ಕೊರೋನಾ ಸಾವು ಹೆಚ್ಚಳ: ಬದ್ಧತೆಯಿಂದ ಕೆಲಸ ಮಾಡಲು ಅಧಿಕಾರಿಗಳಿಗೆ ಸುಧಾಕರ್ ತಾಕೀತು!
ನಗರದಲ್ಲಿ ಕೊರೋನಾ ಸಾವಿನ ಸಂಖ್ಯೆ ಹೆಚ್ಚಳ: ಸಚಿವರ ತರಾಟೆ| ಬದ್ಧತೆಯಿಂದ ಕೆಲಸ ಮಾಡಲು ಅಧಿಕಾರಿಗಳಿಗೆ ಸುಧಾಕರ್ ತಾಕೀತು
ಬೆಂಗಳೂರು(ಜೂ.27): ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಲಭ್ಯ ಮಾನವ ಸಂಪನ್ಮೂಲ ಮತ್ತು ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಬದ್ಧತೆಯಿಂದ ಕಾರ್ಯ ನಿರ್ವಹಿಸಲು ಸೂಚಿಸಿದ್ದಾರೆ.
ಪೊಲೀಸ್ ಕಮಿಷನರ್ ಕಚೇರಿಯಲ್ಲೇ ಕೊರೋನಾ ಸೋಂಕು!
ಗೃಹ ಕ್ವಾರಂಟೈನ್‌ನಲ್ಲಿರುವ ಸಚಿವರು ಶುಕ್ರವಾರ ತಮ್ಮ ಮನೆಯಿಂದಲೇ ಆರೋಗ್ಯ ಇಲಾಖೆ, ವೈದ್ಯಕೀಯ ಇಲಾಖೆ, ಬಿಬಿಎಂಪಿಯ ಹಿರಿಯ ಅಧಿಕಾರಿಗಳು ಹಾಗೂ ಬೌರಿಂಗ್, ವಿಕ್ಟೋರಿಯಾ ಮತ್ತು ರಾಜೀವ್ ಗಾಂಧಿ ಎದೆ ರೋಗ ಆಸ್ಪತ್ರೆಗಳ ನಿರ್ದೇಶಕರೊಂದಿಗೆ ವಿಡಿಯೋ ಸಂವಾದ ನಡೆಸಿದರು.
ಕಳೆದ ಕೆಲ ದಿನಗಳಿಂದ ನಗರದಲ್ಲಿ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಇದನ್ನು ತಡೆಯಲು ಪರಿಣಾಮಕಾರಿ ಕಾರ್ಯಗಳಾಗಬೇಕಿದೆ. ರೋಗಿಗಳ ಸಂಖ್ಯೆಗೆ ಅನುಗುಣವಾಗಿ ವೈದ್ಯರು ಮತ್ತು ಶುಶ್ರೂಷಕ ಸಿಬ್ಬಂದಿ ಇರುವಂತೆ ನೋಡಿಕೊಳ್ಳಿ. ವಿಶೇಷವಾಗಿ ಐಸಿಯು ಹಾಗೂ ಆಕ್ಸಿಜನ್ ವಾರ್ಡುಗಳಲ್ಲಿ ಮೂರು ರೋಗಿಗಳಿಗೆ ಒಬ್ಬ ನರ್ಸ್ ಕಡ್ಡಾಯವಾಗಿ ಇರಬೇಕು. ಕೊರತೆಯಿರುವ ಕಡೆ ತಾತ್ಕಾಲಿಕ ನೇಮಕ ಮಾಡಿಕೊಳ್ಳಿ. ನೇಮಕ ಆಗುವತನಕ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ನಿಯೋಜಿಸುವಂತೆ ಸೂಚಿಸಿದರು.
ದೇಶದಲ್ಲಿ 5,00,000 ಕೇಸ್: ಐದೇ ದಿನದಲ್ಲಿ 4ರಿಂದ 5 ಲಕ್ಷಕ್ಕೇರಿದ ಸೋಂಕಿತರು!
ಕೋವಿಡ್ ಕೇರ್ ಸೆಂಟರ್ ಹಾಗೂ ಸಾಮಾನ್ಯ ವಾರ್ಡುಗಳಲ್ಲಿರುವ ತರಬೇತಿ ಪಡೆದವರನ್ನು ಐಸಿಯು ಮತ್ತು ಆಕ್ಸಿಜನ್ ವಾರ್ಡುಗಳಿಗೆ ವರ್ಗಾಯಿಸಿ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಇತರೆ ಕೇಂದ್ರಗಳಿಗೆ ಬಳಸಬಹುದು. ವೈದ್ಯರ ಕೊರತೆ ನಿವಾರಿಸಿಕೊಳ್ಳಲು ಆಯುಷ್ ಮತ್ತು ಪಿಜಿ ವಿದ್ಯಾರ್ಥಿಗಳನ್ನು ಆದ್ಯತೆ ಮೇರೆಗೆ ಬಳಸಿಕೊಳ್ಳಿ. ಊಟ ಮತ್ತು ಶುಚಿತ್ವದ ಕೊರತೆ ನಿಭಾಯಿಸಲು ಒಬ್ಬೊಬ್ಬ ಅಧಿಕಾರಿಗೆ ಒಂದೊಂದು ಹೊಣೆ ನೀಡಿ. ಮತ್ತೆ ಈ ವಿಚಾರದಲ್ಲಿ ದೂರುಗಳು ಕೇಳಿ ಬರಬಾರದು ಎಂದು ತಾಕೀತು ಮಾಡಿದ್ದಾರೆ.