ಕೊಡಗು ಜಿಲ್ಲೆಯಲ್ಲಿ ನಿರಂತರ ಭೂಕುಸಿತವನ್ನು ತಡೆಗಟ್ಟಲು 50 ಕೋಟಿ ರೂ. ಅನುದಾನ ನೀಡುವುದಾಗಿ ಸಚಿವ ಕೃಷ್ಣಬೈರೇಗೌಡ ಘೋಷಿಸಿದ್ದಾರೆ. ಜಿಲ್ಲಾಧಿಕಾರಿಗಳು ಸಲ್ಲಿಸಿರುವ ಕ್ರಿಯಾ ಯೋಜನೆಯಂತೆ ತಡೆಗೋಡೆ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಆರಂಭ.

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಜುಲೈ.25): ಕಳೆದ ಐದಾರು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಅಲ್ಲಲ್ಲಿ ನಿರಂತರವಾಗಿ ಭೂಕುಸಿತವಾಗುತ್ತಿದ್ದು, ಅದನ್ನು ತಡೆಗಟ್ಟುವ ದೃಷ್ಟಿಯಿಂದ ತಡೆಗೋಡೆ ನಿರ್ಮಿಸಲು 50 ಕೋಟಿ ನೀಡಲಾಗುವುದು ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.

ಕೊಡಗಿನ ಪೊನ್ನಂಪೇಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕೊಡಗಿನ ಸಾಕಷ್ಟು ಕಡೆಗಳಲ್ಲಿ ನಿರಂತರವಾಗಿ ಭೂಕುಸಿತವಾಗುತ್ತಲೇ ಇದೆ. ಇದನ್ನು ತಡೆಯುವ ದೃಷ್ಟಿಯಿಂದ ಇಬ್ಬರು ಶಾಸಕರು ಜಿಲ್ಲೆಗೆ ವಿಷೇಶ ಅನುದಾನ ಕೇಳಿದ್ದರು. ಇದೀಗ ಸಿಎಂ ಸಿದ್ದರಾಮಯ್ಯನವರು ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದು 50 ಕೋಟಿ ಬಿಡುಗಡೆ ಮಾಡಲಿದ್ದಾರೆ. ಎಲ್ಲೆಲ್ಲಿ ಭೂಕುಸಿತವಾಗುತ್ತಿದೆ, ಎಲ್ಲಿಗೆ ತಡೆಗೋಡೆ ಅಗತ್ಯವಿದೆ ಎನ್ನುವುದರ ಕುರಿತು ಈಗಾಗಲೇ ಜಿಲ್ಲಾಧಿಕಾರಿ ಅವರು ಕ್ರಿಯಾ ಯೋಜನೆ ಸಿದ್ಧಗೊಳಿಸಿ ಸಲ್ಲಿಸಿದ್ದಾರೆ. ಸದ್ಯದಲ್ಲಿ ಜಿಲ್ಲೆಗೆ 50 ಕೋಟಿ ಬಿಡುಗಡೆ ಆಗಲಿದ್ದು, ತಡೆಗೋಡೆ ಕಾಮಗಾರಿ ನಡೆಯಲಿದೆ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ನೂತನವಾಗಿ ರಚನೆಯಾದ ತಾಲ್ಲೂಕುಗಳಿಗೆ ಶೀಘ್ರದಲ್ಲಿಯೇ ತಾಲ್ಲೂಕು ಆಡಳಿತ ಸೌಧ ನಿರ್ಮಿಸಲು ಚಾಲನೆ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು. ನೂತನವಾಗಿ ರಚನೆಯಾಗಿರುವ ಕುಶಾಲನಗರ ಹಾಗೂ ಪೊನ್ನಂಪೇಟೆ ತಾಲ್ಲೂಕುಗಳಿಗೆ ತಾಲ್ಲೂಕು ಆಡಳಿತ ಕಚೇರಿಗಳೇ ಇಲ್ಲ. ಹಿಂದಿನವರು ತಾಲ್ಲೂಕು ಆಡಳಿತ ಸೌಧಗಳನ್ನು ಮಾಡುವ ಪ್ರಯತ್ನವನ್ನೇ ಮಾಡಿಲ್ಲ. ಏಳು ವರ್ಷಗಳಾದರೂ ತಾಲ್ಲೂಕು ಆಡಳಿತ ಸೌಧಗಳನ್ನು ಮಾಡುವ ಪ್ರಯತ್ನ ಮಾಡಲಿಲ್ಲ. ಆದರೆ ನಮ್ಮ ಶಾಸಕರು ಈಗ ಸತತ ಪ್ರಯತ್ನದಿಂದ ತಾಲ್ಲೂಕು ಆಡಳಿತ ಸೌಧ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈಗಾಗಲೇ ತಲಾ ಎರಡು ತಾಲ್ಲೂಕುಗಳಿಗೆ ತಲಾ 8.6 ಕೋಟಿ ವೆಚ್ಚದಲ್ಲಿ ರೂಪುರೇಷೆ ಸಿದ್ಧವಾಗಿದೆ. ಶೀಘ್ರದಲ್ಲೇ ಕಾಮಗಾರಿಯೂ ಆರಂಭವಾಗಲಿದೆ ಎಂದಿದ್ದಾರೆ.

ರಾಜ್ಯದಲ್ಲಿ ಭೂ ಸುರಕ್ಷಾ ಯೋಜನೆ ಜಾರಿ ಮಾಡಲಾಗುತ್ತಿದ್ದು, ಈಗಾಗಲೇ ಕಂದಾಯ ಇಲಾಖೆಯ 33 ಕೋಟಿ ಪುಟದಷ್ಟು ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು. ಕೊಡಗಿನ ವಿವಿಧೆಡೆ ಆಗಿರುವ ಮಳೆಹಾನಿ ಪ್ರದೇಶಗಳನ್ನು ವೀಕ್ಷಿಸಿದ ಸಚಿವ ಕೃಷ್ಣಬೈರೇಗೌಡ ಕೊಡಗಿನಲ್ಲೂ ದಾಖಲೆನಗಳನ್ನು ಎಷ್ಟು ವೇಗದಲ್ಲಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಲಾಗುತ್ತಿದೆ ಎನ್ನುವುದನ್ನು ಪರಿಶೀಲಿಸಿದ್ದೇವೆ ಎಂದರು.

ಭೂ ಸುರಕ್ಷಾ ಯೋಜನೆಯಿಂದ ಮೂಲ ಭೂದಾಖಲೆಗಳನ್ನು ರಕ್ಷಿಸಬಹುದು. ಮೂಲ ಮಾಲಿಕತ್ವವನ್ನು ಉಳಿಸಿಕೊಳ್ಳಬಹುದು ಎಂದರು. ರಾಜ್ಯದಲ್ಲಿ 100 ಕೋಟಿಗೂ ಅಧಿಕ ಪುಟಗಳ ಕಂದಾಯ ಇಲಾಖೆಯ ಭೂದಾಖಲೆಗಳು ಇವೆ. ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುತ್ತಿರುವುದರಿಂದ ಭೂದಾಖಲೆಗಳ ಅಕ್ರಮ ತಿದ್ದುಪಡಿಗೆ ಬ್ರೇಕ್ ಬೀಳಲಿದೆ. ಜೊತೆಗೆ ಮೂಲ ದಾಖಲೆಗಳು ಕಳೆದುಹೋಗುವುದಕ್ಕೆ ಸಾಧ್ಯವಿಲ್ಲ. ಮೂಲ ದಾಖಲೆಗಳು ಈಗಾಗಲೇ ಅಕ್ರಮವಾಗಿ ತಿದ್ದುಪಡಿ ಆಗಿದ್ದರೆ, ಅದಕ್ಕೆ ವಿಶೇಷ ನಿಯಮಗಳ ಮಾಡಲಾಗುತ್ತಿದೆ. ಮೂಲ ದಾಖಲೆಗಳು ತಿದ್ದುಪಡಿಯಾಗಿದ್ದರೆ ಪರಿಶೀಲಿಸಲಾಗುವುದು ಎಂದಿದ್ದಾರೆ.