ಬೆಂಗಳೂರು(ಫೆ.21):  ಒಕ್ಕಲಿಗ ಸೇರಿದಂತೆ ಯಾವುದೇ ಸಮುದಾಯದ ಮೀಸಲಾತಿ ಹೋರಾಟಕ್ಕೂ ನನ್ನ ಬೆಂಬಲ ಇಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿ ಶನಿವಾರ ಸುದ್ದಿಗೋಷ್ಠಿ ವೇಳೆ ಮೀಸಲಾತಿಗೆ ಕೇಳಿಬರುತ್ತಿರುವ ಒತ್ತಾಯ, ಹೋರಾಟಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ಮೀಸಲಾತಿ ಹೋರಾಟಕ್ಕೆ ನನ್ನ ಬೆಂಬಲ ಇಲ್ಲ. ಹಲವಾರು ಬಾರಿ ಇಂತಹ ಹೋರಾಟಗಳು ನಡೆದಿವೆ. ಮೀಸಲಾತಿಯನ್ನು ಎಲ್ಲ ಸಮುದಾಯಗಳೂ ಕೇಳಲಾರಂಭಿಸಿವೆ. ಮೀಸಲಾತಿಗೆ ಸಂಬಂಧಿಸಿದ ನಿರ್ಧಾರಗಳು ಸಂವಿಧಾನದ ಚೌಕಟ್ಟಿನಲ್ಲೇ ಆಗಬೇಕಿದೆ. ತರಾತುರಿಯಲ್ಲಿ ಯಾವುದನ್ನೂ ಮಾಡಲು ಆಗಲ್ಲ ಎಂದರು.

ಪಂಚಮಸಾಲಿ 2ಎಗೆ ಸೇರಿಸಿದರೆ ಇತರರಿಗೆ ಅನ್ಯಾಯ!

ಮೀಸಲಾತಿಗಾಗಿ ಒಕ್ಕಲಿಗರ ಸಮುದಾಯವೂ ಬೇಡಿಕೆ ಇಟ್ಟಿದೆಯಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ, ಒಕ್ಕಲಿಗರು ನಾವ್ಯಾರೂ ಬೀದಿಗೆ ಬಂದು ಇಳಿದಿಲ್ಲ. ಮೀಸಲಾತಿಗೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಒಂದು ಸಮಿತಿ ರಚನೆಯಾಗಲಿದೆ. ನೋಡೋಣ ಮುಂದೆ ಏನಾಗುತ್ತದೆ ಅಂತ. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರು ನನ್ನನ್ನು ಕರೆದು ಚರ್ಚೆ ಮಾಡಿದರೆ ಅವರ ನಡೆ, ನಿರ್ದೇಶನವನ್ನು ಆಧರಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.