Asianet Suvarna News Asianet Suvarna News

ಸಚಿವರ ಆದೇಶದಿಂದ ಮಲೆನಾಡಿಗರಲ್ಲಿ ಗೊಂದಲ ಸೃಷ್ಟಿ; ಅರಣ್ಯ-ಕಂದಾಯ ಇಲಾಖೆ ಜಂಟಿ ಸರ್ವೆಗೆ ಆಗ್ರಹ

ಅರಣ್ಯ ಭೂಮಿ ಒತ್ತುವರಿ ತೆರವು ಸಂಬಂಧ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಇತ್ತೀಚೆಗೆ ಹೊರಡಿಸಿರುವ ಆದೇಶವು ಮಲೆನಾಡು ಜನರಲ್ಲಿ ಗೊಂದಲ ಸೃಷ್ಟಿ ಮಾಡಿದ್ದು, ಅರಣ್ಯ-ಕಂದಾಯ ಇಲಾಖೆ ಜಂಟಿಯಾಗಿ ಸರ್ವೆ ಮಾಡುವಂತೆ ಆಗ್ರಹಿಸಿದ್ದಾರೆ.

Minister eshwar khandres order on forest encroachment creates confusion in malenadu farmers rav
Author
First Published Aug 19, 2024, 10:30 PM IST | Last Updated Aug 19, 2024, 10:30 PM IST

ಚಿಕ್ಕಮಗಳೂರು: ಅರಣ್ಯ ಭೂಮಿ ಒತ್ತುವರಿ ತೆರವು ಸಂಬಂಧ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಇತ್ತೀಚೆಗೆ ಹೊರಡಿಸಿರುವ ಆದೇಶವು ಒಂದು ರೀತಿ ನಾಮಕಾವಸ್ತೆಯೆ ಎನ್ನುವ ಪ್ರಶ್ನೆ ಎದುರಾಗಿದ್ದು, ಮತ್ತೊಂದೆಡೆ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಜೀವನೋಪಾಯಕ್ಕಾಗಿ ದಶಕಗಳ ಹಿಂದೆಯೇ ಸಣ್ಣ ಪ್ರಮಾಣದ ಒತ್ತುವರಿ ಮಾಡಿದವರಲ್ಲಿ ಆದೇಶ ಆತಂಕ ತರಿಸಿದೆ. 2015 ರ ನಂತರ ಅರಣ್ಯ ಭೂಮಿ ಒತ್ತುವರಿ ಮಾಡಿ ಅಭಿವೃದ್ಧಿ ಪಡಿಸಲಾದ ತೋಟ, ಹೋಂಸ್ಟೇ ಇನ್ನಿತರೆಗಳನ್ನು ಕೂಡಲೇ ತೆರವು ಗೊಳಿಸಬೇಕು ಎಂದು ಸಚಿವರು ಆದೇಶದಲ್ಲಿ ತಿಳಿಸಿದ್ದಾರೆ. ಆದರೆ 2015ರ ನಂತರ ಅರಣ್ಯ ಒತ್ತುವರಿ ಮಾಡಿರುವ ಪ್ರಕರಣಗಳು ವಿರಳಾತಿ ವಿರಳವಾಗಿವೆ. 

 ಅರಣ್ಯ ಇಲಾಖೆಯ ಬಳಿಯೇ ಸ್ಪಷ್ಟ ಮಾಹಿತಿಗಳಿಲ್ಲ 

ಇತ್ತೀಚಿನ ವರ್ಷಗಳಲ್ಲಿ ಒಂದು ಸಣ್ಣ ಮರದ ಕೊಂಬೆಯನ್ನೂ ಅರಣ್ಯದಿಂದ ಹೊತ್ತು ತರಲು ಸಾಧ್ಯವಾಗದ ಮಟ್ಟಿಗೆ ಇಲಾಖೆ ಸಿಬ್ಬಂದಿ ಹದ್ದಿನ ಕಣ್ಣಿಟ್ಟಿರುತ್ತಾರೆ. ಹೀಗಿರುವಾಗ ಅರಣ್ಯ ಒತ್ತುವರಿ ಮಾಡಿ ತೋಟ, ಹೋಂಸ್ಟೇ ಮಾಡಲು ಸಾಧ್ಯವೇ ಎಂದು ಹಲವು ಮಂದಿ ಪ್ರಶ್ನಿಸುತ್ತಾರೆ.ಇದೇ ವೇಳೆ ಹೋಂಸ್ಟೇ ಇನ್ನಿತರೆ ಕಟ್ಟಡಗಳನ್ನು ನಿರ್ಮಿಸುವಾಗ ಸಂಬಂಧ ಪಟ್ಟ ಪ್ರಾಧಿಕಾರಗಳಿಂದ ಸುಲಭಕ್ಕೆ ಅನುಮತಿಯೂ ಸಿಗುವುದಿಲ್ಲ. ಅದರಲ್ಲೂ ಮಲೆನಾಡು ಭಾಗದಲ್ಲಿ ಯಾವುದೇ ಯೋಜನೆಗೆ ಅನುಮತಿ ನೀಡುವ ಮುಂಚೆ ಅರಣ್ಯ ಇಲಾಖೆ ಅಭಿಪ್ರಾಯ ಪಡೆಯಲೇ ಬೇಕಾದ ಸ್ಥಿತಿ ಇದೆ. ಅಲ್ಲದೆ ಜಾಗಕ್ಕೆ ಸಂಬಂಧಪಟ್ಟ  ದಾಖಲಾತಿಗಳೂ ಸೇರಿದಂತೆ ಎಲ್ಲಾ ರೀತಿಯ ಕಾಗದ ಪತ್ರಗಳು ಕಾನೂನುಬದ್ಧವಾಗಿದ್ದರೆ ಮಾತ್ರ ಅನುಮತಿ ಸಿಗಲು ಸಾಧ್ಯವಾಗುತ್ತದೆ. ಅವುಗಳ ಉಲ್ಲಂಘನೆ ಆಗಿದ್ದರೆ ತಾನಾಗಿಯೇ ಅದು ಅಕ್ರಮ ಎನಿಸಿಕೊಳ್ಳುತ್ತದೆ. ಜಿಲ್ಲಾಡಳಿತ, ಸ್ಥಳೀಯ ಪ್ರಾಧಿಕಾರಗಳೇ ಕಾನೂನು ಕ್ರಮ ಕೈಗೊಳ್ಳಲು ಈಗಾಗಲೇ ಅವಕಾಶವಿರುವಾಗ ಅದಕ್ಕೆ ಸಚಿವರ ಆದೇಶ ಬೇಕಾಗುತ್ತದೆಯೇ ಎಂದು ಹಲವು ಮಂದಿ ಪ್ರಶ್ನಿಸುತ್ತಾರೆ.2015 ರ ನಂತರ ನಡೆದ ಅರಣ್ಯ ಒತ್ತುವರಿ ಪ್ರಕರಣಗಳ ಸಂಬಂಧ ಅರಣ್ಯ ಇಲಾಖೆ ಬಳಿಯೇ ಸ್ಪಷ್ಟ ಮಾಹಿತಿಗಳಿಲ್ಲ ಎಂದು ಇಲಾಖೆ ಮೂಲಗಳು ಹೇಳುತ್ತವೆ. 

ಗುಮ್ಮಟನಗರಿ ವಿಜಯಪುರದಲ್ಲಿ ಚಿರತೆ ಪ್ರತ್ಯಕ್ಷ; ನಾಗರದಿನ್ನಿ ಗ್ರಾಮಸ್ಥರಲ್ಲಿ ಆತಂಕ!

ಜಂಟಿ ಸರ್ವೇಗೆ ಒತ್ತಾಯ : 

ಈ ನಡುವೆ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಒತ್ತುವರಿ ಮಾಡಿ ಅಭಿವೃದ್ಧಿಪಡಿಸಲಾದ ತೋಟಗಳನ್ನು ತೆರವುಗೊಳಿಸುವ ಕಾರ್ಯ ಅಲ್ಲಲ್ಲಿ ಅರಣ್ಯ ಇಲಾಖೆಯಿಂದ ನಡೆಯುತ್ತಿದೆ. 2015 ಕ್ಕಿಂತಲೂ ಹಿಂದೆಯೇ ಜೀವನೋಪಾಯಕ್ಕಾಗಿ ಸಣ್ಣ ಪುಟ್ಟ ಒತ್ತುವರಿ ಮಾಡಿದವರನ್ನೂ ಆತಂಕಕ್ಕೆ  ದೂಡಿದೆ.ಒಂದರಿಂದ ಮೂರ್ನಾಲ್ಕು ಎಕರೆ ವರೆಗಿನ ಅರಣ್ಯ ಒತ್ತುವರಿ ತೆರವಿಗೆ ಅವಕಾಶ ಕೊಡುವುದಿಲ್ಲ ಎಂದು ಎಲ್ಲಾ ಪಕ್ಷದ ಚುನಾಯಿತ ಪ್ರತಿನಿಧಿಗಳು ಮುಖಂಡರು ಭರವಸೆ ನೀಡುತ್ತಾರಾದರೂ ಈಗಾಗಲೇ ಚಿಕ್ಕಮಗಳೂರು ತಾಲ್ಲೂಕು ಮಸಗಲಿ ಮೀಸಲು ಅರಣ್ಯದಲ್ಲಿ 211 ಕುಟುಂಬಗಳು 340 ಎಕರೆ ಒತ್ತುವರಿ ಮಾಡಿವೆ. ಅವುಗಳನ್ನು ಇಲಾಖೆ ಮುಲಾಜಿಲ್ಲದೆ ತೆರವುಗೊಳಿಸಲು ಮುಂದಾಗಿರುವುದು ಆತಂಕಕ್ಕೆ ಪ್ರಮುಖ ಕಾರಣವಾಗಿದೆ.2015 ಕ್ಕಿಂತ ಹಿಂದೆ ಒತ್ತುವರಿ ಮಾಡಿರುವ ಜಮೀನುಗಳನ್ನು ಅರಣ್ಯ ಮತ್ತು ಕಂದಾಯ ಇಲಾಖೆ ಜಂಟೀ ಸರ್ವೇ ಕಾರ್ಯಪೂರ್ಣಗೊಂಡ ನಂತರವೇ ತೆರವು ಕಾರ್ಯ ಆರಂಭಿಸಬೇಕು ಎನ್ನುವುದು ಒತ್ತುವರಿದಾರರ ಆಗ್ರಹವಾಗಿದೆ. ಹಿಂದೆ ಗೋಮಾಳ ಸೇರಿದಂತೆ ಇತರೆ ಸರ್ಕಾರಿ ಜಮೀನುಗಳಲ್ಲಿ ಜನರು ಬದುಕು ಕಟ್ಟಿಕೊಂಡಿದ್ದಾರೆ. ಅಂತಹ ಭೂಮಿಯನ್ನೂ ಅರಣ್ಯ ಇಲಾಖೆ ನಮ್ಮದೆಂದು ಹೇಳುತ್ತಲೇ ಬಂದಿದೆ. ಇನ್ನೊಂದಷ್ಟು ಜಮೀನನ್ನು ಡೀಮ್ಡ್ ಎಂದು ಘೋಷಿಸಲಾಗಿದೆ. ಅದರಲ್ಲಿ ಜನವಸತಿ ಸೇರಿದಂತೆ ಎಲ್ಲಾ ಮೂಲ ಸೌಕರ್ಯಗಳಿರುವ ಗ್ರಾಮಗಳೂ ಇವೆ. ಈ ಎಲ್ಲಾ ಗೊಂದಲಗಳು ಬಗೆಹರಿಯಬೇಕಾದಲ್ಲಿ ಜಂಟೀ ಸರ್ವೆಯೇ ಪರಿಹಾರ ಎನ್ನುವ ಮಾತುಗಳು ಕೇಳಿಬಂದಿದೆ.

Latest Videos
Follow Us:
Download App:
  • android
  • ios