ಸಹಕಾರ ಸಚಿವ ಕೆ.ಎನ್. ರಾಜಣ್ಣ ತಮ್ಮ ಮೇಲೆ ಹನಿಟ್ರ್ಯಾಪ್ ನಡೆದಿದೆ ಎಂದು ಒಪ್ಪಿಕೊಂಡಿದ್ದಾರೆ. 48 ನಾಯಕರ ಹನಿಟ್ರ್ಯಾಪ್ ಪೆನ್‌ಡ್ರೈವ್‌ಗಳ ಬಗ್ಗೆ ತನಿಖೆ ನಡೆಸುವಂತೆ ಗೃಹ ಸಚಿವರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.

ಬೆಂಗಳೂರು (ಮಾ.20): ರಾಜ್ಯದಲ್ಲಿ ತನ್ನ ಮೇಲೆ ಹನಿಟ್ರ್ಯಾಪ್ ನಡೆದಿದೆ ಎಂಬುದನ್ನು ಒಪ್ಪಿಕೊಂಡ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು, ರಾಜ್ಯ ಮತ್ತು ರಾಷ್ಟ್ರ ರಾಜಕಾರಣದ ಎಲ್ಲ ಪಕ್ಷಗಳ 48 ನಾಯಕರ ಹನಿಟ್ರ್ಯಾಪ್‌ ಪೆನ್‌ಡ್ರೈವ್‌ಗಳು ಇವೆ. ಈ ಬಗ್ಗೆ ನಾನು ಪತರಮುಖೇನ ದೂರು ನೀಡಲಿದ್ದು, ಗೃಹ ಸಚಿವರು ವಿಶೇಷ ತನಿಖೆ ಮಾಡಿಸಿ, ಪ್ರೊಡ್ಯೂಸರ್, ಡೈರೆಕ್ಟರ್, ನಟಿಯರು ಯಾರಿದ್ದಾರೆ ಎಂಬುದನ್ನು ಪತ್ತೆಹಚ್ಚಿ ಶಿಕ್ಷೆ ಕೊಡಿಸಬೇಕು ಎಂದು ಕೆ.ಎನ್. ರಾಜಣ್ಣ ಭಾವನಾತ್ಮಕವಾಗಿ ಮಾತನಾಡಿದರು.

ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತನಾಳ್ ಅವರು, ರಾಜ್ಯದಲ್ಲಿ ನಮ್ಮ ಸಹಕಾರ ಸಚಿವರ ಮೇಲೆ ಹನಿಟ್ರ್ಯಾಪ್ ಆಗಿದೆ. ಇವತ್ತು ರಾಜಣ್ಣ ಮೇಲೆ ಆಗಿದೆ. ನಾಳೆ ಮತ್ತೊಬ್ಬರ ಮೇಲೆ ಆಗಬಹುದು ಎಂದು ಹೇಳಿದರು.

ಇದರ ಬೆನ್ನಲ್ಲಿಯೇ ಸಚಿವ ಕೆ.ಎನ್. ರಾಜಣ್ಣ ಅವರು ಮಾತನಾಡಿ, ಕರ್ನಾಟಕ ರಾಜ್ಯ ಅಂದ್ರೆ ಸಿಡಿ, ಪೆನ್ ಡ್ರೈವ್ ಅನ್ನೋ ತರ ಆಗಿದೆ. ಎರಡು ಫ್ಯಾಕ್ಟರಿ ಇದ್ಯಾ..? ನಿಮ್ಮದು ಯಾವುದು ಅಂತ ಹೇಳಿದ್ರೆ ನಮ್ಮದು ಯಾವುದು ಅಂತ ಹೇಳ್ತಿನಿ. ಈ ವಿಚಾರದಲ್ಲಿ 48 ಜನ ಇದಾರೆ. ಇದು ರಾಷ್ಟ್ರ ಮಟ್ಟದ ನಾಯಕರ ಪೆನ್ ಡ್ರೈವ್ ಕೂಡ ಇದಾವೆ. ನಾನು ನಮ್ಮ ಗೃಹಮಂತ್ರಿಗಳಿಗೆ ಕಂಪ್ಲೇಂಟ್ ಕೊಡ್ತಿನಿ. ಕಂಪ್ಲೇಂಟ್ ಆಧಾರದ ಮೇಲೆ ತನಿಖೆ ಮಾಡಿಸಲಿ. ನನ್ನ ಮೇಲೆ ಅಟೆಂಪ್ಟ್ ಆಗಿರೋದಕ್ಕೆ ಪುರಾವೆ ಇಟ್ಕೊಂಡಿದ್ದೇನೆ ಎಂದು ಹೇಳಿದರು.\

ಇದನ್ನೂ ಓದಿ: ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಈ 3 ಸ್ಥಳಗಳು ಅಂತಿಮ!

ಮುಂದುವರೆದು, ಇದು ರಾಜ್ಯ ಮಟ್ಟಕ್ಕೆ ಮಾತ್ರ ಸೀಮಿತವಾಗಿಲ್ಲ, ರಾಷ್ಟ್ರ ಮಟ್ಟದ ಎಲ್ಲ ಪಕ್ಷದ ನಾಯಕರ ಹನಿಟ್ರ್ಯಾಪ್‌ಗಳ ಪೆನ್‌ಡ್ರೈವ್‌ಗಳು ಕೂಡ ಇವೆ. ಗೃಹ ಮಂತ್ರಿಗಳು ಈ ಬಗ್ಗೆ ತನಿಖೆ ಮಾಡಿಸಬೇಕು. ಈ ಬಗ್ಗೆ ತನಿಖೆ ಮಾಡಿಸಿ ಪ್ರೊಡ್ಯೂಸರ್, ಡೈರೆಕ್ಟರ್, ನಟಿಯರು ಯಾರಾರಿದ್ದಾರೆ ಎಂಬುದನ್ನು ಬಯಲಿಗೆಳೆಯಬೇಕು. ಈ ಬಗ್ಗೆ ನಾನು ದೂರು ನೀಡುತ್ತೇನೆ, ಒಂದು ವಿಶೇಷ ತನಿಖೆಯನ್ನು ಮಾಡಿಸಬೇಕು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಆಗ್ರಹಿಸಿದರು.

ತನಿಖೆಗೆ ಆದೇಶಿಸಿದ ಡಾ. ಜಿ. ಪರಮೇಶ್ವರ: ಇದಕ್ಕೆ ಉತ್ತರಿಸಿದ ಸಚಿವ ಪರಮೇಶ್ವರ್ ಅವರು, ಇದು ಈ ಸದನದ ಸದಸ್ಯನ ಪ್ರಶ್ನೆ. ಇದಕ್ಕೆಲ್ಲಾ ಒಂದು ಕಡಿವಾಣ ಹಾಕಬೇಕು. ಕರ್ನಾಟಕ ವಿಧಾನಸಭೆ ಅತ್ಯಂತ ಗೌರವ ಹೊಂದಿದೆ. ದೊಡ್ಡ ದೊಡ್ಡ ಸದಸ್ಯರ ಆದರ್ಶಗಳನ್ಮ ಬಿಟ್ಟು ಹೋಗಿದ್ದಾರೆ. ಸದನದ ಸದಸ್ಯರ ಮರ್ಯಾದೆ ಕಾಪಾಡಬೇಕಾದರೆ ಇದಕ್ಕೆ ಇತಿಶ್ರೀ ಹಾಕಬೇಕು. ರಾಜಣ್ಣ ಅವರು ಏನು ಪ್ರಸ್ತಾಪ ಮಾಡಿದ್ದಾರೆ. ಅವರು ಮನವಿ ಕೊಡ್ತೇನೆ ಎಂದು ಹೇಳಿದ್ದಾರೆ. ಅವರ ಮನವಿ ಆಧಾರದ ಮೇಲೆ ಉನ್ನತ ಮಟ್ಟದ ತನಿಖೆ ಮಾಡಿಸ್ತೇನೆ ಎಂದ ಸಚಿವ ಪರಮೇಶ್ವರ್ ಹೇಳಿದರು.

ಇದನ್ನೂ ಓದಿ: ಹೇಳೋರಿಲ್ಲ, ಕೇಳೋರಿಲ್ಲ.. ರಾಜ್ಯದ ಜನತೆಗೆ ಮತ್ತೆ ಕರೆಂಟ್‌ ಶಾಕ್‌, ಏ. 1 ರಿಂದ ಪ್ರತಿ ಯುನಿಟ್‌ ಮೇಲೆ 36 ಪೈಸೆ ಸರ್‌ಚಾರ್ಜ್‌!