ಕೊರೋನಾ ಮಧ್ಯೆ ಇಂದಿನಿಂದ ಮೆಟ್ರೋ ಸಂಚಾರ ಶುರು
ಬೈಯಪ್ಪನಹಳ್ಳಿ- ಮೈಸೂರು ರಸ್ತೆ ನಡುವೆ ಸಂಚಾರ|ಸ್ಯಾನಿಟೈಸರ್‌ನಿಂದ ರೈಲು ಬೋಗಿಗಳ ಸ್ವಚ್ಛತೆ| ಪ್ರಯಾಣಿಕರಿಗೆ ಸೂಚನೆ| ಸ್ಮಾರ್ಟ್‌ಕಾರ್ಡ್ ಇರುವವರಿಗೆ ಮಾತ್ರ ಸದ್ಯಕ್ಕೆ ಮೆಟ್ರೋ ಪ್ರಯಾಣಕ್ಕೆ ಅನುಮತಿ|
ಬೆಂಗಳೂರು(ಸೆ.07): ಬರೋಬ್ಬರಿ ಐದು ತಿಂಗಳ ನಂತರ ನಮ್ಮ ಮೆಟ್ರೋ ರೈಲು ಸಂಚಾರ ಸೋಮವಾರ ಮತ್ತೆ ಆರಂಭವಾಗಲಿದೆ. ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಮೆಟ್ರೋ ರೈಲು ಸಂಚಾರ ಮತ್ತೆ ಆರಂಭಿಸಲು ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಕೇಂದ್ರದ ಮಾರ್ಗಸೂಚಿಯಂತೆ ಬಿಎಂಆರ್‌ಸಿಲ್ ಸಕಲ ಸಿದ್ಧತೆ ಮಾಡಿಕೊಂಡಿದೆ.
ಕೇಂದ್ರ ಸರ್ಕಾರ ಮೆಟ್ರೋ ಸೇವೆ ಆರಂಭಿಸಲು ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಸತತ ಐದು ದಿನಗಳಿಂದ ನಮ್ಮ ಮೆಟ್ರೋ ರೈಲುಗಳನ್ನು ರಾಸಾಯನಿಕ ಬಳಸಿ ಸ್ವಚ್ಛತಾ ಮತ್ತು ಸ್ಯಾನಿಟೈಸರ್ ಸಿಂಪಡಣೆ ಕಾರ್ಯ ಕೈಗೊಂಡಿತ್ತು. ಪ್ರಯಾಣಿಕರ ಹಿತದೃಷ್ಟಿಯಿಂದ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಮೆಟ್ರೋ ನಿಲ್ದಾಣಗಳ ಎಲ್ಲೆಡೆ ಸೂಚನಾ ಫಲಕಗಳು ಮತ್ತು ಧ್ವನಿವರ್ಧಕದ ಮೂಲಕ ಪ್ರಕಟಣೆ ಮಾಡುವ ವ್ಯವಸ್ಥೆಯನ್ನು ಮೆಟ್ರೋ ನಿಗಮ ಮಾಡಿದೆ.
ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಕೇವಲ ಒಂದು ಮಾರ್ಗ (ನೇರಳೆ ಮಾರ್ಗದಲ್ಲಿ ಮಾತ್ರ ಬೆಳಗ್ಗೆ 8ಕ್ಕೆ ಬೈಯ್ಯಪ್ಪನಹಳ್ಳಿ- ಮೈಸೂರು ರಸ್ತೆ ಮತ್ತು ಮೈಸೂರು ರಸ್ತೆ- ಬೈಯ್ಯಪ್ಪನಹಳ್ಳಿ ನಡುವೆ ರೈಲು ಸಂಚಾರ ಪ್ರಾರಂಭವಾಗಲಿದೆ. ಬೆಳಗ್ಗೆ 8ರಿಂದ 11ರವರೆಗೆ ಮತ್ತು ಸಂಜೆ 4.30 ರಿಂದ 7.30ರವರೆಗೆ ತಲಾ 5 ನಿಮಿಷಗಳ ಅಂತರದಲ್ಲಿ ರೈಲುಗಳು ಕಾರ್ಯನಿರ್ವಹಿಸಲಿದ್ದು, ಸೆ.7ರಿಂದ 10ರವರೆಗೆ ನೇರಳೆ ಮಾರ್ಗದಲ್ಲಿ ಮಾತ್ರ ಮೆಟ್ರೋ ರೈಲು ಸಂಚರಿಸಲಿವೆ. ಹಾಗೆಯೇ, ಕಂಟೈನ್‌ಮೆಂಟ್ ವಲಯದಲ್ಲಿ ಮೆಟ್ರೋ ರೈಲು ನಿಲ್ಲಿಸದಿರಲು ಬಿಎಂಆರ್‌ಸಿಎಲ್ ನಿರ್ಧರಿಸಿದ್ದು, ಕಂಟೈನ್‌ಮೆಂಟ್ ವಲಯದ ಪ್ರಯಾಣಿಕರ ಸಮೀಪದ ಇತರೆ ನಿಲ್ದಾಣಗಳಲ್ಲಿ ಹತ್ತುವ ಮತ್ತು ಇಳಿಯುವಂತೆ ಮೆಟ್ರೋ ನಿಗಮ ಮನವಿ ಮಾಡಿದೆ.
ಐದು ತಿಂಗಳ ಬಳಿಕ ಮೆಟ್ರೋ ರೈಲು ಆರಂಭ
ಮೆಟ್ರೋ ನಿಲ್ದಾಣ ಮತ್ತು ರೈಲುಗಳಲ್ಲಿ ಮುಖಗವುಸು ಕಡ್ಡಾಯವಾಗಿ ಬಳಸಬೇಕು. ನಿಲ್ದಾಣಗಳ ಪ್ರವೇಶ ದ್ವಾರದಲ್ಲಿ ಪ್ರತಿ ಪ್ರಯಾಣಿಕರು ಸ್ಯಾನಿಟೈಸರ್‌ನಿಂದ ಕೈ ಸ್ವಚ್ಛಗೊಳಿಸಿಕೊಳ್ಳಬೇಕು. ಪ್ರಯಾಣಿಕರು ತಮ್ಮದೇ ಸ್ಯಾನಿಟೈಸರ್ ಬಳಕೆಗೆ ಪ್ರೋತ್ಸಾಹ ನೀಡಲಾಗುವುದು. ನಿಲ್ದಾಣಗಳ ಪ್ರವೇಶ ದ್ವಾರದಲ್ಲಿ ಎಎಫ್‌ಸಿ ಗೇಟ್ ಪ್ರವೇಶ ಮತ್ತು ನಿರ್ಗಮನದ ಸಮಯದಲ್ಲಿ ಮತ್ತು ಪ್ಲಾಟ್‌ಫಾಮ್‌ರ್‍ನಲ್ಲಿ ಹಳದಿ ಗುರುತಿನ ಜಾಗದಲ್ಲಿಯೇ ನಿಲ್ಲಬೇಕು. ಮೆಟ್ರೋ ರೈಲಿನಲ್ಲಿಯೂ ಕೂಡ ಹಳದಿ ಗುರುತಿನ ಜಾಗದಲ್ಲಿ ನಿಲ್ಲುವ ಮತ್ತು ಕುಳಿತುಕೊಳ್ಳುವಂತೆ ಮೆಟ್ರೋ ನಿಗಮ ಸೂಚಿಸಿದೆ.
400 ಪ್ರಯಾಣಿಕರಿಗೆ ಅವಕಾಶ:
ನಿಲ್ದಾಣಗಳು ಮತ್ತು ಮೆಟ್ರೋ ರೈಲಿನಲ್ಲಿ ಎಲ್ಲರೂ ಕಡ್ಡಾಯವಾಗಿ ಎರಡು ಮೀಟರ್ (6 ಅಡಿ) ಅಂತರ ಕಾಯ್ದುಕೊಳ್ಳಬೇಕು. 50ಕ್ಕಿಂತ ಹೆಚ್ಚು ಪ್ರಯಾಣಿಕರು ನಿಲ್ದಾಣಗಳಲ್ಲಿ ನಿಲ್ಲಲು ಅನುಮತಿ ಇಲ್ಲ. ನಿಲ್ದಾಣಗಳ ಪ್ರವೇಶವನ್ನು ಅದಕ್ಕೆ ತಕ್ಕಂತೆ ಅನುಗುಣವಾಗಿ ನಿಯಂತ್ರಿಸಲಾಗಿದೆ. ಪ್ರತಿ ರೈಲಿನಲ್ಲಿ ಗರಿಷ್ಠ 400 ಪ್ರಯಾಣಿಕರಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಹತ್ತಿದ್ದರೆ ಅವರು ಮುಂದಿನ ನಿಲ್ದಾಣದಲ್ಲಿ ಇಳಿಯಬೇಕಾಗುತ್ತದೆ. ಜತೆಗೆ ಲಿಫ್ಟ್‌ಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಜನರು ಪ್ರಯಾಣಿಸಬಾರದು. 65 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 10 ವರ್ಷದೊಳಗಿನವರು ಅಗತ್ಯವಿದ್ದರೆ ಮಾತ್ರ ಪ್ರಯಾಣಿಸಬೇಕು. ರೈಲು ಹತ್ತುವಾಗ ಮತ್ತು ಇಳಿಯುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ರೈಲು ಪ್ರತಿ ನಿಲ್ದಾಣದಲ್ಲಿ 60 ಸೆಕೆಂಡ್ ಮತ್ತು ಇಂಟರ್ ಎಕ್ಸ್‌ಚೇಂಜ್ ನಿಲ್ದಾಣದಲ್ಲಿ 75 ಸೆಕೆಂಡ್ ಮಾತ್ರ ನಿಲುಗಡೆಯಾಗಲಿದೆ ಎಂದು ಮಾರ್ಗಸೂಚಿಯಲ್ಲಿ ಮೆಟ್ರೋ ನಿಗಮ ಮಾಹಿತಿ ನೀಡಿದೆ.
ಆ್ಯಪ್ ಸಾರ್ವಜನಿಕರಿಗೆ ಲಭ್ಯ
ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಆರ್‌ಸಿಎಲ್ ಅಭಿವೃದ್ಧಿಪಡಿಸಿರುವ ನಮ್ಮ ಮೆಟ್ರೋ ಆ್ಯಪ್ ಭಾನುವಾರದಿಂದ ಸಾರ್ವಜನಿಕ ಬಳಕೆಗೆ ಲಭ್ಯವಾಗಿದೆ. ಆಂಡ್ರಾಯ್ಡ್ ಮೊಬೈಲ್‌ನ ಪ್ಲೇಸ್ಟೋರ್‌ನಲ್ಲಿ ಆಪ್ ದೊರೆಯಲಿದ್ದು, ಐದು ಸ್ಮಾರ್ಟ್ ಕಾರ್ಡ್‌ಗಳನ್ನು ಸೇವ್ ಮಾಡಿ ಆನ್‌ಲೈನ್ ಮೂಲಕವೇ ಟಾಪ್‌ಅಪ್ ಮಾಡಲು ಅವಕಾಶ ನೀಡಲಾಗಿದೆ. ಸ್ಮಾರ್ಟ್‌ಕಾರ್ಡ್ ಇರುವವರಿಗೆ ಮಾತ್ರ ಸದ್ಯಕ್ಕೆ ಮೆಟ್ರೋ ಪ್ರಯಾಣಕ್ಕೆ ಅನುಮತಿ ನೀಡಲಾಗಿದ್ದು, ತಾತ್ಕಾಲಿಕವಾಗಿ ಟೋಕನ್ ವ್ಯವಸ್ಥೆ ಇರುವುದಿಲ್ಲ ಎಂದು ಮೆಟ್ರೋ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.