ಮಧ್ಯಪ್ರಾಚ್ಯದ ಪ್ರಸಿದ್ಧ ಪತ್ರಿಕೆಗೆ ಮುಟ್ಟಿದ ಬಸವನಗೌಡ ಪಾಟೀಲ್ ಯತ್ನಾಳ್ ನೇರ ಮಾತು!
ಇಸ್ರೇಲ್ ಹಾಗೂ ಹಮಾಸ್ ಯುದ್ಧದ ಕುರಿತಾಗಿ ಕರ್ನಾಟಕದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದ ಮಾತನ್ನು ಮಧ್ಯಪ್ರಾಚ್ಯದ ಪ್ರಸಿದ್ಧ ಪತ್ರಿಕೆ/ವೆಬ್‌ಸೈಟ್ ಮಿಡಲ್ ಈಸ್ಟ್ ಐ ತನ್ನಅಭಿಪ್ರಾಯ ಅಂಕಣದಲ್ಲಿ ಕೋಟ್ ಮಾಡಿದೆ. ಆಜಾದ್ ಎಸಾ ಬರೆದಿರುವ ಅಂಕಣದಲ್ಲಿ ಯತ್ನಾಳ್ ಮಾತನ್ನು ಆಯ್ದುಕೊಳ್ಳಲಾಗಿದೆ.

ನವದೆಹಲಿ (ಅ.14): ಹಮಾಸ್ ಮತ್ತು ಇಸ್ರೇಲ್ ನಡುವಿನ ರಕ್ತಸಿಕ್ತ ಯುದ್ಧದಲ್ಲಿ ಭಾರತವು ಇಸ್ರೇಲ್ ಅನ್ನು ಬಹಿರಂಗವಾಗಿ ಬೆಂಬಲಿಸಿದೆ. ಇದು ಮಧ್ಯಪ್ರಾಚ್ಯದ ರಾಷ್ಟ್ರಗಳ ಕೆಂಗಣ್ಣಿಗೂ ಗುರಿಯಾಗಿದೆ. ಶನಿವಾರ ಮುಂಜಾನೆ, ಹಮಾಸ್ 20 ನಿಮಿಷಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ರಾಕೆಟ್‌ಗಳನ್ನು ಹಾರಿಸುವ ಮೂಲಕ ಇಸ್ರೇಲ್ ಮೇಲೆ ದಾಳಿ ಮಾಡಿದ ಕೆಲವೇ ಗಂಟೆಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದರು. ಹಮಾಸ್ ದಾಳಿಯನ್ನು ಮುಕ್ತವಾಗಿ ಖಂಡಿಸಿದ ವಿಶ್ವದ ಮೊದಲ ನಾಯಕ ಪ್ರಧಾನಿ ಮೋದಿ ಆಗಿದ್ದರು. ಟ್ವೀಟ್ ಮಾಡಿ, ದಾಳಿಯನ್ನು 'ಭಯೋತ್ಪಾದಕ ದಾಳಿ' ಎಂದು ಹೇಳುವ ಮೂಲಕ ಹಮಾಸ್‌ನ ಕೃತ್ಯವನ್ನು ಖಂಡಿಸಿದ್ದಲ್ಲದೆ, ಈ ಸಂಕಷ್ಟದ ಸಮಯದಲ್ಲಿ ಭಾರತದ ಜನರು ಇಸ್ರೇಲ್‌ನೊಂದಿಗೆ ದೃಢವಾಗಿ ನಿಂತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದರು.
ಮಂಗಳವಾರ ಕೂಡ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಪರಿಸ್ಥಿತಿಯ ಬಗ್ಗೆ ಪ್ರಧಾನಿ ಮೋದಿಗೆ ಮಾಹಿತಿ ನೀಡಿದ್ದಾರೆ. ಈ ಮಾತುಕತೆಯಲ್ಲೂ ಭಾರತವು ಇಸ್ರೇಲ್‌ನೊಂದಿಗೆ ಇದೆ ಮತ್ತು ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಬಲವಾಗಿ ಖಂಡಿಸುತ್ತದೆ ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದರು.
ಅಭಿಪ್ರಾಯ ಪ್ರಕಟಿಸಿದ ಮಿಡಲ್ ಈಸ್ಟ್ ಐ: ಎಂಇಇ ಎಂದು ಕರೆಸಿಕೊಳ್ಳುವ ಮಧ್ಯಪ್ರಾಚ್ಯದ ಪ್ರಸದ್ಧ ವೆಬ್‌ಸೈಟ್ ಮಿಡಲ್ ಈಸ್ಟ್ ಐನಲ್ಲಿ ಆಜಾದ್ ಇಸಾ ತಮ್ಮ ಅಭಿಪ್ರಾಯ ಲೇಖವನ್ನು ಬರೆದಿದ್ದು, ಭಾರತದ್ಲಿ ಬದಲಾಗುತ್ತಿರುವ ರಾಜತಾಂತ್ರಿಕತೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಆಜಾದ್ ಇಸಾ ತಮ್ಮ ಅಭಿಪ್ರಾಯ ಅಂಕಣಕ್ಕೆ, "ಹಮಾಸ್ ವಿರುದ್ಧದ ಯುದ್ಧದಲ್ಲಿ ಹಿಂದೂ ರಾಷ್ಟ್ರೀಯವಾದಿಗಳು ಇಸ್ರೇಲ್ ಅನ್ನು ಏಕೆ ಬೆಂಬಲಿಸುತ್ತಿದ್ದಾರೆ?" ಎಂದು ಶೀರ್ಷಿಕೆ ನೀಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪ್ಯಾಲೆಸ್ಟೀನಿಯರ ವಿರುದ್ಧ ಇಸ್ರೇಲ್‌ನ ಕ್ರಮವು ಕಾಶ್ಮೀರಿಗಳ ವಿರುದ್ಧ ಭಾರತ ಸರ್ಕಾರದ ಕ್ರಮಕ್ಕೆ ಮಾನದಂಡವಾಗಿದೆ ಎಂದು ವೆಬ್‌ಸೈಟ್ ಬರೆದಿದೆ.
ಕಳೆದ ಶನಿವಾರ ಪ್ಯಾಲೆಸ್ತೀನ್ ಸಂಘಟನೆ ಹಮಾಸ್ ನ ಹೋರಾಟಗಾರರು ಇದ್ದಕ್ಕಿದ್ದಂತೆ ಇಸ್ರೇಲ್ ನೊಳಗೆ ನುಸುಳಿದ್ದರು. ಆಪರೇಷನ್ ಅಲ್-ಅಕ್ಸಾ ಸ್ಟಾರ್ಮ್ ಅನ್ನು ಪ್ರಾರಂಭಿಸುವಾಗ ಹಮಾಸ್ ಐದು ಸಾವಿರ ರಾಕೆಟ್‌ಗಳನ್ನು ಇಸ್ರೇಲ್‌ನತ್ತ ಹಾರಿಸಿತು. ಇದಕ್ಕೆ ಪ್ರತಿಯಾಗಿ, ಇಸ್ರೇಲ್ ಹಮಾಸ್ ವಿರುದ್ಧ ಯುದ್ಧ ಘೋಷಣೆ ಮಾಡಿ, ಆಪರೇಷನ್ ಐರನ್ ಸ್ವಾರ್ಡ್ಸ್ ಕಾರ್ಯಾಚರಣೆಯನ್ನು ಪ್ರಾರಂಭ ಮಾಡಿತ್ತು. ಇಸ್ರೇಲಿ ಯುದ್ಧ ವಿಮಾನಗಳು ಗಾಜಾ ಪಟ್ಟಿಯಲ್ಲಿರುವ ಹಮಾಸ್ ಸ್ಥಾನಗಳ ಮೇಲೆ ನಿರಂತರವಾಗಿ ಬಾಂಬ್ ದಾಳಿ ನಡೆಸುತ್ತಿವೆ. ಇಸ್ರೇಲ್ ಗಾಜಾ ಪಟ್ಟಿಯನ್ನು ಸಂಪೂರ್ಣವಾಗಿ ಸುತ್ತುವರೆದಿದೆ ಮತ್ತು ಮೂಲಭೂತ ಸೌಕರ್ಯಗಳನ್ನು ಕಡಿತಗೊಳಿಸಿದೆ.
ಹಿಂದೂ ರಾಷ್ಟ್ರೀಯವಾದಿಗಳು ಇಸ್ರೇಲ್‌ಗೆ ಬೆಂಬಲ ನೀಡುತ್ತಿದ್ದಾರೆ: ವೆಬ್‌ಸೈಟ್ ಮತ್ತಷ್ಟು ಬರೆದಿದ್ದು "ಇಸ್ರೇಲ್ ಮತ್ತು ಹಮಾಸ್ ನಡುವಿನ ನಡೆಯುತ್ತಿರುವ ಯುದ್ಧವನ್ನು ಜಗತ್ತು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವಾಗ, ಭಾರತದಲ್ಲಿ ಹಿಂದೂ ರಾಷ್ಟ್ರೀಯತಾವಾದಿಗಳು ತಮ್ಮದೇ ಆದ ಆನ್‌ಲೈನ್ ಅಭಿಯಾನವನ್ನು ಪ್ರಾರಂಭಿಸಿದರು, ಅದರ ಅಡಿಯಲ್ಲಿ ಇಸ್ರೇಲ್‌ಗೆ ಬೆಂಬಲವನ್ನು ತೋರಿಸಲಾಯಿತು. ಇದೇ ಅಭಿಪ್ರಾಯದಲ್ಲಿ ಕರ್ನಾಟಕದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಟ್ವೀಟ್‌ಅನ್ನು ಕೋಟ್ ಮಾಡಲಾಗಿದೆ.
ಭಾರತ ಇನ್ನೊಂದು ಇಸ್ರೇಲ್ ಆಗಬಾರದು ಅನ್ನೋದಾದ್ರೆ ಮತ್ತೊಮ್ಮೆ ಮೋದಿ ಗೆಲ್ಲಿಸಿ: ಯತ್ನಾಳ್
'ಕರ್ನಾಟಕ ರಾಜ್ಯದ ವಿಧಾನಸಭೆಯ ಬಿಜೆಪಿ ಸದಸ್ಯರೊಬ್ಬರು "ನಾವು ರಾಜಕೀಯ ಪ್ರೇರಿತ ಮೂಲಭೂತವಾದದ ವಿರುದ್ಧ ನಿಲ್ಲದೇ ಇದ್ದರೆ, ಇಸ್ರೇಲ್ ಇಂದು ಎದುರಿಸುತ್ತಿರುವ ಪರಿಸ್ಥಿತಿಯನ್ನು ನಾವೂ ಎದುರಿಸಬಹುದು" ಎಂದು ಬರೆದಿದ್ದಾರೆ. ಎಕ್ಸ್‌ನಲ್ಲಿ ಬರೆದ ಅವರ ಪೋಸ್ಟ್‌ನಲ್ಲಿ "ಈ ಎಲ್ಲಾ ಹಮಾಸ್, ಲಷ್ಕರ್ ಮತ್ತು ಐಎಸ್‌ಐ ಒಂದೇ 'ಆಲೋಚನೆ'ಯಿಂದ ಬಂದವರು ... ಅವರು ಭಯೋತ್ಪಾದಕರು. ಜಗತ್ತು ಇಸ್ರೇಲ್‌ನೊಂದಿಗೆ ಒಮ್ಮತವಾಗಿ ನಿಲ್ಲಬೇಕು. ಅವರ ಪೋಸ್ಟ್ ಪಾಕಿಸ್ತಾನಿ ಸಶಸ್ತ್ರ ಗುಂಪು ಲಷ್ಕರ್-ಎ-ತೊಯ್ಬಾ ಮತ್ತು ಪಾಕಿಸ್ತಾನದ ಗುಪ್ತಚರ ಸಂಸ್ಥೆಯನ್ನು ಉಲ್ಲೇಖಿಸುತ್ತದೆ' ಎಂದು ಮಿಡಲ್ ಈಸ್ಟ್ ಐ ತನ್ನ ಅಭಿಪ್ರಾಯ ಅಂಕಣದಲ್ಲಿ ತಿಳಿಸಿದೆ.
ಸರ್ಕಾರ ಹಿಂದೂಗಳಿಗೆ ರಕ್ಷಣೆ ಕೊಡೋ ಬದಲು ಮುಸ್ಲಿಮರಿಗೆ ರಕ್ಷಣೆ ಕೊಡುತ್ತಿದೆ: ಯತ್ನಾಳ್