ಕಾವೇರಿ ಎಸ್‌.ಎಸ್‌.

ಬೆಂಗಳೂರು(ಸೆ.14): ಕೊರೋನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಕಳೆದ ಐದು ತಿಂಗಳಿನಿಂದ ಬಂದ್‌ ಆಗಿದ್ದ ಕೆ.ಆರ್‌.ಮಾರ್ಕೆಟ್‌, ಕಲಾಸಿಪಾಳ್ಯ ಮಾರುಕಟ್ಟೆಗಳನ್ನು ಸೆ.1ರಿಂದ ತೆರೆಯಲಾಗಿದೆ. ಆದರೆ, ಮಾರುಕಟ್ಟೆಗಳು ತೆರೆದಿದ್ದರೂ ಗ್ರಾಹಕರ ಸುಳಿವೂ ಇಲ್ಲವಾಗಿದೆ.

ಈ ಹಿಂದೆ ಪ್ರತಿನಿತ್ಯ ಜನಜಂಗುಳಿ ತುಂಬಿಕೊಂಡು ಕೋಟ್ಯಂತರ ರುಪಾಯಿ ವಹಿವಾಟು ನಡೆಯುತ್ತಿದ್ದ ಮಾರುಕಟ್ಟೆಯ ಚಿತ್ರಣವನ್ನೇ ಕೊರೋನಾ ಬದಲಾಯಿಸಿದೆ. ಕೆ.ಆರ್‌.ಮಾರುಕಟ್ಟೆಯಲ್ಲಿ 2200 ವಿವಿಧ ಮಳಿಗೆಗಳಿವೆ. 1500 ಬೀದಿಬದಿಯ ಸಣ್ಣಪುಟ್ಟ ವ್ಯಾಪಾರಿಗಳಿದ್ದಾರೆ. ಬಟ್ಟೆ, ದಿನಸಿ ಸೇರಿದಂತೆ 25 ಬಗೆಯ ವ್ಯಾಪಾರ ಇಲ್ಲಿ ನಡೆಯುತ್ತದೆ. ಸಾವಿರಾರು ಜನರು ಇಲ್ಲಿ ನಡೆಯುವ ವ್ಯಾಪಾರವನ್ನು ಅವಲಂಬಿಸಿದ್ದಾರೆ. ಆದರೆ, ಕೊರೋನಾ ಎಲ್ಲರ ಬದುಕನ್ನು ಛಿದ್ರವಾಗಿಸಿದೆ ಎನ್ನುತ್ತಾರೆ ವರ್ತಕರು.

ಕಳೆದ 5 ತಿಂಗಳಲ್ಲಿ ಅಂದಾಜು 130 ಕೋಟಿಗೂ ಹೆಚ್ಚಿನ ವಹಿವಾಟು ಕೈತಪ್ಪಿದೆ. ಲಾಕ್‌ಡೌನ್‌ನಿಂದ ಇಲ್ಲಿಯವರೆಗೆ ಒಂದು ಮಳಿಗೆ ವ್ಯಾಪಾರಿಗಳಿಗೆ ತಿಂಗಳಿಗೆ ಅಂದಾಜು 20ರಿಂದ 30 ಲಕ್ಷಕ್ಕೂ ಹೆಚ್ಚಿನ ವಹಿವಾಟು ನಷ್ಟವಾಗಿದೆ. ಒಬ್ಬ ಹೂವಿನ ವ್ಯಾಪಾರಿಗೆ ಶೇ.5, 10, 15 ರಷ್ಟು ಮಾತ್ರ ಕಮಿಷನ್‌ ಸಿಗುತ್ತದೆ. ಮಾರ್ಚ್‌ನಿಂದ ಆಗಸ್ಟ್‌ವರೆಗೆ ಈ ಐದು ತಿಂಗಳಲ್ಲೇ ವ್ಯಾಪಾರ ಹೆಚ್ಚು. ಹಬ್ಬಗಳ ಸಂದರ್ಭದಲ್ಲಿ ವಾರಕ್ಕೆ 5 ರಿಂದ 20 ಲಕ್ಷಕ್ಕೂ ಹೆಚ್ಚು ವ್ಯಾಪಾರ-ವಹಿವಾಟು ನಡೆಯುತ್ತದೆ. ಆದರೆ ಈ ವರ್ಷ ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಈಗ ಶೇ.10 ರಷ್ಟು ವ್ಯಾಪಾರವಿಲ್ಲ ಎನ್ನುತ್ತಾರೆ ಕೆ.ಆರ್‌. ಮಾರುಕಟ್ಟೆಯ ಹೂವಿನ ವರ್ತಕರ ಸಂಘದ ಕಾರ್ಯದರ್ಶಿ ಮಂಜುನಾಥ್‌.

ಇಂದಿನಿಂದ ಕೆಆರ್ ಮಾರ್ಕೆಟ್, ಕಲಾಸಿಪಾಳ್ಯ ರೀ ಓಪನ್

3500 ಕೋಟಿ ವಹಿವಾಟು ನಷ್ಟ:

ಜಯಚಾಮರಾಜೇಂದ್ರ ಸಗಟು ಹಣ್ಣು-ತರಕಾರಿ ವ್ಯಾಪಾರಿಗಳ ಸಂಘದ ಶ್ರೀಧರ್‌ ಅವರು, ಕೆ.ಆರ್‌.ಮಾರುಕಟ್ಟೆಯಲ್ಲಿ ಈ ಮೊದಲು ನಿತ್ಯ 25 ಕೋಟಿ ವಹಿವಾಟು ನಡೆಯುತ್ತಿತ್ತು. ಆದರೆ, ಇದೀಗ 10 ಕೋಟಿಗೆ ಇಳಿಕೆಯಾಗಿದೆ. ಲಾಕ್‌ಡೌನ್‌ನಿಂದ 3500 ಕೋಟಿಗೂ ಹೆಚ್ಚಿನ ವಹಿವಾಟು ನಷ್ಟವಾಗಿದೆ. ಕೊರೋನಾ ಕಡಿಮೆಯಾಗಿ ತಮಿಳುನಾಡಿನ ವರ್ತಕರು, ಗ್ರಾಹಕರು ಬರುವಂತಾದರೆ ಮಾತ್ರ ಹಿಂದಿನಂತೆ ವಹಿವಾಟು ನಡೆಯಲು ಸಾಧ್ಯ ಎಂದು ಹೇಳಿದರು.
ಕೊರೋನಾ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಜನವರಿ, ಫೆಬ್ರವರಿಯಲ್ಲಿ ಸೀಬೆಹಣ್ಣು ಕೆ.ಜಿ. 55 ಇತ್ತು. ಈಗ ಕೆ.ಜಿ.5ರಿಂದ 15ಕ್ಕೆ ಇಳಿಕೆಯಾಗಿದೆ. ಇತರೆ ಯಾವುದೇ ಹಣ್ಣುಗಳನ್ನು ತೆಗೆದುಕೊಂಡರೂ ಲಾಭವಿಲ್ಲ. ಕಳೆದ 15 ದಿನಗಳಲ್ಲಿ ಸರಿಯಾಗಿ ವ್ಯಾಪಾರವಾಗಿಲ್ಲ. ಮನೆಯಲ್ಲಿರುವುದೂ ಒಂದೇ, ಅಂಗಡಿಯಲ್ಲಿ ಇರುವುದೂ ಒಂದೇ ಎಂಬಂತಾಗಿದೆ ಎಂದು ಸಗಟು ಹಣ್ಣಿನ ವ್ಯಾಪಾರಿ ಗೋಪಾಲಕೃಷ್ಣ ಬೇಸರ ವ್ಯಕ್ತಪಡಿಸಿದರು.

ಗ್ರಂಧಿಗೆ ಅಂಗಡಿ (ಪೂಜಾ ಸಾಮಾಗ್ರಿ) ವರ್ತಕರಾದ ನವೀನ್‌ ಮಾತನಾಡಿ, ಕೆ.ಆರ್‌.ಮಾರುಕಟ್ಟೆಯಲ್ಲಿ 200 ಗ್ರಂಧಿಗೆ ಅಂಗಡಿಗಳಿವೆ. ವರ್ಷಕ್ಕೆ 70-80 ಲಕ್ಷದವರೆಗೆ ವಹಿವಾಟು ಮಾಡುತ್ತೇವೆ. ನನಗೆ ವರ್ಷಕ್ಕೆ 8ರಿಂದ 9 ಲಕ್ಷ (ನಿವ್ವಳ) ಲಾಭವಾಗುತ್ತಿತ್ತು. ಆದರೆ, ಈ ವರ್ಷ ಶೇ.60 ರಷ್ಟು ನಷ್ಟವಾಗಿದೆ. ಲಾಕ್‌ಡೌನ್‌ನಿಂದ ತಿಂಗಳಿಗೆ ಅಂದಾಜು .60ರಿಂದ 75 ಸಾವಿರಕ್ಕೂ ಹೆಚ್ಚು ನಷ್ಟಕ್ಕೆ ಗುರಿಯಾಗಿದ್ದೇವೆ. ಸಣ್ಣಪುಟ್ಟವ್ಯಾಪಾರಿಗಳೆಲ್ಲ ಕುಸಿದು ಹೋಗಿದ್ದಾರೆ ಎಂದರು.
ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ ವ್ಯಾಪಾರ-ವಹಿವಾಟು ಚೇತರಿಕೆ ಕಂಡಿದೆ. ಫುಟ್‌ಪಾತ್‌ ಮೇಲಿನ ವ್ಯಾಪಾರಿಗಳಿಂದ ಕೇಂದ್ರ ಮಾರುಕಟ್ಟೆಗಳಲ್ಲಿ ವ್ಯಾಪಾರವಾಗುತ್ತಿಲ್ಲ. ದಸರಾಗೆ ವ್ಯಾಪಾರ ಇನ್ನಷ್ಟು ಕಳೆಗಟ್ಟಬಹುದು ಎಂದು ಕಲಾಸಿಪಾಳ್ಯ ತರಕಾರಿ-ಹಣ್ಣು ಸಗಟು ವರ್ತಕರ ಸಂಘದ ಅಧ್ಯಕ್ಷ ಆರ್‌.ವಿ.ಗೋಪಿ ಅವರು ಹೇಳಿದ್ದಾರೆ. 

ಕೆ.ಆರ್‌.ಮಾರುಕಟ್ಟೆಯ ವ್ಯಾಪಾರಿಗಳು ತೊಂದರೆಗೆ ಸಿಲುಕಿದ್ದಾರೆ. ಕೈಯಲ್ಲಿ ಕಾಸಿಲ್ಲ, ಇತ್ತ ವ್ಯಾಪಾರವೂ ಕೈಗೂಡುತ್ತಿಲ್ಲ. ಈಗ ಎಲ್ಲರಿಗೂ ಆರ್ಥಿಕವಾಗಿ ಕಷ್ಟವಿರುವುದರಿಂದ ಸಾಲವನ್ನೂ ನೀಡುವವರಿಲ್ಲ. ಕೋಟ್ಯಂತರ ರುಪಾಯಿ ವಹಿವಾಟು ಕೈತಪ್ಪಿದೆ ಎಂದು ಕೆ.ಆರ್‌.ಮಾರುಕಟ್ಟೆ ವರ್ತಕರ ಒಕ್ಕೂಟದ ಅಧ್ಯಕ್ಷ ಜಿ.ಎಂ.ದಿವಾಕರ್‌ ಅವರು ತಿಳಿಸಿದ್ದಾರೆ.