ಬೆಂಗಳೂರು(ಜ.31): ಆರೋಗ್ಯ ಇಲಾಖೆಯು ರಾಜ್ಯಾದ್ಯಂತ ಇಂದು(ಭಾನುವಾರ) ಪೋಲಿಯೋ ಲಸಿಕೆ ಅಭಿಯಾನ ಹಮ್ಮಿಕೊಂಡಿದ್ದು, ಐದು ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸುವಂತೆ ಪೋಷಕರಿಗೆ ಮನವಿ ಮಾಡಿದೆ.
ದೇಶಾದ್ಯಂತ ಕೊರೋನಾ ಲಸಿಕೆ ವಿತರಣೆ ಅಭಿಯಾನ ಪ್ರಾರಂಭವಾದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಪೋಲಿಯೋ ಕಾರ್ಯಕ್ರಮವನ್ನು ಭಾನುವಾರ ನಿಗದಿಪಡಿಸಲಾಗಿದೆ.

ರಾಜ್ಯದಲ್ಲಿ 5 ವರ್ಷದೊಳಗಿನ 64,07,930 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿಯನ್ನು ಆರೋಗ್ಯ ಇಲಾಖೆ ಹೊಂದಿದೆ. ಎಲ್ಲ ಆಸ್ಪತ್ರೆಗಳು, ಬಸ್‌, ರೈಲ್ವೆ ನಿಲ್ದಾಣ ಸೇರಿದಂತೆ ಪ್ರಮುಖ ಸಾರ್ವಜನಿಕ ಸ್ಥಳಗಳು, ಗ್ರಾಮೀಣ ಪ್ರದೇಶ, ಗುಡ್ಡಗಾಡು ಪ್ರದೇಶ ಸೇರಿದಂತೆ ವಿವಿಧೆಡೆ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿದೆ. ಲಸಿಕೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗೆ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಬಹುದು.

ಜ.17ರ ಪೋಲಿಯೋ ಲಸಿಕೆ ಅಭಿಯಾನ ಮುಂದೂಡಿಕೆ!

ರಾಜ್ಯದಲ್ಲಿ 85,05,060 ಡೋಸ್‌ ಲಸಿಕೆ ಲಭ್ಯವಿದ್ದು, ವಿತರಣೆಯಲ್ಲಿ 1,10,179 ಸಿಬ್ಬಂದಿ ಭಾಗವಹಿಸಲಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಲಸಿಕೆ ವಿತರಿಸಲು 904 ಸಂಚಾರಿ ತಂಡಗಳನ್ನು, ಮನೆ ಮನೆ ಭೇಟಿಗಾಗಿ 49,338 ಮಂದಿಯ ತಂಡವನ್ನು ರಚಿಸಲಾಗಿದೆ. ಇನ್ನು ಲಸಿಕೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಭಾನುವಾರ ಬೆಳಿಗ್ಗೆ ಚಾಲನೆ ದೊರೆಯಲಿದೆ.

ಭಾನುವಾರ ರಾಜ್ಯದಲ್ಲಿ ಪೋಲಿಯೋ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಹಿಂದೆ ಎಷ್ಟೇ ಬಾರಿ ಲಸಿಕೆ ಹಾಕಿಸಿದ್ದರೂ ಭಾನುವಾರ 5 ವರ್ಷದೊಳಗಿನ ಮಕ್ಕಳಿಗೆ ಪೋಷಕರು ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದ್ದಾರೆ.