ಬೆಂಗಳೂರು (ನ.07): ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯ ಆಸ್ಪತ್ರೆಗಳ ಹಾಗೂ ಆರೋಗ್ಯ-ಕುಟುಂಬ ಇಲಾಖೆ ವ್ಯಾಪ್ತಿಯ ಆಸ್ಪತ್ರೆಗಳ ಸಿಬ್ಬಂದಿ ನಡುವಿನ ವೇತನ ತಾರತಮ್ಯ ಸರಿಪಡಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಭರವಸೆ ನೀಡಿದ್ದಾರೆ. 

ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಬುಧವಾರ ಆಯೋಜಿಸಿದ್ದ 2018- 19ನೇ ಸಾಲಿನ ‘ಕಾಯಕಲ್ಪ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ರಾಜಕೀಯ ಹಿತಾಸಕ್ತಿಗಾಗಿ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ವಿಭಾಗಿಸಲಾಗಿದೆ. ಆದ್ದರಿಂದಲೇ ಆಸ್ಪತ್ರೆಗಳ ವೈದ್ಯರು, ಸಿಬ್ಬಂದಿ ಮಧ್ಯೆ ಹೊಂದಾಣಿಕೆ ಕೊರತೆ ಉಂಟಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಎರಡು ಇಲಾಖೆ ಸಿಬ್ಬಂದಿ ವೇತನದಲ್ಲಿ ತಾರತಮ್ಯ ಜತೆಗೆ ವೈದ್ಯಕೀಯ ಸೇವೆ, ಸೌಲಭ್ಯದಲ್ಲಿ ಸಮಸ್ಯೆ ಉಂಟಾಗಿದೆ. ಇವೆಲ್ಲ ಲೋಪ ದೋಷಗಳನ್ನು ಸರಿಪಡಿಸಿ ಉತ್ತಮ ಸೇವೆ ನೀಡಲು ಎರಡು ಇಲಾಖೆ ಒಗ್ಗೂಡಿಸಿ ಒಬ್ಬರನ್ನೇ ಮಂತ್ರಿ ಯಾಗಿ ನೇಮಿಸಬೇಕು. ಇದರಿಂದ ಇಲಾಖೆಗಳ ಮಧ್ಯೆ ಮತ್ತು ವೈದ್ಯಕೀಯ ಕಾಲೇಜು ಡೀನ್‌ಗಳು ಹಾಗೂ ಆರೋಗ್ಯ ಅಧಿಕಾರಿಗಳ ನಡುವೆ ಸಮನ್ವಯ ಸಾಧಿಸಲು
ಸಾಧ್ಯವೆಂದು ಅಭಿಪ್ರಾಯಪಟ್ಟರು. 

ಎಲ್ಲ ಸರ್ಕಾರಿ ಆಸ್ಪತ್ರೆ ಗಳಲ್ಲಿನ ಸ್ವಚ್ಛತೆ ಬಗ್ಗೆ ಸಾಕಷ್ಟು ದೂರು ಬಂದಿದ್ದರಿಂದ ಈಗಿರುವ ಗುತ್ತಿಗೆ ಪದ್ಧತಿ ರದ್ದು ಮಾಡಿ, ಸ್ವಚ್ಛತೆಯನ್ನು ಕಾರ್ಪೋರೇರ್ಟ್ ಸಂಸ್ಥೆಗಳಿಗೆ ವಹಿಸಲಿದ್ದೇನೆ ಎಂದರು. ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೀದ್ ಅಖ್ತರ್, ಆಯುಕ್ತ ಪಂಕಜ್‌ಕುಮಾರ್ ಪಾಂಡೆ, ಆರೋಗ್ಯ ಅಭಿಯಾನ ನಿರ್ದೇಶಕ ರಾಮಚಂದ್ರನ್, ಟಿ.ಎಸ್. ಪ್ರಭಾಕರ್ ಇದ್ದರು.