ಬೆಂಗಳೂರು(ನ.06): ಕೋವಿಡ್‌-19 ಹಿನ್ನೆಲೆಯಲ್ಲಿ ಈ ಬಾರಿ ದೀಪಾವಳಿಯಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸುವುದು ಸೂಕ್ತ ಎಂಬುದಾಗಿ ಪರಿಣತರು ಸಲಹೆ ನೀಡಿದ್ದಾರೆ. ಈ ಸಂಬಂಧ ಒಂದೆರಡು ದಿನಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ನಿರ್ಧಾರ ಪ್ರಕಟಿಸಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ತಾಂತ್ರಿಕ ಸಲಹಾ ಸಮಿತಿ ಹಾಗೂ ತಜ್ಞರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಮುಖವಾಗಿ ದೀಪಾವಳಿ ಹಬ್ಬ ಹತ್ತಿರುವಾಗುತ್ತಿದ್ದು ಈ ಬಾರಿ ಕೊರೋನಾ ಸೋಂಕು ನಿಯಂತ್ರಣ ಹಾಗೂ ಈಗಾಗಲೇ ಸೋಂಕು ತಗಲಿ ಗುಣಮುಖರಾಗಿರುವವರ ಆರೋಗ್ಯದ ದೃಷ್ಟಿಯಿಂದ ಪಟಾಕಿ ಸಿಡಿಸುವುದನ್ನು ನಿಷೇಧಿಸುವುದು ಒಳ್ಳೆಯದು. ಪಟಾಕಿ ಸಿಡಿಸುವುದರಿಂದ ಮಲಿನವಾಗುವ ಗಾಳಿಯನ್ನು ಸೇವಿಸುವುದರಿಂದ ಈಗಾಗಲೇ ಸೋಂಕಿತರಾಗಿದ್ದು, ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿರುವವರಿಗೆ ತೀವ್ರ ಸಮಸ್ಯೆಯಾಗಲಿದೆ ಎಂಬುದಾಗಿ ಪರಿಣತ ವೈದ್ಯರು ಸಲಹೆ ನೀಡಿದ್ದಾರೆ ಎಂದರು.

ರಾಜ್ಯದಲ್ಲಿ ದೀಪಾವಳಿಗೆ ಪಟಾಕಿಗೆ ನಿಷೇಧ?

ಆದರೆ, ದೀಪಾವಳಿ ನಮ್ಮ ರಾಜ್ಯ ದೇಶದ ಪಾರಂಪರಿಕ ಹಬ್ಬ. ಇದು ದೀಪಗಳ ಹಬ್ಬದ ಜೊತೆಗೆ ಪಟಾಕಿ ಸಿಡಿಸಿ ವೈಭವ ರೀತಿ ಆಚರಿಸಲಾಗುತ್ತದೆ. ಹಾಗಾಗಿ ಜನರ ಭಾವನೆಗಳನ್ನು ಕೆರಳಿಸದೆ ಸರಳವಾಗಿ ಹಬ್ಬ ಆಚರಿಸುವಂತಾಗಬೇಕಿದೆ. ಮುಖ್ಯಮಂತ್ರಿ ಅವರು ಬೆಂಗಳೂರಿಗೆ ಬಂದ ಬಳಿಕ ಪಟಾಕಿ ನಿಷೇಧಿಸುವ ಸಂಬಂಧ ತಜ್ಞರ ಸಲಹೆ ಸಂಬಂಧ ಚರ್ಚೆ ನಡೆಸಿ ಒಂದೆರಡು ದಿನಗಳಲ್ಲಿ ಸರ್ಕಾರದ ನಿರ್ಧಾರ ಪ್ರಕಟಿಸಲಾಗುವುದು ಎಂದು ಹೇಳಿದರು.