ಮುಂಬೈ/ನಾಗಪುರ (ಮಾ.12):  ಹಲವು ನಿರ್ಬಂಧಗಳನ್ನು ಹೇರಿದರೂ ಮಹಾರಾಷ್ಟ್ರದಲ್ಲಿ ಕೊರೋನಾ ಅಬ್ಬರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಗುರುವಾರ ಒಂದೇ ದಿನ 13,659 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 

ವೈರಸ್‌ ಹರಡುವಿಕೆ ನಿಯಂತ್ರಣಕ್ಕೆ ಸಿಗದ ಕಾರಣ ಮಹಾರಾಷ್ಟ್ರ ಸರ್ಕಾರ ನಾಗಪುರದಲ್ಲಿ ಮಾ.15ರಿಂದ 21ರವರೆಗೆ ಒಂದು ವಾರ ಲಾಕ್‌ಡೌನ್‌ ಘೋಷಣೆ ಮಾಡಿದೆ. ರಾಜ್ಯದ ಇನ್ನೂ ಕೆಲವು ನಗರಗಳಲ್ಲಿ ಕೊರೋನಾ ಸೋಂಕು ಅಧಿಕವಾಗಿದ್ದು, ಅಲ್ಲೂ ಲಾಕ್‌ಡೌನ್‌ ಹೇರುವ ಕುರಿತು 2-3 ದಿನದಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ತಿಳಿಸಿದ್ದಾರೆ.

ಈ ಮಧ್ಯೆ, ಗುರುವಾರದಿಂದ ಮಹಾರಾಷ್ಟ್ರದ ಜಲಗಾಂವ್‌ನಲ್ಲಿ 3 ದಿನಗಳ ‘ಜನತಾ ಕರ್ಫ್ಯೂ’ ಜಾರಿಗೆ ಬಂದಿದೆ. ನಾಸಿಕ್‌, ಮಾಲೇಗಾಂವ್‌, ನಂದಗಾವ್‌ನಲ್ಲಿ ಬುಧವಾರದಿಂದಲೇ ಅನಿರ್ದಿಷ್ಟಾವಧಿವರೆಗೆ ಶಾಲೆ- ಕಾಲೇಜು, ಕೋಚಿಂಗ್‌ ಸಂಸ್ಥೆಗಳನ್ನು ಬಂದ್‌ ಮಾಡಿಸಲಾಗಿದೆ. 10 ಹಾಗೂ 12ನೇ ತರಗತಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಕಲ್ಯಾಣ್‌-ದೊಂಬಿವಿಲಿ ಮತ್ತು ನಂದರ್ಬಾರ್‌ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಇನ್ನೊಂದೆಡೆ ಪ್ರಕರಣಗಳು ನಿಯಂತ್ರಣಕ್ಕೆ ಬರದೇ ಹೋದಲ್ಲಿ ನಮ್ಮ ಮುಂದೆ ಎಲ್ಲಾ ಅವಕಾಶಗಳೂ ಮುಕ್ತವಾಗಿದೆ ಎಂದು ಬಹನ್ಮುಂಬೈ ಪಾಲಿಕೆ ಮೇಯರ್‌ ಹೇಳಿದ್ದಾರೆ.

ಕರ್ನಾಟಕ ಸೇರಿ 6 ರಾಜ್ಯಗಳಿಂದ ಭಾರತದಲ್ಲಿ 86% ಕೊರೋನಾ ಎಂದ ಇಲಾಖೆ; ಲಾಕ್‌ಡೌನ್ ಆತಂಕ! .

ಈಗಿನ ಪರಿಸ್ಥಿತಿಯೇ ಮುಂದುವರಿದರೆ ಮುಂಬೈನಲ್ಲಿ ರಾತ್ರಿ ಕರ್ಫ್ಯೂ ಅಥವಾ ಅರೆ ಲಾಕ್‌ಡೌನ್‌ ವಿಧಿಸುವ ಕುರಿತು ಸರ್ಕಾರ ಗಂಭೀರ ಚಿಂತನೆಯಲ್ಲಿ ತೊಡಗಿದೆ. ಮತ್ತೊಂದೆಡೆ, ಜನರು ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದೆ ಇದೇ ರೀತಿ ಪ್ರಕರಣ ಏರುತ್ತಾ ಹೋದರೆ ರಾಜ್ಯಾದ್ಯಂತ ಕಟ್ಟುನಿಟ್ಟಿನ ಲಾಕ್‌ಡೌನ್‌ ಜಾರಿ ಅನಿವಾರ್ಯ ಎಂದು ಆಡಳಿತಾರೂಢ ಶಿವಸೇನೆ ಕೂಡ ಎಚ್ಚರಿಕೆ ನೀಡಿದೆ.

ಖಾಸಗಿ ಕಚೇರಿ ಬಂದ್‌:  ಮಹಾರಾಷ್ಟ್ರದಲ್ಲಿ ಪ್ರತಿನಿತ್ಯ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ನಾಗಪುರದಲ್ಲೂ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಫೆ.22ರಿಂದ ವಾರಾಂತ್ಯಗಳಲ್ಲಿ ಹಲವು ನಿರ್ಬಂಧ ವಿಧಿಸಲಾಗಿತ್ತು. ಆದರೂ ಪರಿಸ್ಥಿತಿ ಕೈಮೀರುತ್ತಿರುವ ಹಿನ್ನೆಲೆಯಲ್ಲಿ ಮಾ.15ರಿಂದ 21ರವರೆಗೆ ನಾಗಪುರ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಲಾಕ್‌ಡೌನ್‌ ಜಾರಿಗೆ ತರಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ನಿತಿನ್‌ ರಾವತ್‌ ತಿಳಿಸಿದ್ದಾರೆ.

ಲಾಕ್‌ಡೌನ್‌ ಅವಧಿಯಲ್ಲಿ ಎಲ್ಲ ಖಾಸಗಿ ಕಚೇರಿಗಳು ಬಂದ್‌ ಆಗಲಿವೆ. ಸರ್ಕಾರಿ ಕಚೇರಿಗಳು ಶೇ.25ರಷ್ಟುಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲಿವೆ. ಅವಶ್ಯ ವಸ್ತುಗಳ ಮಾರಾಟ ಮಾತ್ರ ಇರುತ್ತದೆ. ಮದ್ಯವನ್ನು ಆನ್‌ಲೈನ್‌ ಮೂಲಕ ಮಾರಾಟ ಮಾಡಲಾಗುತ್ತದೆ. ಜನರು ಅನವಶ್ಯಕವಾಗಿ ಸುತ್ತಾಡಬಾರದು ಎಂದು ಅವರು ತಿಳಿಸಿದ್ದಾರೆ.

ನಾಗಪುರದಲ್ಲಿ ಬುಧವಾರ 1710 ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ನಾಗಪುರ ಜಿಲ್ಲೆಯಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1.62 ಲಕ್ಷಕ್ಕೇರಿದೆ. ಸದ್ಯ 12166 ಸಕ್ರಿಯ ಪ್ರಕರಣಗಳು ಇವೆ. ಈವರೆಗೆ 4417 ಮಂದಿ ನಾಗಪುರ ಜಿಲ್ಲೆಯೊಂದರಲ್ಲೇ ಕೊರೋನಾಗೆ ಬಲಿಯಾಗಿದ್ದಾರೆ.

ಶಿವಸೇನೆ ಎಚ್ಚರಿಕೆ:  ದೇಶಾದ್ಯಂತ ಕೊರೋನಾ ಹೆಚ್ಚುತ್ತಿದೆ. ಅದಕ್ಕೆ ಮಹಾರಾಷ್ಟ್ರದ ಕೊಡುಗೆ ಅಧಿಕವಾಗಿದೆ. ಇದು ಕಳವಳಕಾರಿ. ಜನರು ಸ್ವಯಂ ನಿರ್ಬಂಧ ಹೇರಿಕೊಳ್ಳಬೇಕು. ಇಲ್ಲವಾದರೆ ಲಾಕ್‌ಡೌನ್‌ ಅಥವಾ ಇನ್ನಿತರೆ ಕಠಿಣ ನಿರ್ಬಂಧಗಳು ಅನಿವಾರ್ಯ ಎಂದು ಶಿವಸೇನೆ ತನ್ನ ಮುಖವಾಣಿ ‘ಸಾಮ್ನಾ’ದಲ್ಲಿ ಬರೆದುಕೊಂಡಿದೆ.