Asianet Suvarna News Asianet Suvarna News

Belagavi Riot: ಅಂದು ರಾಯಣ್ಣ, ಇಂದು ಬಸವಣ್ಣ, ಎಂಇಎಸ್ ಪುಂಡಾಟಕ್ಕೆ ಬ್ರೇಕ್ ಯಾವಾಗಣ್ಣ?

*ಬೆಳಗಾವಿಯಲ್ಲಿ ಮುಂದುವರೆದ ಎಂಇಎಸ್ ಪುಂಡರ ಪುಂಡಾಟಿಕೆ
* ಬಸವಣ್ಣ ಮೂರ್ತಿಗೆ ಅವಮಾನ ಮಾಡಿದ ದುಷ್ಕರ್ಮಿಗಳು
*ಬೆಳಗಾವಿ ಅಂದು ರಾಯಣ್ಣ, ಇಂದು ಬಸವಣ್ಣ

MES damaged basaveshwara photo after Sangolli rayanna statue at Belagavi rbj
Author
Bengaluru, First Published Dec 20, 2021, 9:05 PM IST

ಬೆಳಗಾವಿ, (ಡಿ.20): ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ (Sangolli Rayanna) ಭಗ್ನಗೊಳಿಸಿದ್ದಕ್ಕೆ ರಾಜ್ಯದಾದ್ಯಂತ ಆಕ್ರೋಶ ಭುಗಿಲೆದ್ದಿರುವ ಸಂದರ್ಭದಲ್ಲೇ, ಜಿಲ್ಲೆಯ ಖಾನಾಪುರ ತಾಲ್ಲೂಕಿನ  ಗ್ರಾಮದಲ್ಲಿ ಜಗಜ್ಯೋತಿ ಬಸವೇಶ್ವರ ಫೋಟೊಗೆ (Basaveshwara Photo) ಸಗಣಿ ಮೆತ್ತಿ ಅವಮಾನಿಸಲಾಗಿದೆ. ಮೊನ್ನೇ ರಾಯಣ್ಣ ಇಂದು ಬಸವಣ್ಣ.

ಹೌದು...ಹಲಸಿ ಗ್ರಾಮದಲ್ಲಿ ಸೋಮವಾರ  ಬಸವೇಶ್ವರ ವೃತ್ತಕ್ಕೆ ಹಾಕಿರುವ ಫೋಟೊಗೆ ಸಗಣಿ ಹಾಕಲಾಗಿದೆ. ಅದೇ ವೃತ್ತದಲ್ಲಿ ಅಳವಡಿಸಿದ್ದ ಕನ್ನಡ ನಾಮಫಲಕಕ್ಕೆ ಮಸಿ ಬಳಿದಿದ್ದಾರೆ. ಅಲ್ಲಿನ ಗ್ರಾಮ ಪಂಚಾಯ್ತಿ ಆವರಣದಲ್ಲಿದ್ದ ಕನ್ನಡ(Kannada) ಬಾವುಟವನ್ನೂ ಕಿತ್ತು ಹಾಕಿದ್ದಾರೆ. ಕಿಡಿಗೇಡಿಗಳ ಈ ಕೃತ್ಯವನ್ನು ಕನ್ನಡಪರ ಸಂಘಟನೆಗಳು ಖಂಡಿಸಿವೆ..

Sangolli Rayanna Statue ಅದೇ ಜಾಗದಲ್ಲಿ ರಾಯಣ್ಣ ಪ್ರತಿಮೆ ಮರುಸ್ಥಾಪನೆ, ಕನ್ನಡಿಗರ ಹೋರಾಟಕ್ಕೆ ಜಯ

ರಾಯಣ್ಣ ಮೂರ್ತಿ ವಿರೂಪಗೊಳಿಸಿದ್ದ ಪುಂಡರು
 ಬೆಳಗಾವಿಯ (Belagavi) ಅನಗೋಳದಲ್ಲಿ ದುಷ್ಕರ್ಮಿಗಳಿಂದ ವಿರೂಪಗೊಂಡಿದ್ದ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು (Sangolli Rayanna Statue) ಮರು ಸ್ಥಾಪನೆ ಮಾಡಲಾಗಿದೆ.

ಮೊನ್ನೆ(ಶುಕ್ರವಾರ ) ರಾತ್ರಿ ಕಿಡಿಗೇಡಿಗಳು ಮಾರಕಾಸ್ತ್ರಗಳಿಂದ ಅನಗೋಳದ ಕನಕದಾಸ ಕಾಲೋನಿಯಲ್ಲಿದ್ದ ರಾಯಣ್ಣ ಮೂರ್ತಿಯನ್ನು ವಿರೂಪಗೊಳಿಸಿದ್ದರು. ಸದ್ಯ ಅದೇ ಮೂರ್ತಿಯನ್ನು ಪೊಲೀಸರು ರಿಪೇರಿ ಮಾಡಿಸಿದ್ದು, ಮೊದಲಿನ ಜಾಗದಲ್ಲಿಯೇ ಮರು ಪ್ರತಿಷ್ಠಾಪಿಸಲಾಗಿದೆ. 

ಎಂಇಎಸ್ ಪುಂಡಾಟ
ಇದೇ ಮೊದಲು ಅಲ್ಲ. ಪದೇ ಪದೇ ಎಂಇಎಸ್ ಪುಂಡರು ಬೆಳಗಾವಿಯಲ್ಲಿ ಕಾಲು ಕೆದರಿ ಕನ್ನಡಿಗರ ಜೊತೆ ಜಗಳಕ್ಕಿಯುತ್ತಲೇ ಇದ್ದಾರೆ. ಅಲ್ಲದೇ ಕನ್ನಡಕ್ಕೆ ಅವಮಾನ ಮಾಡುವಂತೆ ಕೃತ್ಯಗಳನ್ನ ಸಹ ಮಾಡುತ್ತಾ ಬಂದಿದ್ದಾರೆ. ಕನ್ನಡ ಧ್ವಜ ಸುಡುವುದು, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಎಂಇಎಸ್ ಧ್ವಜ ಹಾರಿಸುವುದು ಹೀಗೆ ನಾಡದ್ರೋಹ ಕೃತ್ಯಗಳನ್ನ ಮಾಡುತ್ತಲೇ ಬಂದಿದ್ದಾರೆ. ಆದ್ರೆ, ಸರ್ಕಾರಗಳು ಮಾತ್ರ ಇದುವರೆಗೂ ಅವರಿಗೆ ಬಿಸಿ ಮುಟ್ಟಿಸಿಲ್ಲ. ಈ ಹಿನ್ನೆಲೆಯಲ್ಲಿ ಪುಂಡರು ಪದೇ ಪದೇ ಇಂತಹ ಕೆಲಸ ಮಾಡುತ್ತಿದ್ದಾರೆ.

ಇದೀಗ ಬಸವಣ್ಣ ಹಾಗೂ ರಾಯಣ್ಣ ಮೂರ್ತಿಗೆ ಅವಮಾನಿಸಿದ್ದಲ್ಲದೇ ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿದ್ದಾರೆ. ಸಾಲದಕ್ಕೆ ಕರ್ನಾಟಕ ಸಾರಿಗೆ ಬಸ್‌ಗಳ ಮೇಲೆ ಕಲ್ಲು ಎಸೆದು ಹಾನಿ ಮಾಡಿದ್ದಾರೆ. ಇಷ್ಟೆಲ್ಲಾ ರಂಪಾಟ ಮಾಡುತ್ತಿರುವ ಎಂಇಎಸ್‌ಗೆ ಒಂದು ಅಂತಿಮ ಗತಿ ಕಾಣಿಸಬೇಕಿದೆ. ಈ ಬಗ್ಗೆ ರಾಜ್ಯ ಸರ್ಕಾರ ಕಠಿಣ ಕ್ರಮತೆಗೆದುಕೊಳ್ಳಬೇಕಿದೆ.

Belagavi: ಸುವರ್ಣಸೌಧದಲ್ಲಿ ಚೆನ್ನಮ್ಮ, ರಾಯಣ್ಣ ಪ್ರತಿಮೆ ಸ್ಥಾಪನೆ, ಸಿಎಂ ಘೋಷಣೆ

ಎಂಇಎಸ್ ಪುಂಡಾಟಿಕೆ ವಿರುದ್ಧ ಖಂಡನಾ ನಿರ್ಣಯ
ಎಂಇಎಸ್ ಪುಂಡಾಟಿಕೆ ವಿರುದ್ಧ ಸುವಣರ್ಣ ಸೌಧದ ವಿಧಾನಸಭೆ  ಅಧಿವೇಶನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ ನಿರ್ಣಯ ಸರ್ವಾನುಮತದಿಂದ ಅಂಗೀಕಾರಗೊಂಡಿತು. ಬೆಳಗಾವಿಯಲ್ಲಿ ರಾಯಣ್ಣ ಪ್ರತಿಮೆಗೆ ಹಾನಿ ಹಾಗೂ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟ ವಿಚಾರವಾಗಿ ವಿಧಾನ ಸಭೆಯಲ್ಲಿ ಚರ್ಚೆ ನಡೆಯಿತು. ಮೂರು ಪಕ್ಷದ‌ ಸದಸ್ಯರು ಎಂಇಎಸ್ ಪುಂಡಾಟಿಕೆಯನ್ನು ಖಂಡಿಸಿದರು.

ಬಳಿಕ ಸಿಎಂ ಬಸವರಾಜ ಬೊಮ್ಮಾಯಿ‌ ಅವರು ಖಂಡನಾ ನಿರ್ಣಯ ಮಂಡಿಸಿದರು. ಈ‌ ಖಂಡನಾ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಖಂಡನಾ ನಿರ್ಣಯದಲ್ಲಿ ಏನಿದೆ..?
ಗಡಿ ವಿವಾದದಲ್ಲಿ ಮಹಾಜನ್ ಆಯೋಗ ವರದಿ ಅಂತಿಮ ಎಂಬುದು ರಾಜ್ಯದ ನಿಲುವಾಗಿದೆ. ಆದರೂ ಕೆಲವು ವ್ಯಕ್ತಿಗಳು ಶಾಂತಿಭಂಗವನ್ನು ಉಂಟು ಮಾಡುವುದು ಖಂಡನೀಯ. ಈ ಕೃತ್ಯವನ್ನು ಒಕ್ಕೊರಲಿನಿಂದ ಸದನ ಖಂಡನೆ ಮಾಡುತ್ತದೆ. ಮತ್ತು ತಕ್ಕ ಶಿಕ್ಷೆಯನ್ನು ಪುಂಡರಿಗೆ ಮಾಡಬೇಕು ಎಂದು ಒಕ್ಕೊರಲಿನಿಂದ ನಿರ್ಣಯ ಮಾಡುತ್ತದೆ.

ಇತ್ತೀಚೆಗೆ ಸಂಗೊಳ್ಳಿ ರಾಯಣ್ಣ ಪ್ರತಿಮೆ, ಕನ್ನಡ ಧ್ವಜ ‌ಸುಟ್ಟ ಪ್ರಕರಣ, ಬಸವಣ್ಣನಿಗೆ ಮಾಡಿದ ಅವಮಾನ, ಶಿವಾಜಿಗೆ ಪ್ರತಿಮೆಗೆ ಮಸಿ ಬಳಿದಿರುವ ಪ್ರಕರಣವನ್ನು ಈ ಸಭೆ ಖಡಾ ಖಂಡಿತವಾಗಿ ಖಂಡಿಸುತ್ತದೆ.

ಇಂತಹ ಕೃತ್ಯ ಎಸಗುವ ದುಷ್ಕರ್ಮಿಗಳಿಗೆ ದೇಶ ದ್ರೋಹಿ ಪ್ರಕರಣ ಎಂದು ನಿರ್ಣಯಿಸಿ ಕಾನೂನಿನ ಕಠಿಣ ಕ್ರಮವನ್ನು ಜರುಗಿಸಲಾಗುವುದು. ಮತ್ತು ನಡೆದಿರುವ ಘಟನೆಗಳ‌ ವಿವರಗಳನ್ನು ಕೇಂದ್ರದ ಗೃಹ‌ ಸಚಿವಾಲಯಕ್ಕೆ ಕಳಿಸಿಕೊಡಲಾಗುವುದು. ಹಾಗೂ ಎರಡು ರಾಜ್ಯಗಳ ಮಧ್ಯೆ ಸಾಮರಸ್ಯ ಇರಬೇಕು ಎಂದು ಕರ್ನಾಟಕ ಸರ್ಕಾರ‌ ಬಯಸುತ್ತದೆ. ಆದರೆ ಇಂತಹ ಪುಂಡಾಟಿಕೆಯಿಂದ ಶಾಂತಿ ಕದಲಿಸುತ್ತಿದೆ. ಇದು ಆಗುವಂತೆ ಗಡಿಯಿಂದ‌‌ ಆಚೆಯೂ‌ ಕೂಡಾ ಪ್ರೋತ್ಸಾಹ ಇರುವುದರಿಂದ ಪುಂಡಾಟಿಕೆಯನ್ನು ಗಡಿಯ ಆಚೆಗೂ ನಿಲ್ಲಿಸಬೇಕು ಎಂದು‌ ಸದನ ನಿರ್ಣಯ ಮಾಡುತ್ತದೆ.

ಇನ್ಮುಂದೆ ಇಂತಹ ಎಲ್ಲ ಪ್ರಕರಣಗಳನ್ನು‌ ದೇಶ ದ್ರೋಹ ಪ್ರಕರಣ ಎಂದು ಮತ್ತು ಇದಕ್ಕೆ ಪ್ರಚೋದನೆ ಮಾಡಿದವರ ವಿರುದ್ಧ ಗೂಂಡಾ ಕಾಯಿದೆ ದಾಖಲಿಸುತ್ತೇವೆ. ನಡೆದ ಕೃತ್ಯವನ್ನು ಎಲ್ಲ ಪಕ್ಷಗಳು ಒಕ್ಕೊರಲಿನಿಂದ ಖಂಡಿಸುತ್ತೇವೆ. ಹಾಗೂ ಪುನರಾವರ್ತನೆ ಆಗದಂತೆ‌ ಒಕ್ಕೊರಲಿನಿಂದ ಎದುರಿಸುತ್ತೇವೆ ಎಂದು ಖಂಡನಾ ನಿರ್ಣಯವನ್ನು ಅಂಗೀಕರಿಸಲಾಗಿದೆ.

Follow Us:
Download App:
  • android
  • ios