ಬೆಂಗಳೂರು(ಮಾ.20): ಕೈಗಾರಿಕೆಗಳ ಸ್ಥಾಪನೆ ಮಾಡುವ ವೇಳೆ ಸ್ಥಳೀಯರಿಗೆ ಉದ್ಯೋಗ ನೀಡದೆ ಉದ್ಯಮಿಗಳು ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಬೃಹತ್‌ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಪ್ರಶ್ನೆಗೆ ಉತ್ತರಿಸಿದ ಅವರು, ಕೈಗಾರಿಕೆಗಳಿಗೆ ಜಮೀನು ನೀಡುವ ವೇಳೆಯೇ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಜಮೀನು ನೀಡಿದ ಕುಟುಂಬಸ್ಥರಿಗೆ ಉದ್ಯೋಗ ನೀಡಬೇಕು. ಒಂದು ವೇಳೆ ಯಾವುದಾದರೂ ಕಾರಣವೊಡ್ಡಿ ಉದ್ಯೋಗ ನೀಡದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಇದರಲ್ಲಿ ಯಾವುದೇ ಮುಲಾಜಿಲ್ಲ. ರಸ್ತೆಗಾಗಿ ಜಮೀನು ಹೋಗಿದ್ದು, ನಮಗೆ ಸಂಬಂಧ ಇಲ್ಲ ಎಂದು ಉದ್ಯಮಿಗಳು ಹೇಳುವಂತಿಲ್ಲ. ಅವರಿಗೂ ಉದ್ಯೋಗ ನೀಡಬೇಕಾಗುತ್ತದೆ ಎಂದು ಹೇಳಿದರು.

ಬಿಎಸ್‌ವೈ ಸರ್ಕಾರಕ್ಕೆ ತಗಲಿರುವ ಭ್ರಷ್ಟಾಚಾರದ ವೈರಸ್‌ಗೆ ಎಲ್ಲಿಂದ ಲಸಿಕೆ ತರಬೇಕು?:ಸಿದ್ದು

ಮೈಸೂರಿನಲ್ಲಿ ಏಷ್ಯನ್‌ ಪೇಂಟ್‌ನವರು ಕಾರ್ಖಾನೆ ಸ್ಥಾಪನೆ ಮಾಡಿದ್ದು, ಅಲ್ಲಿ ಸ್ಥಳೀಯರಿಗ ಉದ್ಯೋಗ ಕೊಡುವುದಿಲ್ಲ ಎಂದು ಹೇಳಿದಾಗ ಸ್ವತಃ ನಾನೇ ಅಲ್ಲಿಗೆ ಭೇಟಿ ನೀಡಿ ಜಿಲ್ಲಾಧಿಕಾರಿ ಮತ್ತು ಕೆಐಡಿಬಿ ಅಧಿಕಾರಿಗಳ ಜತೆ ಸಭೆ ನಡೆಸಿ 70 ಮಂದಿ ಪೈಕಿ 54 ಮಂದಿಗೆ ಉದ್ಯೋಗ ಕೊಡಿಸಲಾಗಿದೆ. ಇನ್ನುಳಿದವರಿಗೂ ಉದ್ಯೋಗ ಕೊಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಕಾಂಗ್ರೆಸ್‌ ಸದಸ್ಯರಾದ ಡಾ. ಯತೀಂದ್ರ, ಪ್ರಿಯಾಂಕ್‌ ಖರ್ಗೆ ಹಾಗೂ ಪರಮೇಶ್ವರ್‌ ನಾಯ್ಕ್‌ ಮಾತನಾಡಿ, ಕೈಗಾರಿಕೆ ಸ್ಥಾಪಿಸಲು ರೈತರು ಜಮೀನು ನೀಡುತ್ತಾರೆ. ಅವರಿಗೆ ಉದ್ಯೋಗ ನೀಡುವುದಾಗಿ ಹೇಳುತ್ತಾರೆ. ಆದರೆ, ಉದ್ಯಮಿಗಳು ವಯಸ್ಸಿನ ನಿಬಂಧನೆ, ಕೌಶಲಾಭಿವೃದ್ಧಿ ಸಮಸ್ಯೆಗಳನ್ನೊಡ್ಡಿ ಉದ್ಯೋಗ ಕೊಡುವುದಿಲ್ಲ. ಇದಕ್ಕೆ ಒಂದು ನೀತಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಜಗದೀಶ್‌ ಶೆಟ್ಟರ್‌, ಕೈಗಾರಿಕೆ ನೀತಿಯಲ್ಲಿ ಇದನ್ನು ಅಳವಡಿಸಿದ್ದೇವೆ. ಕೌಶಲ್ಯವನ್ನು ಕಂಪನಿಯವರೇ ನೀಡಬೇಕು. ನಿಯಮ ಉಲ್ಲಂಘನೆಯಾಗಿರುವುದು ಗಮನಕ್ಕೆ ತಂದರೆ ಅಂತಹ ಉದ್ಯಮಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.