ವಿಧಾನಸೌಧವನ್ನು ಹಿರಿಯರ ಚಾವಡಿ, ಬುದ್ದಿವಂತರ ಕಟ್ಟೆ ಅಂತ ಕರೆಯುತ್ತಾರೆ. ಇಂಥ ಪವಿತ್ರಸ್ಥಳದಲ್ಲಿ ಆ ರೀತಿ ಪದ ಬಳಕೆ ಮಾಡಬಾರದು. ಮಾಡಿದರೂ ಅದನ್ನು ಯಾರೂ ಖಂಡಿಸಲಿಲ್ಲ. ರಾಹುಲ್ ಗಾಂಧೀಯರಿಗೆ ಅವರು ಡ್ರಗ್ ಎಡಿಕ್ಟ್ ಅಂದ್ರು ಅದಕ್ಕ ನಾನು ಕೊಲೆಗಾರರು ಅಂದೆ ಇಷ್ಟೇ. ಮಾಧ್ಯಮಗಳು ಎಲ್ಲವನ್ನೂ ತೋರಿಸಿವೆ ಅವರು ಸುಳ್ಳು ಹೇಳ್ತಿದ್ದಾರೆ. ನಾನು ಅಮಾನತ್ತಿನ ಬಗ್ಗೆ ಎನು ಮಾತನಾಡಲ್ಲ. ನನ್ನ ಸೊಸೆ ನನಗೆ ಫೋನ್ ಮಾಡಿ ನಿನ್ನ ಜೊತೆ ನಾವಿದ್ದೇವೆ ಅಂದ್ಳು. ನನ್ನ ಕ್ಷೇತ್ರದ ಜನ ನನ್ನ ಹಿಂದೆ ಇದ್ದಾರೆ. ಈ ಕ್ಷಣಕ್ಕೆ ಇಷ್ಟೆ ನಾನು ಹೇಳುವುದು ಎಂದು ಮಾತು ಮುಗಿಸಿದರು.