ಕಲ್ಯಾಣ ಕ್ರಾಂತಿ ಮಾಡದೇ ಜನರಿಗೆ ಕಾಂಗ್ರೆಸ್ ಮೋಸ: ಸಚಿವ ಗೋವಿಂದ ಕಾರಜೋಳ
ಕಾಂಗ್ರೆಸ್ಸಿನವರು ಕಲ್ಯಾಣ ಕ್ರಾಂತಿ ಮಾಡದೆ ಜನರಿಗೆ ಮೋಸ ಮಾಡಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಟೀಕಿಸಿದರು.
ವಿಜಯಪುರ (ಡಿ.11): ಕಾಂಗ್ರೆಸ್ಸಿನವರು ಕಲ್ಯಾಣ ಕ್ರಾಂತಿ ಮಾಡದೆ ಜನರಿಗೆ ಮೋಸ ಮಾಡಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಟೀಕಿಸಿದರು. ಶನಿವಾರ ನಗರ ಹೊರ ವಲಯದ ಬುರಣಾಪುರ ಬಳಿ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸಲು ಕಲಬುರಗಿಯಲ್ಲಿ ಕಲ್ಯಾಣ ಕ್ರಾಂತಿ ಸಮಾವೇಶದ ಬಗ್ಗೆ ವ್ಯಂಗ್ಯವಾಡಿದರು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಲ್ಲಿ 60 ವರ್ಷ ಕಾಂಗ್ರೆಸ್ಸಿನವರು ಆಡಳಿತ ಮಾಡಿದ್ದಾರೆ.
ಕಲ್ಯಾಣ ಕರ್ನಾಟಕದಲ್ಲಿ ಖರ್ಗೆ ಅವರು 45 ವರ್ಷ ಆಡಳಿತ ಮಾಡಿದ್ದಾರೆ. ಆಗ ಅವರಿಗೆ ಕ್ರಾಂತಿ ಮಾಡಲು ಯಾರೂ ಬೇಡ ಎಂದಿರಲಿಲ್ಲ. ಬಸವಣ್ಣನವರ ಕ್ರಾಂತಿ ಮುಂದುವರಿಸಿದ್ದರೆ ನಾವೂ ಸಂತೋಷ ಪಡುತ್ತಿದ್ದೆವು. ಆದರೆ ಕಾಂಗ್ರೆಸ್ಸಿನವರು ಕಲ್ಯಾಣ ಕ್ರಾಂತಿ ಮಾಡದೆ ಜನರಿಗೆ ಮೋಸ ಮಾಡಿದರು. ಹಿಂದುಳಿದವರ ಏಳ್ಗೆ, ಎಸ್ಸಿ, ಎಸ್ಟಿಜನರ ಕಲ್ಯಾಣ ಆಗಲಿಲ್ಲ ಎಂದರು. ಅಭಿವೃದ್ಧಿ ಮಾಡದೆ ಉತ್ತರ ಕರ್ನಾಟಕ ನಿರ್ಲಕ್ಷ್ಯ ಮಾಡಿದರು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬಿಜೆಪಿ ಹೆಚ್ಚಿನ ಒತ್ತು ನೀಡುತ್ತಿದೆ.
ಸಿದ್ದರಾಮಯ್ಯ ಬಳಿ ಕಾಂಗ್ರೆಸ್ ತತ್ವ ಸಿದ್ದಾಂತವೇ ಇಲ್ಲ: ಸಚಿವ ಕಾರಜೋಳ ವ್ಯಂಗ್ಯ
ಕಲಬುರಗಿಗೂ ಮೊದಲೇ ವಿಜಯಪುರದಲ್ಲಿ ಖರ್ಗೆ ವಿಮಾನ ನಿಲ್ದಾಣ ಮಾಡಲಿಲ್ಲ. ಕಲಬುರಗಿಗಿಂತಲೂ ಹೆಚ್ಚು ಮಹತ್ವ ವಿಜಯಪುರ ಜಿಲ್ಲೆಗಿದೆ. ಇದು ಐತಿಹಾಸಿಕ ಜಿಲ್ಲೆಯಾಗಿದೆ. ಗೋಳಗುಮ್ಮಟ ಹಾಗೂ ಇತರೆ ಸ್ಮಾರಕಗಳ ವೀಕ್ಷಣೆಗೆ 200 ದೇಶಗಳ ಪ್ರವಾಸಿಗರು ಬರುತ್ತಾರೆ. ಹಾಗಾಗಿ ಇಲ್ಲಿ ಮೊದಲು ವಿಮಾನ ನಿಲ್ದಾಣ ಆಗಬೇಕಿತ್ತು ಎಂದು ಸಚಿವ ಕಾರಜೋಳ ಹೇಳಿದರು. ಕಾಂಗ್ರೆಸ್ ಅಳಿವಿನ ಅಂಚಿನಲ್ಲಿದೆ. ಅಭಿವೃದ್ಧಿಯಾಗಬೇಕಾದರೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.
ಫೆ.15ರೊಳಗೆ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಿ: ಫೆ.15ರೊಳಗೆ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಲು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಶನಿವಾರ ನಗರ ಹೊರ ವಲಯದ ಬುರಣಾಪುರ ಬಳಿ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಪರಿಶೀಲಿಸಿ ಮಾತನಾಡಿದರು. ವಿಮಾನ ನಿಲ್ದಾಣ ಹಾಗೂ ವಿಮಾನ ಹಾರಾಟಕ್ಕೆ ಸಂಬಂಧಿಸಿದಂತೆ ಕೇಂದ್ರ ಪರಿಸರ ಇಲಾಖೆಯ ನಿರಾಕ್ಷೇಪಣಾ ಪತ್ರ ಪಡೆದುಕೊಳ್ಳುವ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ನವದೆಹಲಿಗೆ ತೆರಳಿ ಕೇಂದ್ರ ಸಚಿವ ಭೂಪೇಂದ್ರ ಯಾದವ ಅವರನ್ನು ಭೇಟಿ ಮಾಡಿ ಚರ್ಚಿಸಿ ಶೀಘ್ರ ಅನುಮತಿಯನ್ನು ಸಹ ಪಡೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಪ್ಯಾಸೆಂಜರ್ ಟರ್ಮಿನಲ್ ಬಿಲ್ಡಿಂಗ್, ಇ.ಟಿ.ಸಿ. ಬಿಲ್ಡಿಂಗ್, ಬೌಂಡ್ರಿ ವಾಲ್ಸ್ ಸೇರಿದಂತೆ ರನ್‌ವೇ ಕಾಮಗಾರಿಗಳನ್ನು ವೀಕ್ಷಿಸಿದ ಸಚಿವರು ಸರ್ವೇ ಪೋಲ್‌ನ್ನು ವೀಕ್ಷಿಸಿ ಕಾಮಗಾರಿಯನ್ನು ತಾಂತ್ರಿಕವಾಗಿ ಪರಿಶೀಲನೆ ನಡೆಸಿದರು. ಈಗಾಗಲೇ ಅಧಿಕಾರಿಗಳಿಗೆ ಸ್ಪಷ್ಟವಾದ ನಿರ್ದೇಶನ ನೀಡಲಾಗಿದೆ, ಜಮೀನು ಸಮತಟ್ಟು ಮಾಡುವ ಕಾರ್ಯ ಕೈಗೊಳ್ಳುವ ಉದ್ದೇಶದಿಂದ ಕಾಮಗಾರಿ ಸ್ವಲ್ಪ ವಿಳಂಬವಾಗಿದೆ, ಆದರೂ ವೇಗದಿಂಧ ಕಾಮಗಾರಿ ಕೈಗೊಂಡು ಬರುವ ಫೆಬ್ರವರಿ 15ರೊಳಗೆ ಕಾಮಗಾರಿ ಸಂಪೂರ್ಣಗೊಂಡು ವಿಮಾನಗಳು ಹಾರಾಟ ನಡೆಸಲಿವೆ ಎಂದು ಹೇಳಿದರು.
ಬಡವರ ಮಕ್ಕಳ ಅಭ್ಯುದಯಕ್ಕೂ ಅವಕಾಶ: ಸಚಿವ ಕೋಟ ಶ್ರೀನಿವಾಸ ಪೂಜಾರಿ
ವಿಮಾನ ನಿಲ್ದಾಣ ರಸ್ತೆಗೆ ಸಂಬಂಧಿಸಿದಂತೆ ಈಗಾಗಲೇ 727 ಎಕರೆ ಜಮೀನನ್ನು ಡಿನೋಟಿಫಿಕೇಶನ್ ಮಾಡಲಾಗಿದೆ. ವಿಜಯಪುರ ತಾಲೂಕಿನ ಬುರಣಾಪುರ-ಮದಭಾವಿ ಜಿಲ್ಲಾ ಮುಖ್ಯ ರಸ್ತೆಯಿಂದ ವಿಮಾನ ನಿಲ್ದಾಣದ ಕೂಡುವ ರಸ್ತೆಗೆ . 4.95 ಕೋಟಿ ಲೋಕೋಪಯೋಗಿ ಇಲಾಖೆಯಿಂದ, ಇನ್ನೂ ಎರಡು ರಸ್ತೆಗಳಾದ ಮದಬಾವಿ ಲಂಬಾಣಿ ತಾಂಡಾದಿಂದ ದೊಡ್ಡಿ ದ್ಯಾಬೇರಿಯವರೆಗೆ ಪರಿಶಿಷ್ಟಜಾತಿ ಕಾಲನಿಗೆ ಕೂಡುವ ರಸ್ತೆ . 4.50 ಕೋಟಿಗಳಲ್ಲಿ, ಮತ್ತು ಬುರಣಾಪುರ ಎಸ್.ಸಿ. ಕಾಲೋನಿಯಿಂದ ಅಲಿಯಾಬಾದ ಎಸ್.ಸಿ. ಕಾಲೋನಿಯವರೆಗೆ ಹೋಗುವ ರಸ್ತೆ, ವಿಮಾನ ನಿಲ್ದಾಣದ ಸುತ್ತಮುತ್ತ ಯಾವುದೇ ಅಡೆತಡೆ ಉಂಟಾಗಬಾರದು ಎಂಬ ದೃಷ್ಟಿಯಿಂದ ರಸ್ತೆ ನಿರ್ಮಾಣಕ್ಕಾಗಿ ಜಲಸಂಪನ್ಮೂಲ ಇಲಾಖೆಯಿಂದ ಕೂಡ . 9.50 ಕೋಟಿ ಅನುದಾನಕ್ಕೆ ಮಂಜೂರಾತಿ ನೀಡಲಾಗಿದ್ದು, ಕೂಡಲೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.