ಮಧ್ಯಪ್ರಾಚ್ಯದ ಯುದ್ಧದಿಂದ ರಸಗೊಬ್ಬರ ಕಚ್ಚಾವಸ್ತುಗಳ ಕೊರತೆಯ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಯೂರಿಯಾದಂತಹ ರಸಗೊಬ್ಬರಗಳ ಅತಿಯಾದ ಬಳಕೆಗೆ ಕಡಿವಾಣ ಹಾಕಲು ಮತ್ತು ವೈಜ್ಞಾನಿಕ ಬಳಕೆಯನ್ನು ಉತ್ತೇಜಿಸಲು ರೈತರಿಗೆ ಎಫ್‌ಐಡಿ (ಫಾರ್ಮರ್ಸ್ ಐಡಿ) ಹೊಂದುವುದನ್ನು ಕಡ್ಡಾಯಗೊಳಿಸಿದೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ (ಜು.23): ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಯೂರಿಯಾ ಸೇರಿದಂತೆ ರಸಗೊಬ್ಬರ ತಯಾರಿಕೆ ಮೇಲೂ ಪರಿಣಾಮ ಬೀರಿದ್ದು, ಕಚ್ಚಾವಸ್ತುಗಳು ಕೊರತೆಯಾಗುವ ಆತಂಕ ಶುರುವಾಗಿದೆ. ಹೀಗಾಗಿ, ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಗೊಬ್ಬರ ಖರೀದಿಗೆ ಕಡಿವಾಣ ಹಾಕಲು ಮುಂದಾಗಿದ್ದು, ಈ ವರ್ಷದಿಂದ ಎಫ್‌ಐಡಿ (ಫಾರ್ಮರ್ಸ್ ಐಡಿ)ಯನ್ನು ಕಡ್ಡಾಯಗೊಳಿಸಿದೆ.
ಈ ವರ್ಷದಿಂದ ಯೂರಿಯಾ, ಡಿಎಪಿ ಸೇರಿದಂತೆ ಯಾವುದೇ ರಸಗೊಬ್ಬರ ಖರೀದಿಸಬೇಕಿದ್ದರೂ ಎಫ್ಐಡಿ ಕಡ್ಡಾಯ. ಪ್ರತಿಯೊಬ್ಬ ರೈತರೂ ಎಫ್‌ಐಡಿಯನ್ನು ಮಾಡಿಸಿಕೊಳ್ಳಬೇಕೆಂದು ಕೃಷಿ ಇಲಾಖೆ 20 ದಿನಗಳ ಹಿಂದೆ ಸುತ್ತೋಲೆ ಹೊರಡಿಸಿದೆ.
ಏನು ಕೊರತೆ?:
ಗೊಬ್ಬರ ತಯಾರಿಕೆಗೆ ಪ್ರಮುಖವಾಗಿ ನೈಸರ್ಗಿಕ ಅನಿಲ ಬೇಕಾಗುತ್ತದೆ. ಇದರೊಂದಿಗೆ ಇನ್ನುಳಿದ ಕಚ್ಚಾವಸ್ತುಗಳು ಬರುವುದು ಕತಾರ್, ಸೌದಿ ಅರೇಬಿಯಾ ಸೇರಿದಂತೆ ಮಧ್ಯಪ್ರಾಚ್ಯದ ದೇಶಗಳಿಂದ. ಅದರಲ್ಲೂ ಬಹುಪಾಲು ಕಚ್ಚಾ ವಸ್ತು ಹೋರ್ಮುಜ್ ಜಲಸಂಧಿ ಮಾರ್ಗದ ಮೂಲಕವೇ ಬರುತ್ತದೆ. ಸದ್ಯ ಹೋರ್ಮುಜ್ ಜಲಸಂಧಿ ಬಹುತೇಕ ಬಂದಾಗಿದ್ದು, ಕಚ್ಚಾ ವಸ್ತುಗಳು ಬರುತ್ತಿಲ್ಲ. ಸದ್ಯಕ್ಕೆ ಬೇಕಾಗುವಷ್ಟು ಕಚ್ಚಾ ವಸ್ತುಗಳ ದಾಸ್ತಾನಿದೆ ಎಂದು ಮೂಲಗಳು ತಿಳಿಸಿವೆ. ಆದರೂ ಸಹ ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ರಸಗೊಬ್ಬರ ಖರೀದಿಗೆ ಕಡಿವಾಣ ಹಾಕಲು ಮುಂದಾಗಿದ್ದು, ಎಫ್‌ಐಡಿ ಕಡ್ಡಾಯಗೊಳಿಸಿ ಕೃಷಿ ಇಲಾಖೆ ಮೂಲಕ ಸುತ್ತೋಲೆ ಹೊರಡಿಸಿದೆ.
ಯೂರಿಯಾ ಬಳಕೆಗೆ ಕಡಿವಾಣ:
ರೈತರು ಯೂರಿಯಾ ಗೊಬ್ಬರವನ್ನು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದ್ದಾರೆ. ಒಂದು ಎಕರೆಗೆ 1ರಿಂದ 2 ಚೀಲವಾದರೆ ಸಾಕು. ಆದರೆ, ನಾಲ್ಕೈದು ಚೀಲದವರೆಗೂ ಬಳಕೆ ಮಾಡುತ್ತಿದ್ದಾರೆ. ಕೆಲ ಕೈಗಾರಿಕೆಗೂ ಅನಧಿಕೃತವಾಗಿ ಯೂರಿಯಾ ಬಳಕೆಯಾಗುತ್ತಿದೆ. ಕೆಲವರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಇದಕ್ಕೆಲ್ಲಾ ಕಡಿವಾಣ ಹಾಕಲು ಎಫ್‌ಐಡಿ ಕಡ್ಡಾಯಗೊಳಿಸಲಾಗಿದೆ.
ಎಫ್‌ಐಡಿಯಲ್ಲಿ ಯಾವ ರೈತರಿಗೆ ಎಷ್ಟು ಎಕರೆ ಜಮೀನಿದೆ. ಅಷ್ಟು ಜಮೀನಿಗೆ ವೈಜ್ಞಾನಿಕವಾಗಿ ಎಷ್ಟು ಗೊಬ್ಬರ ಬಳಸಿದರೆ ಉತ್ತಮ ಎಂಬುದನ್ನು ಲೆಕ್ಕ ಹಾಕಿ ಅಷ್ಟೇ ಪ್ರಮಾಣದ ರಸಗೊಬ್ಬರ ವಿತರಿಸಲು ಕೃಷಿ ಇಲಾಖೆ ನಿರ್ಧರಿಸಿದೆ.
ಆದರೆ, ರೈತರು ಎಫ್‌ಐಡಿಗೆ ನಿಗದಿಪಡಿಸಿದ ಗೊಬ್ಬರವನ್ನಷ್ಟೇ ಖರೀದಿಸುತ್ತಾರೆಯೇ? ಅಥವಾ ಹೆಚ್ಚಿನ ಗೊಬ್ಬರಕ್ಕೆ ಬೇಡಿಕೆ ಇಡುತ್ತಾರೆಯೇ? ಎಂಬುದನ್ನು ಕಾದು ನೋಡಬೇಕಷ್ಟೆ!.
ರಾಜ್ಯದಲ್ಲಿ ಎಷ್ಟಿದೆ ಸ್ಟಾಕ್?:
ರಾಜ್ಯಕ್ಕೆ ಈ ವರ್ಷ ಯೂರಿಯಾ ಸೇರಿದಂತೆ 30 ಲಕ್ಷ ಟನ್ ವಿವಿಧ ರಸಗೊಬ್ಬರ ಹಂಚಿಕೆಯಾಗಿದೆ. ಅದರಲ್ಲಿ ಶೇ.35-40ರಷ್ಟು (10-12 ಲಕ್ಷ ಮೆ.ಟನ್) ಯೂರಿಯಾ ಗೊಬ್ಬರದ ಪಾಲಿದೆ. ಸದ್ಯಕ್ಕೆ 4-5 ಲಕ್ಷ ಟನ್ ಯೂರಿಯಾ ಸೇರಿ 11.4 ಲಕ್ಷ ಟನ್‌ನಷ್ಟು ರಸಗೊಬ್ಬರ ದಾಸ್ತಾನಿದೆ ಎಂದು ಮೂಲಗಳು ತಿಳಿಸಿವೆ.==
ಯೂರಿಯಾ ಸೇರಿದಂತೆ ರಸಗೊಬ್ಬರ ಬಳಕೆ ಅತಿಯಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಎಫ್‌ಐಡಿ ಕಡ್ಡಾಯಗೊಳಿಸಲಾಗಿದೆ. ಜತೆಗೆ, ಗೊಬ್ಬರ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳು ಕೊಲ್ಲಿ ದೇಶದಿಂದಲೇ ಬರಬೇಕಿರುವುದು ಕಡಿವಾಣಕ್ಕೆ ಮತ್ತೊಂದು ಕಾರಣ.
- ಮಂಜುನಾಥ ಅಂತರವಳ್ಳಿ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ.


