ಬೆಂಗಳೂರು (ಮಾ.12):  ನೆರೆಯ ಮಹಾರಾಷ್ಟ್ರದಲ್ಲಿ ಒಂದೇ ದಿನ 13 ಸಾವಿರಕ್ಕೂ ಹೆಚ್ಚು ಕೋವಿಡ್‌ ಪ್ರಕರಣಗಳು ವರದಿಯಾಗಿರುವುದಕ್ಕೆ ಆತಂಕ ವ್ಯಕ್ತಪಡಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್‌, ಜನರು ಇದನ್ನು ಎಚ್ಚರಿಕೆಯ ಗಂಟೆಯೆಂದು ಪರಿಗಣಿಸಿ ಸೂಕ್ತ ಮುಂಜಾಗ್ರತಾ ಕ್ರಮ ಅನುಸರಿಸಬೇಕು ಎಂದು ಮನವಿ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿನ ಕೋವಿಡ್‌ ವಿದ್ಯಮಾನ ತಮ್ಮನ್ನು ಚಿಂತೆಗೀಡು ಮಾಡಿದೆ. ಹಬ್ಬ, ಹರಿದಿನ, ಸಭೆ-ಸಮಾರಂಭ ಏನೇ ಇದ್ದರೂ ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಟ್ವೀಟರ್‌ನಲ್ಲಿ ವಿನಂತಿಸಿದ್ದಾರೆ.

ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ಕರ್ನಾಟಕದಲ್ಲಿಯೂ ಇತ್ತೀಚಿನ ದಿನಗಳಲ್ಲಿ ದೈನಂದಿನ ಕೋವಿಡ್‌ ಪ್ರಕರಣಗಳಲ್ಲಿ ಸತತ ಏರಿಕೆ ವರದಿಯಾಗುತ್ತಿದೆ. ಮಹಾರಾಷ್ಟ್ರದಿಂದ ರಾಜ್ಯ ಪ್ರವೇಶಿಸಬೇಕಿದ್ದರೆ ಕೋವಿಡ್‌ ನೆಗೆಟಿವ್‌ ವರದಿ ಹೊಂದಿರುವುದು ಕಡ್ಡಾಯ ಎಂಬ ನಿಯಮವನ್ನು ಈಗಾಗಲೇ ರಾಜ್ಯ ರೂಪಿಸಿದೆ ಎಂದು ತಿಳಿಸಿದ್ದಾರೆ.

ಮಹಾ ವೈರಸ್ ಸ್ಫೋಟ : ಮಾ.15ರಿಂದ ಮತ್ತೆ ಲಾಕ್‌ಡೌನ್ .

ಆರೋಗ್ಯ ಕಾರ್ಯಕರ್ತರಿಗೆ ಉಚಿತ ಲಸಿಕೆ:  ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕೋವಿಡ್‌ ಹೋರಾಟಗಾರರಿಗೆ ಈಗಲೂ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿಯೇ ಕೋವಿಡ್‌ ಲಸಿಕೆ ನೀಡಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕೋವಿಡ್‌ ಸೇನಾನಿಗಳಿಗೆ ಎರಡನೇ ಡೋಸ್‌ ಲಸಿಕೆ ನೀಡಲು ಶುಲ್ಕ ಪಡೆಯಲಾಗುತ್ತಿದೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಿರುವ ಸಚಿವ ಡಾ. ಕೆ. ಸುಧಾಕರ್‌, ಎಲ್ಲ ಅರ್ಹ ಫಲಾನುಭವಿಗಳಿಗೆ ಮೊದಲ ಅಥವಾ ಎರಡನೇ ಡೋಸ್‌ ಎಂಬ ತಾರತಮ್ಯ ಮಾಡದೆ ಲಸಿಕೆಯನ್ನು ಉಚಿತವಾಗಿ ನೀಡುತ್ತಿದ್ದೇವೆ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ಮೊದಲ ಡೋಸ್‌ ಉಚಿತವಾಗಿ ಪಡೆದಿದ್ದರೂ ಅಲ್ಲಿ ಎರಡನೇ ಡೋಸ್‌ ಪಡೆಯಲು 250 ರು. ನೀಡುವುದು ಅನಿವಾರ್ಯ ಎಂದು ಹೇಳಿದ್ದಾರೆ.

ಹಿರಿಯ ನಾಗರಿಕರು ಮತ್ತು ಸಹ ಅಸ್ವಸ್ಥತೆ ಹೊಂದಿರುವ 45 ವರ್ಷಕ್ಕಿಂತ ಮೇಲ್ಪಟ್ಟವರು ತಪ್ಪದೆ, ಆದಷ್ಟುಬೇಗ ಕೋವಿಡ್‌ ಲಸಿಕೆ ಪಡೆಯಬೇಕು ಎಂದು ಸಚಿವರು ಇದೇ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.