* ರಾಜ್ಯದಲ್ಲಿ ಮಕ್ಕಳಿಗೆ ವೈರಲ್ ಫೀವರ್* ಮಕ್ಕಳಿಗೆ ಜ್ವರ, ಕೆಮ್ಮು, ನೆಗಡಿ ಹಾಗೂ ಉಸಿರಾಟದ ತೊಂದರೆ * ಪ್ರತಿಕ್ರಿಯಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಸಚಿವ ಹಾಲಪ್ಪ ಆಚಾರ್

ಕೊಪ್ಪಳ, (ಸೆ.17): ರಾಜ್ಯದಲ್ಲಿ ಮಕ್ಕಳಿಗೆ ವೈರಲ್ ಫೀವರ್ ಹೆಚ್ಚಾಗಿರುವ ವಿಚಾರಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಸಚಿವ ಹಾಲಪ್ಪ ಆಚಾರ್ ಪ್ರತಿಕ್ರಿಯಿಸಿದ್ದಾರೆ.

ಕೊಪ್ಪಳದಲ್ಲಿ ಇಂದು (ಸೆ.17) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಕೊರೋನಾ ಮೂರನೇ ಅಲೆಯ ಮುನ್ಸೂಚನೆ ಅಲ್ಲ. ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ 3ನೇ ಅಲೆ ಮುನ್ಸೂಚನೆ ಎಂದು ಹೇಳಲಾಗಿದೆ. ಆದರೆ ರಾಜ್ಯದಲ್ಲಿ ಸದ್ಯ ಕೊವಿಡ್ ಪಾಸಿಟಿವಿ ಕಡಿಮೆಯಿದೆ. ಮಳೆಗಾಲ ಹಿನ್ನೆಲೆ ಮಕ್ಕಳಲ್ಲಿ ಡೆಂಘೀ ಕಾಣಿಸಿಕೊಳ್ಳುತ್ತಿದೆ. ಇದನ್ನು ಪ್ರತಿ ವರ್ಷ ನಾವು ನೋಡುತ್ತೇವೆ ಎಂದರು.

ರಾಯಚೂರು: ಒಂದೇ ವಾರದಲ್ಲಿ 20 ಮಕ್ಕಳಲ್ಲಿ ಡೆಂಘೀ ಜ್ವರ

ಈ ಬಾರಿ ರಾಜ್ಯದಲ್ಲಿ ಶೇಕಡಾ 20 ರಷ್ಟು ಮಳೆ ಹೆಚ್ಚಾಗಿದೆ. ಹೀಗಾಗಿ ಹೆಚ್ಚಾಗಿ ಮಕ್ಕಳಲ್ಲಿ ಡೆಂಘೀ ಕಾಣಿಸಿಕೊಳ್ಳುತ್ತಿದೆ. ಮಕ್ಕಳಷ್ಟೇ ಅಲ್ಲ, ದೊಡ್ಡವರನ್ನು ಕೂಡ ಡೆಂಘೀ ಕಾಡುತ್ತಿದೆ. ಆದರೆ ಇದು ಕೊರೊನಾ ಮೂರನೇ ಅಲೆ ಮುನ್ಸೂಚನೆ ಅಲ್ಲ ಎಂದು ಸ್ಪಷ್ಟಪಡಿಸಿದರು.

ಸುಮಾರು ವರ್ಷಗಳಿಂದ ಇಂಥ ಕಾಯಿಲೆ ನೋಡಿದ್ದೇವೆ. ಕೊರೋನಾಗೂ ಇದಕ್ಕೂ ಲಿಂಕ್ ಮಾಡುವುದು ಬೇಡ. ಕೊರೋನಾಗೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಮಕ್ಕಳಿಗೆ ಜ್ವರ, ಕೆಮ್ಮು, ನೆಗಡಿ ಹಾಗೂ ಉಸಿರಾಟದ ತೊಂದರೆ ಕಾಡುತ್ತಿದ್ದು, ಜಿಲ್ಲೆಗಳಲ್ಲಿ ಮಕ್ಕಳ ಆಸ್ಪತ್ರೆಗಳಲ್ಲಿ ಬೆಡ್‌ ಸಿಗುತ್ತಿಲ್ಲ.