Asianet Suvarna News

ಸಾಕಪ್ಪ ಈ ಬೆಂಗ್ಳೂರು ಸಹವಾಸ, ನೊಂದ ಕಾರ್ಮಿಕರ ಅಳಲು!

ಸಾಕಪ್ಪ ಈ ಬೆಂಗ್ಳೂರು ಸಹವಾಸ!| ಹೊಟ್ಟೆತುಂಬಾ ಊಟ ಮಾಡಿ ತಿಂಗಳಾಯಿತು| ನೊಂದ ಕಾರ್ಮಿಕರ ನೋವಿನ ನುಡಿ

Migrant Workers From Various Districts Express Their Helplessness In bengaluru Due To Lockdown
Author
Bangalore, First Published May 4, 2020, 8:06 AM IST
  • Facebook
  • Twitter
  • Whatsapp

ಬೆಂಗಳೂರು(ಮೇ.04): ‘ಏನ್‌ ಮಾಡೋದು ಸಾರ್‌. ಊರು ಕಡೆ ಮಳೆ-ಬೆಳೆ ಇಲ್ಲ. ಕೂಲಿ ಮಾಡೋಣ ಅಂತಾ ಆರು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ವಿ. ಕಟ್ಟಡ ನಿರ್ಮಾಣದಲ್ಲಿ ಕೂಲಿ ಆಳುಗಳಾಗಿ ಕೆಲಸ ಮಾಡ್ತಿದ್ವಿ. ಈ ಕೊರೋನಾ ಅಂತಾ ಬಂದು ಎಲ್ಲ ಹಾಳು ಮಾಡಿದೆ. ಇತ್ತ ಕೆಲಸವೂ ಇಲ್ಲ. ತಿನ್ನಲು ಊಟವೂ ಇಲ್ಲ. ಈ ಒಂದೂವರೆ ತಿಂಗಳಲ್ಲಿ ನರಕಯಾತನೆ ಅನುಭವಿಸಿದ್ದೇವೆ. ಎಷ್ಟುಹೊತ್ತಿಗೆ ಊರಿಗೆ ಸೇರುತ್ತೇವೋ..!’

ಇದು ಕೊರೋನಾ ಲಾಕ್‌ಡೌನ್‌ನಿಂದ ದುಡಿಮೆ ಇಲ್ಲದೆ ತತ್ತರಿಸಿರುವ ಬಳ್ಳಾರಿ ಮೂಲದ ಕಾರ್ಮಿಕ ಮಹಿಳೆ ಲಕ್ಷ್ಮಿ ಎಂಬುವರ ನೋವಿನ ನುಡಿ. ಈ ಕೊರೋನಾ ಬಂದ ಬಳಿಕ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಇಬ್ಬರು ಮಕ್ಕಳು ಊರಿನಲ್ಲಿ ತಂಗಿಯ ಮನೆಯಲ್ಲಿ ಇದ್ದಾರೆ. ನಾವು ಕೂಲಿ ಅರಿಸಿ ಇಲ್ಲಿಗೆ ಬಂದಿದ್ದೆವು. ಕಳೆದ ಒಂದೂವರೆ ತಿಂಗಳಿಂದ ದುಡಿಮೆಯೂ ಇಲ್ಲ, ಮೂರು ಹೊತ್ತು ಹೊಟ್ಟೆತುಂಬ ಅನ್ನವೂ ಇಲ್ಲದೆ ನಮ್ಮ ಬದುಕು ನಾಯಿಪಾಡಾಗಿದೆ ಎಂದು ನೊಂದು ನುಡಿದರು.

ಜನರ ಬೇಜವಾಬ್ದಾರಿ, ಪೌರಕಾರ್ಮಿಕರಿಗೆ ಸೋಂಕಿನ ಭೀತಿ!

ಈ ಕೊರೋನಾದಿಂದ ನಮ್ಮ ಜೀವನ ಹಾಳಾಗಿದೆ. ಹೊಟ್ಟೆತುಂಬ ಊಟ ಮಾಡಿ ಒಂದೂವರೆ ತಿಂಗಳಾಯ್ತು. ಕೂಲಿ ಅರಿಸಿ ಬೆಂಗಳೂರಿಗೆ ಬಂದು ಈಗ ಸಂಷ್ಟಕ್ಕೆ ಸಿಲುಕಿದ್ದೇವೆ. ದೇವರ ದಯೆಯಿಂದ ಸರ್ಕಾರ ಉಚಿತವಾಗಿ ಊರಿಗೆ ಕರೆದೊಯ್ಯಲು ಮುಂದಾಗಿದೆ. ಮನಪೂರ್ವಕವಾಗಿ ಧನ್ಯವಾದ ಹೇಳುತ್ತೇವೆ ಎಂದು ರಾಯಚೂರಿಗೆ ತೆರಳಲು ಬಸ್‌ ನಿಲ್ದಾಣಕ್ಕೆ ಬಂದಿದ್ದ ದಾನಪ್ಪ ದಂಪತಿ ಕೈ ಮುಗಿದರು.

ಸಾಕು ಬೆಂಗ್ಳೂರು ಸಹವಾಸ!

ಸರ್ಕಾರ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ್ದು ಒಳ್ಳೇಯದ್ದಾಯಿತು. ಟಿಕೆಟ್‌ಗೆ ಹಣ ಹೊಂದಿಸಲು ಸಾಲ ಮಾಡಿದ್ದೆ. ಸದ್ಯ ಆ ಹಣ ಉಳಿಯಿತು. ಇವತ್ತು ಎಷ್ಟುಹೊತ್ತಾದರೂ ಸರಿಯೇ ಊರಿಗೆ ಹೋಗಲೇಬೇಕು. ಈ ಬೆಂಗಳೂರು ಸಹವಾಸ ಸಾಕಾಗಿದೆ ಸ್ವಾಮಿ ಎಂದು ಕಲಬುರಗಿ ಮೂಲದ ಕಾರ್ಮಿಕ ಭರಮಪ್ಪ ಆತಂಕದ ಮಿಶ್ರಿತವಾಗಿ ಹೇಳಿದರು.

ಶನಿವಾರ ಬಸ್‌ ಸಿಗದೆ ಬಸ್‌ ನಿಲ್ದಾಣದಲ್ಲೇ ರಾತ್ರಿ ಕಳೆದಿದ್ದ ಕೆಲ ಕಾರ್ಮಿಕರು, ಉಚಿತ ಪ್ರಯಾಣದ ವಿಷಯ ತಿಳಿದು, ಸರ್ಕಾರಕ್ಕೆ ಧನ್ಯವಾದ ಹೇಳಿದರು. ಲಾಕ್‌ಡೌನ್‌ನಿಂದ ದುಡಿಮೆ ಇಲ್ಲದೆ ಹೊತ್ತಿನ ಊಟಕ್ಕೂ ಪರದಾಡುತ್ತಿದೇವೆ. ಪ್ರಯಾಣ ದರ ಭರಿಸಲು ಹಣವಿಲ್ಲ ಎಂದು ಹಲವು ಕಾರ್ಮಿಕರು ಗೋಳಾಡಿದ್ದರು. ಇದರ ಬೆನ್ನಲ್ಲೇ ಸರ್ಕಾರದ ಉಚಿತ ಪ್ರಯಾಣದ ಸೌಲಭ್ಯದ ನಿರ್ಧಾರಕ್ಕೆ ನೋವಿನಲ್ಲೂ ಸಂತಸ ವ್ಯಕ್ತಪಡಿಸಿದರು.

ದಾವಣಗೆರೆಯಲ್ಲಿ 21 ಕೇಸ್‌ ಸ್ಫೋಟ: ರಾಜ್ಯದಲ್ಲಿ ಒಂದೇ ದಿನ 34 ಮಂದಿಗೆ ಸೋಂಕು!

ಲಾಕ್‌ ಡೌನ್‌ನಿಂದ ತತ್ತರಿಸಿರುವ ಒಬ್ಬೊಬ್ಬ ಕಾರ್ಮಿಕರೂ ಒಂದೊಂದು ನೋವಿನ ಕಥೆ ಹೇಳುತ್ತಿದ್ದರು. ದೂರದ ಬೆಟ್ಟನುಣ್ಣಗೆ ಅನ್ನೋದು ಈಗ ಸಾಬೀತು ಆಯ್ತು. ಬೆಂಗಳೂರಲ್ಲಿ ಕೂಲಿ ಮಾಡಿಯೂ ಬದುಕೋದು ಕಷ್ಟವಿದೆ. ಮನೆ-ಮಕ್ಕಳು, ಬಂಧು-ಬಳಗ ಎಲ್ಲರನ್ನೂ ಬಿಟ್ಟು ನೂರಾರು ಕಿ.ಮೀ. ದೂರುದ ಈ ಬೆಂಗಳೂರಿಗೆ ಬಂದಿದ್ದೇವೆ. ಎರಡು ತಿಂಗಳಿಂದ ನರಕ ಅನುಭವಿಸಿದ್ದೇವೆ. ಇಲ್ಲಿನ ಜೀವನ ಸಾಕು. ನಮ್ಮೂರಿಗೆ ಹೋದ್ರೆ ಸಾಕಾಗಿದೆ ಎಂದು ಉತ್ತರ ಕರ್ನಾಟಕ ಭಾಗದ ಹಲವು ಕಾರ್ಮಿಕರು ಬೇಸರಿಸಿದರು.

Follow Us:
Download App:
  • android
  • ios