ಮೇನಲ್ಲಿ ಮಳೆಗೆ 67 ಬಲಿ, 487 ಜಾನುವಾರು ಸಾವು, 20 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿ, ಪರಿಹಾರ ಮೊತ್ತದ ಬಗ್ಗೆ ಸಂಪುಟದಲ್ಲಿ ಚರ್ಚೆ: ಕಂದಾಯ ಸಚಿವ ಕೃಷ್ಣ ಬೈರೇಗೌಡ 

ಬೆಂಗಳೂರು(ಜೂ.01): ಪ್ರಕೃತಿ ವಿಕೋಪ ಎದುರಿಸಲು ಜಿಲ್ಲಾಡಳಿತಗಳು ಸಜ್ಜಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ರಾಜ್ಯದಲ್ಲಾಗಿರುವ ಮಳೆಹಾನಿ ಮತ್ತು ಅದಕ್ಕೆ ಕೈಗೊಳ್ಳಬಹುದಾದ ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಚ್‌ರ್‍, ಮೇ ತಿಂಗಳಲ್ಲಿ ಕೆಲವು ಜಿಲ್ಲೆಯಲ್ಲಿ ಮಳೆಯಾಗಿದ್ದು, 67 ಮಂದಿ ಪ್ರಾಣಹಾನಿಯಾಗಿದೆ. 60 ಕುಟುಂಬಗಳಿಗೆ ಪರಿಹಾರ ಒದಗಿಸಲಾಗಿದ್ದು, ಉಳಿದವರಿಗೆ ಪರಿಹಾರ ಒದಗಿಸಲಾಗುವುದು. 487 ಜಾನುವಾರುಗಳು ಸಾವನ್ನಪ್ಪಿದ್ದು, ಪರಿಹಾರ ನೀಡುವ ಕಾರ್ಯವಾಗಲಿದೆ. 1400 ಮನೆಗಳಿಗೆ ಮಳೆಯಿಂದ ಭಾಗಶಃ ಹಾನಿಯಾಗಿದೆ. 20,160 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಬೆಳೆ ಹಾನಿಯಾಗಿರುವ ರೈತರಿಗೆ ಪರಿಹಾರ ನೀಡಲಾಗುವುದು. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಪರಿಹಾರದ ಮೊತ್ತ ನಿಗದಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ರಾಜ್ಯಾದ್ಯಂತ ಭಾರೀ ಮಳೆ ಸಾಧ್ಯತೆ: ಎಚ್ಚರಿಕೆ ನೀಡಿದ ಹವಮಾನ ಇಲಾಖೆ!

538 ಕೋಟಿ ರು. ಜಿಲ್ಲಾಧಿಕಾರಿ ಖಾತೆಯಲ್ಲಿ ಲಭ್ಯವಿದೆ. ಕೊರತೆ ಇರುವ ಕಡೆ ಒಂದೆರಡು ದಿನದಲ್ಲಿ ತಲುಪಿಸುತ್ತೇವೆ. ಬೆಂಗಳೂರು, ಕೊಡಗು, ಮಂಗಳೂರು, ಬೆಳಗಾವಿ, ರಾಯಚೂರು ಜಿಲ್ಲೆಯಲ್ಲಿ ರಕ್ಷಣಾ ತಂಡ ನಿಯೋಜಿತವಾಗಲಿದೆ. ಎಲ್ಲಾ ಅಧಿಕಾರಿಗಳು ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದರು. ಇನ್ನು ಮುಂದೆ ತಕ್ಷಣ ಕ್ರಮ ಕೈಗೊಳ್ಳಲು ಸಿದ್ಧರಾಗುವಂತೆ ತಿಳಿಸಲಾಗಿದೆ. ರಾಜ್ಯದಲ್ಲಿ ವಾಡಿಕೆ ಪ್ರಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಲಬುರಗಿ, ಯಾದಗಿರಿ, ಬೀದರ್‌ನಲ್ಲಿ ಜೂನ್‌ನಲ್ಲಿ ಕಡಿಮೆ ಮಳೆಯಾಗಬಹುದು. ಉಳಿದಂತೆ ವಾಡಿಕೆಯಂತೆ ಮಳೆಯಾಗಲಿದೆ ಎಂದು ಹೇಳಿದ ಅವರು, ಇನ್ನೆರಡು ದಿನದಲ್ಲಿ ಕುಷ್ಕಿ ಬೆಳೆ, ತೋಟಗಾರಿಕೆ ಬೆಳೆ ಹಾನಿ ಎಷ್ಟುಆಗಿದೆ ಎಂದು ಸ್ಪಷ್ಟಮಾಹಿತಿ ಲಭ್ಯವಾಗಲಿದೆ. ಪರಿಹಾರ ವಿತರಣೆಯಲ್ಲಿ ಕೆಲವು ಕಡೆ ದುರುಪಯೋಗವಾಗಿದೆ ಎಂಬ ದೂರು ಇದೆ. ಈ ಸಂಬಂಧ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ಚರ್ಚೆ ಮಾಡಲಾಗಿದೆ ಎಂದರು.

ಬಗರ್‌ಹುಕುಂ ಸಾಗುವಳಿದಾರರ ಅರ್ಜಿ ವಿಲೇವಾರಿಗೆ ನೇಮಿಸಿದ್ದ ಸಮಿತಿ ವಜಾಗೊಂಡಿದೆ. ಮುಂದಿನ ಒಂದು ತಿಂಗಳಲ್ಲಿ ಸಮಿತಿ ಮಾಡುತ್ತೇವೆ. ಅರಣ್ಯ ಮತ್ತು ಕಂದಾಯ ಇಲಾಖೆಯ ಜಮೀನಿನ ಬಗ್ಗೆ ಗೊಂದಲ ಮಲೆನಾಡು, ಕರಾವಳಿ ಭಾಗದಲ್ಲಿ ಸಾಕಷ್ಟುಇದೆ. ಅರಣ್ಯ ಇಲಾಖೆ ಕಂದಾಯ ಇಲಾಖೆಯ ಜಂಟಿ ಸಮೀಕ್ಷೆ ಮಾಡಿಸುವ ಪ್ರಯತ್ನ ಮಾಡುತ್ತೇವೆ. ಕಂದಾಯ ಇಲಾಖೆಯಲ್ಲಿ ಒಂದಿಷ್ಟುತಾಂತ್ರಿಕ ಸಮಸ್ಯೆ ಇದ್ದು, ಅದನ್ನೆಲ್ಲಾ ಬಗೆಹರಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪಹಣಿ ವಿಚಾರದಲ್ಲಿ ರೈತರಿಗೆ ಅನ್ಯಾಯವಾಗಬಾರದು. ನಿಧಾನವಾಗಿ ಸಮಸ್ಯೆ ಬಗೆಹರಿಸಿಕೊಂಡು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.