ಬೆಂಗಳೂರು(ಜು.24): ನನ್ನ ಇಲಾಖೆಯಲ್ಲಿ ಇತರೆ ಸಚಿವರ ಹಸ್ತಕ್ಷೇಪ ಹೆಚ್ಚಾಗಿದ್ದು, ಪ್ರತಿಯೊಂದು ವಿಚಾರದಲ್ಲಿಯೂ ನನ್ನನ್ನು ಓವರ್‌ ಟೇಕ್‌ ಮಾಡಲಾಗುತ್ತಿದೆ ಎಂದು ರಾಜ್ಯ ಟಾಸ್ಕ್‌ ಫೋರ್ಸ್‌ ಅಧ್ಯಕ್ಷರೂ ಆಗಿರುವ ಆರೋಗ್ಯ ಸಚಿವ ಬಿ.ಶ್ರೀರಾಮುಲು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತಮ್ಮ ಸಹೋದ್ಯೋಗಿ ಸಚಿವರ ನಡೆಯ ಬಗ್ಗೆ ಬೇಸರ ಹೊರಹಾಕಿದರು ಎಂದು ಮೂಲಗಳು ತಿಳಿಸಿವೆ.

ರಾಜ್ಯವನ್ನು ದೇವರೇ ಕಾಪಾಡಬೇಕು ಎಂದ ಶ್ರೀರಾಮಲು: ಸಿಎಂ ರಾಜೀನಾಮೆಗೆ ಸಿದ್ದು, ಡಿಕೆಶಿ ಆಗ್ರಹ

ಪ್ರತಿಯೊಂದು ವಿಚಾರದಲ್ಲಿಯೂ ನನ್ನನ್ನು ಓವರ್‌ ಟೇಕ್‌ ಮಾಡಲಾಗುತ್ತಿದೆ. ಆರೋಗ್ಯ ಇಲಾಖೆ ನನಗೇನೂ ಹೊಸತಲ್ಲ. ಹಿಂದೆಯೂ ಆರೋಗ್ಯ ಇಲಾಖೆ ನಿಭಾಯಿಸಿದ ಅನುಭವ ಇದೆ. ಆದರೆ, ಈ ಬಾರಿ ಇಲಾಖೆಯಲ್ಲಿ ಅಧಿಕಾರಿಗಳ, ಇತರೆ ಸಚಿವರ ಹಸ್ತಕ್ಷೇಪ ಜಾಸ್ತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ. ಇಲಾಖೆಯ ಪ್ರಧಾನ ಕಾರ್ಯದರ್ಶಿ, ಆಯುಕ್ತರು, ನಿರ್ದೇಶಕರ ಹಸ್ತಕ್ಷೇಪದ ಬಗ್ಗೆಯೂ ಅಸಮಾಧಾನ ಹೊರಹಾಕಿದರು ಎನ್ನಲಾಗಿದೆ.