ಬೆಂಗಳೂರು(ಡಿ.12): ಕೋವಿಡ್‌ ಎರಡನೇ ಅಲೆ ಎದುರಿಸಲು ರಾಜ್ಯ ಸರ್ವ ಸನ್ನದ್ಧವಾಗುತ್ತಿದೆ. ಈ ಉದ್ದೇಶಕ್ಕಾಗಿ ರಾಜ್ಯದ 40 ಆಸ್ಪತ್ರೆಗಳಲ್ಲಿ ಆಮ್ಲಜನಕ ಪೂರೈಕೆಗೆ 37.72 ಕೋಟಿ ರು., ಕೋವಿಡ್‌ ಪರೀಕ್ಷೆಗೆ 45 ಕೋಟಿ ರು. ಮತ್ತು ತುರ್ತು ಔಷಧ ಖರೀದಿಗೆ 22.50 ಕೋಟಿ ರು. ಸೇರಿ ಒಟ್ಟು 105 ಕೋಟಿ ರು. ಬಿಡುಗಡೆ ಪ್ರಸ್ತಾವಕ್ಕೆ ರಾಜ್ಯಮಟ್ಟದ ಕೋವಿಡ್‌ ನಿಯಂತ್ರಣ ಕಾರ್ಯಪಡೆ ಶುಕ್ರವಾರ ಒಪ್ಪಿಗೆ ನೀಡಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದ್ದಾರೆ. 

ವಿಧಾನಸೌಧದಲ್ಲಿ ಶುಕ್ರವಾರ ನಡೆದ ಕಾರ್ಯಪಡೆ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜನವರಿ-ಫೆಬ್ರವರಿಯಲ್ಲಿ ಎದುರಾಗಬಹುದಾದ ಕೊರೋನಾ ಸೋಂಕಿನ 2ನೇ ಅಲೆ ನಿಯಂತ್ರಣಕ್ಕೆ ಈಗಿನಿಂದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಲು ಸರ್ಕಾರ ಸೂಚನೆ ನೀಡಿದೆ. ಕೊರೋನಾ ಇನ್ನು ಮುಗಿದಿಲ್ಲ. ಲಸಿಕೆ ಬರುವವರೆಗೂ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು’ ಎಂದರು.

‘ಆರೋಗ್ಯ ಇಲಾಖೆಯಿಂದ ಮುಂಜಾಗ್ರತೆಯಾಗಿ ರಾಜ್ಯದ ಹತ್ತು ಜಿಲ್ಲಾ ಆಸ್ಪತ್ರೆಗಳು ಮತ್ತು 30 ತಾಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಪೂರೈಕೆ ವ್ಯವಸ್ಥೆ ಅಳವಡಿಸಲು ನಿರ್ಧರಿಸಲಾಗಿದೆ. ಎರಡು ವಿಭಿನ್ನ ತಾಂತ್ರಿಕ ವಿಧಾನಗಳ ಮೂಲಕ ಆಮ್ಲಜನಕ ಪೂರೈಕೆ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೆ 90 ದಿನಗಳ ಅವಧಿಯಲ್ಲಿ ಕೋವಿಡ್‌ ಪರೀಕ್ಷೆಗಾಗಿ 45 ಕೋಟಿ ರು. ವೆಚ್ಚ ಮಾಡಲು ಮಂಜೂರಾತಿ ನೀಡಲಾಗಿದ್ದು, ತಲಾ 10 ಲಕ್ಷ ಆರ್‌ಟಿಪಿಸಿಆರ್‌ ಮತ್ತು ರಾರ‍ಯಪಿಡ್‌ ಆ್ಯಂಟಿಜೆನ್‌ ಪರೀಕ್ಷಾ ಕಿಟ್‌ ಖರೀದಿಗೆ ಒಪ್ಪಿಗೆ ಸೂಚಿಸಲಾಗಿದೆ. ತುರ್ತು ಬಳಕೆಯ ಔಷಧಿ ಖರೀದಿಗಾಗಿ 22.50 ಕೋಟಿ ರು. ಬಿಡುಗಡೆ ಮಾಡುವ ಪ್ರಸ್ತಾವಕ್ಕೂ ಕಾರ್ಯಪಡೆ ಒಪ್ಪಿಗೆ ನೀಡಿದೆ’ ಎಂದು ವಿವರಿಸಿದರು.

ಕರ್ನಾಟಕದಲ್ಲಿ ತಗ್ಗಿದ ಕೊರೋನಾ ಅಬ್ಬರ: ಇಲ್ಲಿದೆ ಶುಕ್ರವಾರದ ಅಂಕಿ-ಸಂಖ್ಯೆ

‘2ನೇ ಅಲೆ ತಡೆಯಲು ಜನವರಿಯಿಂದ ಫೆಬ್ರವರಿ ಕೊನೆ ವರೆಗೂ ಯಾವುದೇ ಕಾರಣಕ್ಕೂ ಮಾರ್ಗಸೂಚಿ ಪಾಲನೆಯಲ್ಲಿ ನ್ಯೂನತೆಯಾಗಬಾರದು. ಆರಂಭಿಕ 2 ವಾರ ಮಾರ್ಗಸೂಚಿಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಕಾರ್ಯಪಡೆ ಸೂಚಿಸಿದೆ. ಅದರಂತೆ ನಾವು ಪ್ರಸ್ತುತ ಸೋಂಕು ಕಡಿಮೆ ಇದ್ದರೂ ಪರೀಕ್ಷೆ ಕಡಿಮೆ ಮಾಡಿಲ್ಲ. ನಿತ್ಯ ಸುಮಾರು 1 ಲಕ್ಷ ಆರ್‌ಟಿಪಿಸಿಆರ್‌ ಪರೀಕ್ಷೆ ಸೇರಿ ಒಟ್ಟು 1.25 ಲಕ್ಷ ಪರೀಕ್ಷೆ ನಡೆಯುತ್ತಿದ್ದು ಇದನ್ನು ಫೆಬ್ರವರಿ ಕೊನೆ ವರೆಗೂ ಮುಂದುವರೆಸಬೇಕೆಂದು ಸೂಚಿಸಲಾಗಿದೆ’ ಎಂದರು.

‘ಕಾರ್ಯಪಡೆ ಸೂಚನೆಯಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಯಾದಗಿರಿ, ದಕ್ಷಿಣ ಕನ್ನಡ, ಬೆಳಗಾವಿ, ಉಡುಪಿ, ಹಾವೇರಿ, ಬೀದರ್‌ ಮತ್ತು ರಾಯಚೂರು ಜಿಲ್ಲೆಗಳ ಅಧಿಕಾರಿಗಳ ಜತೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಲಾಗಿದೆ. ಹೆಚ್ಚಿನ ಪರೀಕ್ಷೆಗಳನ್ನು ನಡೆಸಲು ಇದೇ ವೇಳೆ ಸೂಚನೆ ನೀಡಲಾಗಿದೆ’ ಎಂದು ಸಚಿವರು ಹೇಳಿದರು.

ಲಸಿಕೆ ದಾಸ್ತಾನಿಗೆ ಸಿದ್ಧತೆ:

ಕೋವಿಡ್‌ ಲಸಿಕೆ ದಾಸ್ತಾನು ಮತ್ತು ವಿತರಣೆಗೆ ಸಿದ್ಧತೆ ಆರಂಭವಾಗಿದೆ. ಲಸಿಕೆ ಮತ್ತು ಅದನ್ನು ದಾಸ್ತಾನು ಇರಿಸಿಕೊಳ್ಳಲು ಅಗತ್ಯವಿರುವ ಯಂತ್ರೋಪಕರಣಗಳನ್ನು ಕೇಂದ್ರ ಸರ್ಕಾರವೇ ಒದಗಿಸಲಿದೆ. ಜಿಲ್ಲಾ ಮಟ್ಟದ ಲಸಿಕಾ ಕೇಂದ್ರಗಳಲ್ಲಿ ನಡೆದಿರುವ ಸಿದ್ಧತೆಯನ್ನು ಕಾರ್ಯಪಡೆ ಪರಿಶೀಲನೆ ನಡೆಸಿದೆ. ಬೆಂಗಳೂರಿನಲ್ಲಿ 3ನೇ ಹಂತದ ಕೋ ವ್ಯಾಕ್ಸಿನ್‌ ಕ್ಲಿನಿಕಲ್‌ ಟ್ರಯಲ್‌ ಪ್ರಾರಂಭಮಾಡಿದ್ದೇವೆ. ವ್ಯಾಕ್ಸಿನ್‌ ಲಭ್ಯವಾಗುವವರೆಗೂ ಜನರು ಎಚ್ಚರ ತಪ್ಪಬಾರದು ಎಂದರು.
ಮೊದಲ ಹಂತದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ದುಡಿಯುವವರಿಗೆ ಲಸಿಕೆ ನೀಡಲಾಗುವುದು. ಗಂಭೀರ ಸ್ವರೂಪದ ಕಾಯಿಲೆಗಳಿಂದ ಬಳಲುತ್ತಿರುವವರು ಹಾಗೂ ಹಿರಿಯ ನಾಗರಿಕರಿಗೆ ಎರಡನೇ ಹಂತದಲ್ಲಿ ಲಸಿಕೆ ನೀಡಲಾಗುವುದು. ಆದ್ಯತಾ ಪಟ್ಟಿಯನ್ನು ಸಿದ್ಧಪಡಿಸಿ ಲಸಿಕೆ ವಿತರಣೆಗಾಗಿ ಸಿದ್ಧಪಡಿಸಿರುವ ಮೊಬೈಲ್‌ ಆ್ಯಪ್‌ ಮತ್ತು ಐಸಿಎಂಆರ್‌ ವೆಬ್‌ಸೈಟ್‌ನಲ್ಲಿ ದಾಖಲಿಸುವ ಕೆಲಸ ಆರಂಭವಾಗಿದೆ ಎಂದರು.

ಕ್ರಮದ ಎಚ್ಚರಿಕೆ:

ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ರೆಮ್‌ಡೆಸಿವಿರ್‌ ಔಷಧಿಯನ್ನು ದುಬಾರಿ ದರಕ್ಕೆ ಮಾರಾಟ ಮಾಡುತ್ತಿರುವ ದೂರುಗಳು ಬಂದಿವೆ. ಪ್ರತಿ ಡೋಸ್‌ಗೆ 2,000ಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.