ಕೇಂದ್ರದ ವರದಿ ಬಳಿಕ ಬೆಳೆ ಹಾನಿ ಪರಿಹಾರ: ಸಚಿವ ಚೆಲುವರಾಯಸ್ವಾಮಿ
ರಾಜ್ಯದಲ್ಲಿ ಸೃಷ್ಟಿಯಾಗಿರುವ ಬರದ ಹಿನ್ನೆಲೆಯಲ್ಲಿ 39.74 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶದಲ್ಲಿ ಬೆಳೆ ನಷ್ಟವುಂಟಾಗಿದೆ. ಸದ್ಯ ಮಳೆಯಾಗುತ್ತಿದ್ದರೂ, ಬೆಳೆ ನಷ್ಟವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಎಲ್ಲದರ ಬಗ್ಗೆ ಕೇಂದ್ರ ಸರ್ಕಾರದಿಂದ ಬಂದ ಬರ ಅಧ್ಯಯನ ತಂಡಕ್ಕೂ ಮಾಹಿತಿ ನೀಡಲಾಗಿದೆ. ಅಲ್ಲದೆ, ಕೇಂದ್ರದ ತಂಡವೂ ರಾಜ್ಯದ ಪರಿಸ್ಥಿತಿ ಬಗ್ಗೆ ಅರಿತಿದೆ. ಅದಕ್ಕೆ ತಕ್ಕಂತೆ ಪರಿಹಾರ ನೀಡಲಿದೆ ಎಂಬ ವಿಶ್ವಾವಿದೆ ಎಂದ ಚೆಲುವರಾಯಸ್ವಾಮಿ
ಬೆಂಗಳೂರು(ಅ.13): ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡವು ಶೀಘ್ರದಲ್ಲಿ ರಾಜ್ಯ ಸರ್ಕಾರಕ್ಕೆ ಸ್ಪಷ್ಟತಾ ವರದಿ ನೀಡಲಿದ್ದು, ಅದಾದ ನಂತರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ರೈತರಿಗೆ ಮಧ್ಯಂತರ ಬೆಳೆ ಪರಿಹಾರ ನೀಡುವುದು ಸೇರಿದಂತೆ ರೈತರಿಗೆ ಹೇಗೆ ನೆರವಾಗಬೇಕು ಎಂಬ ಬಗ್ಗೆ ನಿರ್ಧರಿಸಲಾಗುವುದು ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ, ರಾಜ್ಯದಲ್ಲಿ ಸೃಷ್ಟಿಯಾಗಿರುವ ಬರದ ಹಿನ್ನೆಲೆಯಲ್ಲಿ 39.74 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶದಲ್ಲಿ ಬೆಳೆ ನಷ್ಟವುಂಟಾಗಿದೆ. ಸದ್ಯ ಮಳೆಯಾಗುತ್ತಿದ್ದರೂ, ಬೆಳೆ ನಷ್ಟವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಎಲ್ಲದರ ಬಗ್ಗೆ ಕೇಂದ್ರ ಸರ್ಕಾರದಿಂದ ಬಂದ ಬರ ಅಧ್ಯಯನ ತಂಡಕ್ಕೂ ಮಾಹಿತಿ ನೀಡಲಾಗಿದೆ. ಅಲ್ಲದೆ, ಕೇಂದ್ರದ ತಂಡವೂ ರಾಜ್ಯದ ಪರಿಸ್ಥಿತಿ ಬಗ್ಗೆ ಅರಿತಿದೆ. ಅದಕ್ಕೆ ತಕ್ಕಂತೆ ಪರಿಹಾರ ನೀಡಲಿದೆ ಎಂಬ ವಿಶ್ವಾವಿದೆ ಎಂದರು.
ನಿರುದ್ಯೋಗಿಗಳಿಗೆ ಸಂತಸ ಸುದ್ದಿ ನೀಡಿದ ಸಚಿವ ಚೆಲುವರಾಯಸ್ವಾಮಿ
ಕೇಂದ್ರ ಸರ್ಕಾರದಿಂದ ಬರ ಪರಿಹಾರವಾಗಿ 4,860 ಕೋಟಿ ರು. ನೀಡುವಂತೆ ಕೋರಲಾಗಿದೆ. ಕೇಂದ್ರದ ತಂಡವು ಅಧ್ಯಯನ ನಡೆಸಿದ್ದು, ರಾಜ್ಯ ಸರ್ಕಾರದಿಂದ ಎಲ್ಲ ರೀತಿಯ ಅಗತ್ಯ ಮಾಹಿತಿ ನೀಡಲಾಗಿದೆ. ಕೇಂದ್ರ ತಂಡವು ಸಕಾರಾತ್ಮಕವಾಗಿ ಸ್ಪಂದಿಸಿ ಪರಿಹಾರ ದೊರಕಿಸುವುದಾಗಿ ತಿಳಿಸಿದೆ. ಆದರೆ, ಕೇಂದ್ರ ಸರ್ಕಾರದಿಂದ ಪರಿಹಾರವು ವಿಳಂಬವಾಗಲಿದ್ದು, ಅದಕ್ಕಾಗಿ ರೈತರಿಗೆ ರಾಜ್ಯ ಸರ್ಕಾರದಿಂದಲೇ ಮಧ್ಯಂತರ ಪರಿಹಾರ ನೀಡುವ ಬಗ್ಗೆಯೂ ಚರ್ಚಿಸಲಾಗುತ್ತಿದೆ. ಕೇಂದ್ರ ತಂಡವು ತನ್ನ ಅಧ್ಯಯನದ ಕುರಿತು ಸ್ಪಷ್ಟತಾ ವರದಿಯನ್ನು ರಾಜ್ಯ ಸರ್ಕಾರಕ್ಕೆ ನೀಡಲಿದೆ. ಅದಾದ ನಂತರ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ ರಾಜ್ಯ ಸರ್ಕಾರದಿಂದ ಬೆಳೆ ಪರಿಹಾರ ನೀಡುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
55 ತಾಲೂಕುಗಳ ಮರು ಸಮೀಕ್ಷೆ:
ರಾಜ್ಯದಲ್ಲಿ ಮಳೆ ಕೊರತೆ ಇದ್ದರೂ ಕೃಷಿ ಭೂಮಿಯಲ್ಲಿ ಹಸಿರು ಹೊದಿಕೆ ಹೆಚ್ಚಿದೆ. ಹೀಗಾಗಿ ರಾಜ್ಯವು ಹಸಿರು ಬರಗಾಲ ಎದುರಿಸುತ್ತಿದೆ. ಅದರಿಂದಾಗಿ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳ ನಾಶದಿಂದಾಗಿ 4,030 ಕೋಟಿ ರು. ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರ ಜತೆಗೆ ಮೇವು, ಔಷಧ, ಆಹಾರ, ಕುಡಿಯುವ ನೀರಿನ ಪೂರೈಕೆ ಸೇರಿದಂತೆ ಇನ್ನಿತರ ಕ್ರಮಗಳಿಗಾಗಿ ಒಟ್ಟು ಬರ ಪರಿಹಾರವಾಗಿ 4,860 ಕೋಟಿ ರು. ನೀಡುವಂತೆ ಕೋರಲಾಗಿದೆ. ಅದರ ಜತೆಗೆ ಸಾಧಾರಣ ಬರ ಎಂದು ಘೋಷಿಸಲಾಗಿರುವ 34 ತಾಲೂಕುಗಳು ಹಾಗೂ ಹೊಸದಾಗಿ ಬರದ ಪಟ್ಟಿಗೆ ಸೇರ್ಪಡೆ ಮಾಡಬೇಕಿರುವ 21 ತಾಲೂಕುಗಳ ಮರು ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಚೆಲುವರಾಯಸ್ವಾಮಿ ತಿಳಿಸಿದರು.
ಪುತ್ರನ ಕಾಟ ತಾಳದೆ ಬಿಜೆಪಿ ಜತೆ ದೇವೇಗೌಡ ಮೈತ್ರಿ: ಚಲುವರಾಯಸ್ವಾಮಿ ಲೇವಡಿ
ಪರ್ಯಾಯ ಬೆಳೆಗಳಿಗೆ ಒತ್ತು:
ಮಳೆ ಕೊರತೆ ಸಂದರ್ಭದಲ್ಲಿ ರೈತರು ಪರ್ಯಾಯ ಬೆಳೆಗತ್ತ ಹೆಚ್ಚಿನ ಗಮನಹರಿಸಬೇಕು. ಕೃಷಿ ವಿಶ್ವವಿದ್ಯಾಲಯಗಳ ಮೂಲಕ ರೈತರಲ್ಲಿ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ. ನೀರು ಕಡಿಮೆ ಬಳಕೆಯಾಗುವ ಬೆಳೆಗಳನ್ನು ಬೆಳೆಯುವಂತೆಯೂ ತಿಳಿಸಲಾಗುತ್ತಿದೆ. ಅದರ ಜತೆಗೆ ಹೊಸಬಗೆಯ ತಳಿಗಳ ಸೃಷ್ಟಿಗೂ ಸಂಶೋಧನಾ ವಿಭಾಗ ಕೆಲಸ ಮಾಡುತ್ತಿದೆ ಎಂದು ಚೆಲುವರಾಯಸ್ವಾಮಿ ಹೇಳಿದರು.
ಮೆಕ್ಕೆಜೋಳ ಹೆಚ್ಚು ಹಾನಿ:
ಬರ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 39.74 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಅದರಲ್ಲಿ 11.84 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬೆಳೆಯಲಾಗಿದ್ದ ಮೆಕ್ಕೆ ಜೋಳ ನಾಶವಾಗಿದೆ. ಹಾಗೆಯೇ, 7.16 ಲಕ್ಷ ಹೆಕ್ಟೇರ್ ತೊಗರಿ, 4.45 ಲಕ್ಷ ಹೆಕ್ಟೇರ್ ರಾಗಿ, 4.04 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬೆಳೆಯಲಾಗಿದ್ದ ಹತ್ತಿ ನಾಶವಾಗುತ್ತಿದೆ. ಹಾಗೆಯೇ, ನೆಲಗಡಲೆ, ಹಸಿರು ಬೇಳೆ, ಭತ್ತ, ಸೋಯಾಬೀನ್, ಕಬ್ಬು ಸೇರಿದಂತೆ ಇನ್ನಿತರ ಬೆಳೆಗಳೂ ನೀರಿನಲ್ಲಿ ಹಾನಿಯಾಗಿವೆ.