ತಮಿಳುನಾಡು ಸರ್ಕಾರ ಕಳೆದ ಎರಡು ತಿಂಗಳಿಂದ ನೀರು ಬಿಡುಗಡೆ ಮಾಡುವಂತೆ ಕೇಳುತ್ತಿದೆ. ಪ್ರಾಧಿಕಾರ 15 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ ಮಾಡುವಂತೆ ತಿಳಿಸಿದೆ. ಆದರೆ ಅಷ್ಟುಪ್ರಮಾಣದ ನೀರು ಬಿಡುಗಡೆ ಮಾಡಲು ಆಗದೇ 10 ಸಾವಿರ ಕ್ಯುಸೆಕ್‌ ನೀರು ನೀಡಲಾಗಿದೆ ಎಂದು ಸಮರ್ಥಿಸಿಕೊಂಡ ಕೃಷಿ ಸಚಿವ ಚಲುವರಾಯಸ್ವಾಮಿ 

ಬೆಂಗಳೂರು(ಆ.23): ರಾಜಕೀಯ ಕಾರಣಕ್ಕೆ ತಮಿಳುನಾಡು ಜೊತೆ ಸ್ನೇಹ ಇರಬಹುದು. ಆದರೆ ನೀರಿನ ವಿಚಾರದಲ್ಲಿ ನಾವು ಬಗ್ಗುವುದಿಲ್ಲ. ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ರೈತರ ಹಿತ ಕಾಪಾಡುವಲ್ಲಿ ನಾವು ಹಿಂದಡಿ ಇಡುವುದಿಲ್ಲ. ನೀರಿನ ವಿಷಯದಲ್ಲಿ ರಾಜಕಾರಣ ಬೇಡ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನೀರು ಬಿಡುತ್ತಿರುವ ಸಂಬಂಧ ರೈತರು ನಡೆಸುತ್ತಿರುವ ಪ್ರತಿಭಟನೆಗೆ ನಮ್ಮ ಸಹಮತವಿದೆ. ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುತ್ತಿರುವುದು ಒಳ್ಳೆಯದು. ಆದರೆ ಬಿಜೆಪಿ ಪ್ರತಿಭಟನೆಗೆ ಏನೆಂದು ಹೇಳಬೇಕು? ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿಗೆ ಕನಿಷ್ಠ ತಿಳಿವಳಿಕೆ ಇಲ್ಲವೇ? ತಮಿಳುನಾಡು ಸರ್ಕಾರ ಕಳೆದ ಎರಡು ತಿಂಗಳಿಂದ ನೀರು ಬಿಡುಗಡೆ ಮಾಡುವಂತೆ ಕೇಳುತ್ತಿದೆ. ಪ್ರಾಧಿಕಾರ 15 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ ಮಾಡುವಂತೆ ತಿಳಿಸಿದೆ. ಆದರೆ ಅಷ್ಟುಪ್ರಮಾಣದ ನೀರು ಬಿಡುಗಡೆ ಮಾಡಲು ಆಗದೇ 10 ಸಾವಿರ ಕ್ಯುಸೆಕ್‌ ನೀರು ನೀಡಲಾಗಿದೆ ಎಂದು ಸಮರ್ಥಿಸಿಕೊಂಡರು.

ಕೃಷಿ ಸಚಿವರ ಲಂಚ ಬೇಡಿಕೆ ಪ್ರಕರಣಕ್ಕೆ ಟ್ವಿಸ್ಟ್‌ ಕೊಟ್ಟ ಸಿಐಡಿ: ಮಂಡ್ಯ ಮಾತ್ರವಲ್ಲ, ಮೈಸೂರಿನವರ ಕೈವಾಡವೂ ಇದೆ

ಮಹದಾಯಿ ಯೋಜನೆ ಯಾಕೆ ಮಾಡಲಿಲ್ಲ? ಬಿಜೆಪಿಯ 25 ಸಂಸದರು, ರಾಜ್ಯಸಭಾ ಸದಸ್ಯರು ಇದ್ದಾರೆ. ಕೇಂದ್ರಕ್ಕೆ ಹೋಗಿ ಕೇಳಬೇಕು. ಕೇಂದ್ರ ಸರ್ಕಾರ, ರಾಜ್ಯ ಹಾಗೂ ಗೋವಾದಲ್ಲಿ ಅವರದ್ದೇ ಸರ್ಕಾರವಿತ್ತು. ಯಾಕೆ ಯೋಜನೆ ಜಾರಿ ಮಾಡಲಿಲ್ಲ? ನಮ್ಮದು ಡಬಲ್‌, ತ್ರಿಬಲ್‌ ಎಂಜಿನ್‌ ಸರ್ಕಾರ ಎಂದು ಹೇಳುತ್ತಿದ್ದವರು ಏನು ಮಾಡಿದರು ಎಂದು ಪ್ರಶ್ನಿಸಿದ ಅವರು, ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಸರ್ಕಾರ ಸಮರ್ಥವಾಗಿ ವಾದ ಮಂಡಿಸಲಿದೆ ಎಂದರು.

ಬಿಡುಗಡೆ ಮಾಡಲಿ:

ಕೃಷಿ ಇಲಾಖೆಯ ಅಧಿಕಾರಿಗಳಿಂದ ಲಂಚ ಕೇಳಲಾಗಿದೆ ಎಂದು ರಾಜ್ಯಪಾಲರಿಗೆ ಪತ್ರ ಬರೆದ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂಬುದು ಗೊತ್ತಿದೆ. ಇದಕ್ಕೆ ಯಾರು ಕಾರಣ ಎಂಬುದು ಗೊತ್ತಿಲ್ಲ. ಪತ್ರದಲ್ಲಿ ಜೆಡಿಎಸ್‌ನವರ ಹೆಸರು ಇದೆ ಎನ್ನುವುದು ಗೊತ್ತಿದೆ. ಈ ರೀತಿ ಎಷ್ಟುದಿನ ನಡೆಸುತ್ತಾರೋ ನಡೆಸಲಿ. ಅವರಿಗೆ ದೇವರು ಒಳ್ಳೆಯದು ಮಾಡಲಿ, ಅವರಿಗೆ ಬೆಳಗ್ಗೆ ಎದ್ದು ಏನೂ ಕೆಲಸ ಇಲ್ಲದಿದ್ದರೆ ಅದನ್ನೇ ಮಾಡಲಿ. ಅದೇನು ಬಿಡುಗಡೆ ಮಾಡುತ್ತಾರೋ ಮಾಡಲಿ ಎಂದು ಎಚ್‌.ಡಿ. ಕುಮಾರಸ್ವಾಮಿ ಅವರ ಹೆಸರು ಉಲ್ಲೇಖಿಸದೇ ಟೀಕಿಸಿದರು.

ನೈಸ್‌ ಯೋಜನೆ ಮಾಡಿದ್ದು ಯಾರು? ಅಂದಿನಿಂದ ಚರ್ಚೆ ಆಗಬೇಕಾಗಿದೆ. ರಾಜ್ಯ ಸರ್ಕಾರ ಸಾರ್ವಜನಿಕ ಹಿತದೃಷ್ಟಿಯಿಂದ ಏನು ಮಾಡಬೇಕೋ ಅದನ್ನು ಮಾಡುತ್ತದೆ. ಸದ್ಯ ನೈಸ್‌ ವಿಷಯ ಸುಪ್ರೀಂ ಕೋರ್ಟ್‌ನಲ್ಲಿ ಇದೆ. ಆದರೆ ನಾವು ನೈಸ್‌ ಪರವಾಗಿಲ್ಲ ಎಂದು ಸಚಿವ ಚಲುವರಾಯ ಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.