ಬೆಂಗಳೂರು, (ಫೆ.6): ಲಿಂಗಾಯಿತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಕುರಿತು ಹಿಂದುಳಿದ ವರ್ಗಗಳ ಆಯೋಗದ ವರದಿ ಬಂದ ನಂತರ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಿಂದುಳಿದ ವರ್ಗಗಳ ಆಯೋಗಕ್ಕೆ ಪ್ರಸ್ತಾವನೆ ಕಳುಹಿಸಿಕೊಟ್ಟಿದ್ದಾರೆ. ಆಯೋಗದಿಂದ ಶಿಫಾರಸು ಬಂದ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

'ಮೀಸಲಾತಿ ಕೊಡಿ.. ಇಲ್ಲಾ ರಾಜೀನಾಮೆ ಕೊಡಿ' ಸಿಎಂಗೆ ಪಂಚಮಸಾಲಿ ಸ್ವಾಮೀಜಿ ಸವಾಲ್

ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ಹಿಂದುಳಿದ ವರ್ಗ ಎಂದು ಗುರುತಿಸಿದವರೇ ಯಡಿಯೂರಪ್ಪನವರು. ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗಲೂ ಪಂಚಮಸಾಲಿ ಲಿಂಗಾಯತ ಸಮಯದಾಯವನ್ನು 3ಎಗೆ ಸೇರಿಸಿದ್ದವರು ಎಂದರು.

ಪಂಚಮಸಾಲಿ ಸಮುದಾಯವನ್ನು 3ಎಗೆ ಸೇರಿಸುವ ಕೆಲಸವನ್ನು ಬಿಎಸ್‍ವೈ ಬಿಟ್ಟರೆ ಬೇರ್ಯಾರೂ ಮಾಡಲಿಲ್ಲ. ಈಗ 2ಎ ಮೀಸಲಾತಿಗೆ ಪ್ರಸ್ತಾವನೆ ಬಂದಿದೆ. ಈ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳು ಹಿಂದುಳಿದ ವರ್ಗಗಳ ಆಯೋಗಕ್ಕೆ ಕಳಿಸಿಕೊಟ್ಟಿದ್ದಾರೆ. ಆಯೋಗದ ವರದಿ ಬಂದ ನಂತರ ಕ್ರಮ ಕೈಗೊಳ್ಳಲಿದ್ದಾರೆ ಎಂದು ಪುನರುಚ್ಚರಿಸಿದರು.

ಪಂಚಮಸಾಲಿ ಲಿಂತಾಯಿತ ಸಮುದಾಯವನ್ನು 2ಎಗೆ ಸೇರಿಸಬೇಕೆಂಬ ಬೇಡಿಕೆಯನ್ನು ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಳ್ಳ ಬೇಕಾಗುತ್ತದೆ. ಕೆಲವು ರಾಜ್ಯಗಳು ಇದೇ ಪ್ರಸ್ತಾವನೆ ಮಾಡಿದಾಗ ಕೋರ್ಟ್ ತಡೆ ಕೊಟ್ಟಿರುವುದೂ ಉಂಟು. ಇದೆಲ್ಲವನ್ನೂ ಗಮನಿಸಬೇಕಾಗುತ್ತದೆ.

ಕುಲಶಾಸ್ತ್ರೀಯ ಅಧ್ಯಯನದ ಬಗ್ಗೆ ಹಿಂದುಳಿದ ವರ್ಗಗಳ ಆಯೋಗವೇ ನಿರ್ಧಾರ ಕೈಗೊಳ್ಳಲಿದೆ. ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡೋದು ಕೇಂದ್ರ ನಿರ್ಧರಿಸುವ ವಿಚಾರ. ಈ ಬಗ್ಗೆ ಕೇಂದ್ರದ ಜೊತೆ ಚರ್ಚೆ ಮಾಡಬೇಕು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ತಿಳಿಸಿದರು.