ನವದೆಹಲಿ(ಜ.14): ಅನಿರೀಕ್ಷಿತ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇದೇ ಜ.17ರಂದು ನಡೆಯಬೇಕಿದ್ದ ಪಲ್ಸ್‌ ಪೋಲಿಯೋ ಲಸಿಕೆ ಕಾರ‍್ಯಕ್ರಮವನ್ನು ಮುಂದಿನ ಸೂಚನೆವರೆಗೂ ಮುಂದೂಡಲು ನಿರ್ಧರಿಸಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಈ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲ ರಾಜ್ಯ ಸರ್ಕಾರಗಳ ಆರೋಗ್ಯ ಇಲಾಖೆಗಳ ಪ್ರಧಾನ ಕಾರ‍್ಯದರ್ಶಿಗೆ ಜ.9ರಂದು ಪತ್ರ ರವಾನಿಸಿದೆ.

‘ರಾಷ್ಟ್ರೀಯ ರೋಗ ನಿರೋಧಕ ದಿನದ ಅಂಗವಾಗಿ ಜ.17ರಂದು 0-5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಕೆಲ ಅನಿರೀಕ್ಷಿತ ಬೆಳವಣಿಗೆಗಳ ಕಾರಣದಿಂದ ಮುಂದಿನ ಸೂಚನೆವರೆಗೂ ಲಸಿಕೆ ಕಾರ‍್ಯಕ್ರಮವನ್ನು ಮುಂದೂಡಲು ನಿರ್ಧರಿಸಲಾಗಿದೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಜ.16ರಿಂದ ದೇಶಾದ್ಯಂತ ಕೋವಿಡ್‌ ಲಸಿಕೆ ವಿತರಣಾ ಕಾರ‍್ಯಕ್ರಮ ನಡೆಯಲಿದ್ದು, ಇದರಲ್ಲಿ ಆರೋಗ್ಯಸಿಬ್ಬಂದಿಗಳು, ಅಂಗನವಾಡಿ ಕಾರ‍್ಯಕರ್ತೆಯರು ಭಾಗಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲಿಯೋ ಲಸಿಕೆ ಕಾರ‍್ಯಕ್ರಮವನ್ನು ಮುಂದೂಡಲಾಗಿದೆ.