ಗೃಹಲಕ್ಷ್ಮಿ ಯೋಜನೆಯ 2000 ಹಣವನ್ನು ಲಪಟಾಯಿಸಲು 24 ಮೈಕ್ರೋ ಫೈನಾನ್ಸ್ ಕಂಪನಿಗಳು ಹಳ್ಳಿಗಳಿಗೆ ನುಗ್ಗಿವೆ. ಕಡಿಮೆ ಬಡ್ಡಿ ದರದ ಆಮಿಷವೊಡ್ಡಿ ಸಾಲ ನೀಡಿ ನಂತರ ಜನರನ್ನು ಸುಲಿಗೆ ಮಾಡುತ್ತಿವೆ ಎಂದು ಆರ್. ಅಶೋಕ ಆರೋಪಿಸಿದ್ದಾರೆ. ಮೈಕ್ರೋಫೈನಾನ್ಸ್ ಕಿರುಕುಳದಿಂದ ಹಲವರು ಊರು ತೊರೆಯುವಂತಾಗಿದೆ.
ಮಂಡ್ಯ (ಫೆ.06): ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ನೀಡಲಾಗುತ್ತಿರುವ ಗೃಹಲಕ್ಷ್ಮಿ ಯೋಜನೆಯ 2,000 ರೂ. ಹಣವನ್ನು ಲಪಟಾಯಿಸಲು ಬರೋಬ್ಬರಿ 24 ಮೈಕ್ರೋ ಫೈನಾನ್ಸ್ ಕಂಪನಿಗಳು ಹಳ್ಳಿ, ಹಳ್ಳಿಗೂ ಲಗ್ಗೆಯಿಟ್ಟಿವೆ. ಈ ಕಂಪನಿಗಳು ಶೇ.1 ಪರ್ಸೆಂಟ್ ಬಡ್ಡಿಗೆ ಸಾಲ ಕೊಡುವುದಾಗಿ ಹೇಳುತ್ತವೆ. 1 ಲಕ್ಷ ರೂ. ಸಾಲ ಪಡೆದವರಿಗೆ 90 ಸಾವಿರ ರೂ. ಕೊಟ್ಟು ನಂತರ ಜನರನ್ನು ಸುಲಿಗೆ ಮಾಡುತ್ತಿವೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯದ ಕೊನ್ನಾಪುರ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್ ಸಾಲದ ಬಾಧೆಯಿಂದ ಊರು ತೊರೆದವರ ಸಂಬಂಧಿಕರ ಮನೆಗಳಿಗೆ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಮೈಕ್ರೋಫೈನಾನ್ಸ್ ಶೂಲ ಬಡವರ ಎದೆ ಸೀಳುತ್ತಿದೆ. ಸುಗ್ರೀವಾಜ್ಞೆ ತರುವುದಾಗಿ ಸಿಎಂ ಸಿದ್ದರಾಮಯ್ಯ ಜನವರಿಯಿಂದ ಹೇಳುತ್ತಿದ್ದಾರೆ. ಸಾಲಕ್ಕೆ ಹೆದರಿ ಊರು ಬಿಡಬೇಡಿ ಎಂದಿದ್ದರು. ಆದರೆ, ಕೊನ್ನಾಪುರ ಗ್ರಾಮದಲ್ಲೇ 6 ಜನ ಊರು ಬಿಟ್ಟಿದ್ದಾರೆ. ಕರ್ನಾಟಕದಲ್ಲಿ 1 ಲಕ್ಷ ಜನ ಊರು ಬಿಟ್ಟು ಹೋಗಿದ್ದಾರೆ ಎಂದು ಮಾಹಿತಿ ನೀಡಿದರು.
ನಾಳೆಯೇ ಸುಗ್ರೀವಾಜ್ಞೆ ಎಂದಿದ್ದವರು ಅದನ್ನು ಜಾರಿಗೆ ತಂದರಾ? ರಾಜ್ಯದಲ್ಲಿ ಸಾವುಗಳು ನಿಂತಿದ್ಯಾ? ತಾಯಿ ಮಗ ಇಬ್ಬರನ್ನು ಕಳೆದುಕೊಂಡ ಕುಟುಂಬದ ಗತಿ ಏನಾಗಬೇಕು? ಇಡೀ ಕುಟುಂಬ ಅನಾರೋಗ್ಯದಿಂದ ಬಳಲುತ್ತಿದೆ. ಸಿದ್ದರಾಮಯ್ಯಗೆ ಕಣ್ಣು, ಕಿವಿ ಇದ್ಯಾ? ಬಡವರ ಪರ ಸರ್ಕಾರ ಅಂತೀರಲ್ಲಾ? ಇವರಾರು ಬಡವರಲ್ವಾ? ದಲಿತರಲ್ವಾ? ಒಬ್ಬ ಎಂಎಲ್ಎ, ಸಚಿವ, ಸಿಎಂ ಯಾರು ಕೂಡ ಈ ಬಡವನರ ಮನೆಗೆ ಬಂದಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಂಭಮೇಳದಲ್ಲಿ ಮುಳುಗಿದರೆ ಹೊಟ್ಟೆಗೆ ಅನ್ನ ಸಿಗುತ್ತದೆಯೇ ಎಂದಿದ್ದರು. ಆದರೆ, ಇಲ್ಲಿ ನಿಮ್ಮ ಜನಾಂಗದವರೇ ಪ್ರಾಣ ಭಿಕ್ಷೆ ಕೇಳುತ್ತಿದ್ದಾರೆ. ಇದರ ಬಗ್ಗೆ ನೀವ್ಯಾಕೆ ಸಂಸತ್ತಿನಲ್ಲಿ ಮಾತಾನಾಡುತ್ತಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ: ಇನ್ನೆರಡು ದಿನದಲ್ಲಿ ಬೆಂಗಳೂರಿನಲ್ಲಿ ನೀರಿನ ದರ ಏರಿಕೆ, ಸರ್ಕಾರದ ಒಪ್ಪಿಗೆ ಮಾತ್ರ ಬಾಕಿ
ರಾಜ್ಯ ಸರ್ಕಾರ 2,000 ಕೊಡುತ್ತದೆ ಅಂತ ಮೈಕ್ರೋಫೈನಾನ್ಸ್ ಕಂಪನಿಗಳು ಹಳ್ಳಿ ಹಳ್ಳಿಗೆ ಬಂದಿವೆ. ರಾಜ್ಯದಲ್ಲಿ ಸುಮಾರು 24 ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಇಲ್ಲಿ ಕೆಲಸ ಮಾಡುತ್ತಿವೆ. ಸಾಲ ಬೇಕಾದವರು ಬ್ಯಾಂಕ್‌ಗೆ ಹೋಗಬೇಕು. ಆದರೆ, ಅವರೇ ಬಂದು ಯಾವುದೇ ಶೂರಿಟಿ ಇಲ್ಲದೆ ಸಾಲ ಕೊಡುತ್ತೀವಿ ಎಂದು ಹೇಳುತ್ತಾರೆ. ಶೇ.1% ಬಡ್ಡಿ ದರದಲ್ಲಿ ಸಾಲ ಕೊಡ್ತೀವಿ ಅಂತಾರೆ. ಸರ್ಕಾರದ 2000 ಬರುತ್ತಲ್ವಾ? ಮಿಕ್ಕಿದ್ದು ಸೇರಿಸಿ ಕಟ್ಟಿ ಅಂತ ಆಸೆ ತೋರಿಸಿ ಸಾಲ ಕೊಡುತ್ತಾರೆ. 1 ಲಕ್ಷ ರೂ. ಸಾಲ ಕೊಡುವುದಾಗಿ ಹೇಳಿ 90 ಸಾವಿರ ರೂ. ಕೈಗೆ ಕೊಡುತ್ತಾರೆ. ಜೊತೆಗೆ, 9 ಜನ ಶೂರಿಟಿ ಪಡೆದು ಸಾಲ ಕೊಡುತ್ತಾರೆ. ಈ ನಿಯಮ ಯಾವ RBI ರೂಲ್ಸ್‌ನಲ್ಲಿದೆ? ಮುಂದುವರೆದು ಸಾಲ ಕಟ್ಟದಿದ್ದರೆ ಮಾನ ತೆಗೆಯುವ ಕೆಲಸ ಆಗುತ್ತದೆ. ಹಳ್ಳಿ ಜನರು ಮಾನಕ್ಕೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅಕ್ರೋಶ ಹೊರಹಾಕಿದರು.
ನಮ್ಮ ರಾಜ್ಯದಲ್ಲಿ ಪೊಲೀಸರ ದೌರ್ಜನ್ಯ ಕೂಡ ಜಾಸ್ತಿ ಆಗಿದೆ. ಕೋರ್ಟ್ ಆರ್ಡರ್ ಪ್ರಕಾರ ಪೊಲೀಸರು ರಕ್ಷಣೆ ಕೊಡಬೇಕು. ಆದರೆ, ಇಲ್ಲಿ ಪೊಲೀಸರು ಎಳೆದುಕೊಂಡು ಬಂದು ಆಚೆ ಹಾಕಿದ್ದಾರೆ. ಆತ್ಮಹತ್ಯೆ ಮಾಡ್ಕೋ, ಇನ್ಶೂರೆನ್ಸ್‌ನಲ್ಲಿ ನಾವು ಕೊಟ್ಟ ಸಾಲ ತೀರುತ್ತದೆ ಎಂದು ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ನೊಂದವರ ಪರ ನಿಲ್ಲಬೇಕಿತ್ತು. ಸಾಕಷ್ಟು ಫೈನಾನ್ಸ್ ಕಂಪನಿಗಳು ಅನಧಿಕೃತವಾಗಿ ಕೆಲಸ ಮಾಡುತ್ತಿವೆ. ಇದನ್ನೆಲ್ಲಾ ನೋಡಿಕೊಂಡು ಹೇಗೆ ಸುಮ್ಮನೆ ಬಿಟ್ಟಿದ್ದೀರಿ ಸಿದ್ದರಾಮಯ್ಯನವರೇ.? ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ: ತಿರುಮಕೂಡಲು ನರಸೀಪುರ ಕುಂಭಮೇಳಕ್ಕೆ 6 ಕೋಟಿ ರೂಪಾಯಿ ನೀಡಿದ ರಾಜ್ಯ ಸರ್ಕಾರ!
ರಾಜ್ಯದಲ್ಲಿ ಮೈಕ್ರೋಫೈನಾನ್ಸ್ ಕಿರುಕುಳಕ್ಕೆ 30 ಜನ ಸತ್ತಿದ್ದು ಇದೇ ಮೊದಲು. ಈ ಸಾವಿಗೆ ಯಾರು ಕಾರಣ? ಮನೆಹಾಳು ಕಾಂಗ್ರೆಸ್ ಸರ್ಕಾರ ಸುಗ್ರೀವಾಜ್ಞೆ ತರುವ ಹೊತ್ತಿಗೆ ಇನ್ನೇಷ್ಟು ಸಾವಾಗಬೇಕು? ಮೈಕ್ರೋಫೈನಾನ್ಸ್ ಕಿರುಕುಳ ಕೊಟ್ರೆ ಜೈಲಿಗೆ ಕಳುಹಿಸುವುದಾಗಿ ಅಧಿಕಾರಿಗಳು ಹೇಳಬೇಕು. ಎಲ್ಲೆಲ್ಲಿ ಸಮಸ್ಯೆ ಇದೆಯೋ ಅಲ್ಲೆಲ್ಲಾ ಡಂಗೂರ ಸಾರಿಸಬೇಕು. ಈ ಕೆಲಸ ವಿಪಕ್ಷ ನಾಯಕ ಮಾಡಿಸುವ ಬದಲು ಸರ್ಕಾರ ಮಾಡಬಹುದಿತ್ತಲ್ವಾ? ಎಂದು ಆರ. ಅಶೋಕ್ ಹೇಳಿದರು.
