ಆಗಸ್ಟ್‌ನ ಅನ್ನಭಾಗ್ಯ ಅಕ್ಕಿ ಹಣ 1 ವಾರದಲ್ಲಿ ಪಾವತಿ: ಸಚಿವ ಮುನಿಯಪ್ಪ
ಡಿಬಿಟಿ ವ್ಯವಸ್ಥೆಯಲ್ಲಿನ ಸಮಸ್ಯೆ ಬಗೆಹರಿದಿದೆ. ಹೀಗಾಗಿ ಮುಂದಿನ ವಾರ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಾಗಲಿದೆ. ಈ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಗೊಂದಲಗಳು ಬೇಡ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ

ಬೆಂಗಳೂರು(ಆ.17): ‘ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿ ಬದಲಾಗಿ ನೀಡಬೇಕಾಗಿದ್ದ ಆಗಸ್ಟ್ ತಿಂಗಳ ಹಣವನ್ನು ಒಂದು ವಾರದಲ್ಲಿ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಫಲಾನುಭವಿಗಳ ಖಾತೆಗೆ ಹಾಕಲಾಗುವುದು. ಪ್ರತಿ ತಿಂಗಳು 10 ಅಥವಾ 11ರ ವೇಳೆಗೆ ಅಕ್ಕಿ ನೀಡುತ್ತಿದ್ದೆವು. ಆದರೆ ಡಿಬಿಟಿ ವ್ಯವಸ್ಥೆಯಲ್ಲಿನ ಕೆಲ ಸಮಸ್ಯೆಯಿಂದ ಹಣ ವರ್ಗಾವಣೆ ತಡವಾಗಿದೆ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಡಿಬಿಟಿ ವ್ಯವಸ್ಥೆಯಲ್ಲಿನ ಸಮಸ್ಯೆ ಬಗೆಹರಿದಿದೆ. ಹೀಗಾಗಿ ಮುಂದಿನ ವಾರ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಾಗಲಿದೆ. ಈ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಗೊಂದಲಗಳು ಬೇಡ ಎಂದು ಸ್ಪಷ್ಟಪಡಿಸಿದರು.
ಅನ್ನಭಾಗ್ಯ ಸಿದ್ದರಾಮಯ್ಯರ ಅಚ್ಚುಮೆಚ್ಚಿನ ಕಾರ್ಯಕ್ರಮ: ಶಾಸಕ ಬಸವರಾಜ ರಾಯರಡ್ಡಿ
ಹೊಸದಾಗಿ ಬಿಪಿಎಲ್ ಕಾರ್ಡ್‌ಗಾಗಿ ಅರ್ಜಿ ಹಾಕಿರುವವರ ಬಗ್ಗೆ ಮಾತನಾಡಿದ ಅವರು, ‘ಅರ್ಜಿ ಹಾಕಿದ್ದರೆ ಆದ್ಯತೆ ಮೇಲೆ ಕೊಡುತ್ತೇವೆ. ಬಿಪಿಎಲ್ ಕಾರ್ಡ್ ಪಡೆಯಬೇಕು ಎನ್ನುವವರು ಅಕ್ಕಿಗಿಂತ ಆರೋಗ್ಯ ಸೇವೆ, ವೈದ್ಯಕೀಯ ವೆಚ್ಚ ಭರಿಸುವ ಸಲುವಾಗಿ ಬಿಪಿಎಲ್ ಕಾರ್ಡ್ ಕೇಳುತ್ತಾರೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.
ಆಂಧ್ರ, ತೆಲಂಗಾಣ ಜತೆ ಅಕ್ಕಿ ಖರೀದಿಗೆ ಚರ್ಚೆ:
ಅಕ್ಕಿ ಖರೀದಿ ಬಗ್ಗೆ ಈಗಾಗಲೇ ಆಂಧ್ರ, ತೆಲಂಗಾಣದೊಂದಿಗೆ ಚರ್ಚೆ ನಡೆಸಿದ್ದೇವೆ. ಒಂದು ವಾರದಲ್ಲಿ ನಿರ್ಧಾರ ತಿಳಿಸುವುದಾಗಿ ಆಂಧ್ರ ಸರ್ಕಾರ ತಿಳಿಸಿದೆ. ಪ್ರತೀ ತಿಂಗಳು ಎರಡೂವರೆ ಲಕ್ಷ ಟನ್ ಬೇಕಾಗಿದೆ. ಎರಡೂ ರಾಜ್ಯಗಳ ಬಳಿ ನಮಗೆ ಬೇಕಿರುವಷ್ಟು ಅಕ್ಕಿ ಲಭ್ಯವಿದೆ. ಪ್ರತಿ ಕೆ.ಜಿಗೆ. 40 ರು.ಗಳಂತೆ ಹೇಳುತ್ತಿದ್ದಾರೆ. ಅಂತಿಮವಾಗಿ ಎಷ್ಟಕ್ಕೆ ಕೊಡುತ್ತಾರೆ ಎಂಬುದು ತೀರ್ಮಾನವಾಗಬೇಕಿದೆ ಎಂದರು.