ಈ ಬಾರಿಯ ಸಮ್ಮೇಳನಕ್ಕೆ ಐತಿಹಾಸಿಕ ಮಹತ್ವವಿದೆ: ಡಾ ಮಹೇಶ್ ಜೋಶಿ
ಗೋಷ್ಠಿಗಳಲ್ಲಿ ಪಾಲ್ಗೊಳ್ಳುವವರೆಲ್ಲರೂ ವಿದ್ವಾಂಸರೇ ಇದ್ದಾರೆ. ಒಟ್ಟು 239 ಚಿಂತಕರು ಭಾಗವಹಿಸುತ್ತಿದ್ದಾರೆ. 31 ಗೋಷ್ಠಿ ಇದೆ. ಪ್ರಧಾನ ವೇದಿಕೆ, ಸಮಾನಾಂತರ ವೇದಿಕೆಗಳಿವೆ. 156 ವಿದ್ವಾಂಸರು, 83 ಮಂದಿ ಕವಿಗಳು ಇರುತ್ತಾರೆ. ಮೊದಲ ಬಾರಿಗೆ ಕನ್ನಡದ ಜೊತೆಗೆ ಉಪ ಭಾಷೆಗಳಾದ ಹವ್ಯಕ, ತುಳು, ಕೊಡವ, ಕೊಂಕಣಿ, ಕುಂದ ಕನ್ನಡ, ಬ್ಯಾರಿ, ಲಂಬಾಣಿ ಭಾಷೆಗಳ ಕವಿತಾ ವಾಚನ ಇರುತ್ತದೆ: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಶಿ
ಪ್ರಿಯಾ ಕೆರ್ವಾಶೆ
ಮಂಡ್ಯ(ಡಿ.20): ಈ ಬಾರಿ ಸಮ್ಮೇಳನ ಕಳೆದ ಬಾರಿಗಿಂತಲೂ ವ್ಯವಸ್ಥಿತವಾಗಿರುತ್ತದೆ ಎನ್ನುವ ಮೂಲಕ ಮಂಡ್ಯದಲ್ಲಿ ಡಿ. 20ರಿಂದ 23 ರವರೆಗೆ ನಡೆಯುವ ಅಖಿಲ ಭಾರತ 87 ನೇ ಸಾಹಿತ್ಯ ಸಮ್ಮೇಳನ ಒಳ ಹೊರಗುಗಳ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಶಿ ಮಾತನಾಡಿದ್ದಾರೆ.
- ಈ ಬಾರಿಯ ಸಮ್ಮೇಳನ ಚಾರಿತ್ರಿಕ ಎಂಬ ಮಾತನ್ನು ಹೇಳಿದ್ದಿರಿ, ಯಾಕೆ?
ನಮ್ಮ ರಾಜ್ಯಕ್ಕೆ ಕರ್ನಾಟಕ ಅಂತ ನಾಮಕರಣ ಆಗಿದ್ದು 1973ರಲ್ಲಿ. ಮೈಸೂರು ರಾಜ್ಯ ‘ಕರ್ನಾಟಕ’ ಅಂತ ಹೆಸರಾದ ಮೇಲೆ ಮೊದಲ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದದ್ದು 1974ರಲ್ಲಿ, ಇದೇ ಮಂಡ್ಯದಲ್ಲಿ. ಮೊದಲ ಬಾರಿಗೆ ಲೇಖಕಿಯೊಬ್ಬರು ಈ ಸಮ್ಮೇಳನದ ಸರ್ವಾಧ್ಯಕ್ಷರಾದರು. ಖ್ಯಾತ ಸಾಹಿತಿ ಜಯದೇವಿ ತಾಯಿ ಲೆಗಾಡೆ ಈ ಗೌರವಕ್ಕೆ ಭಾಜನರಾದರು. ಅದಾಗಿ 50 ವರ್ಷಗಳಾಗಿವೆ. ಈ 50 ವರ್ಷದ ಹಿನ್ನೆಲೆಯಲ್ಲಿ ಮತ್ತೆ ಮಂಡ್ಯದಲ್ಲೇ ಸಮ್ಮೇಳನ ನಡೆಯುತ್ತಿರುವುದು ವಿಶೇಷ. ಹಾಗಾಗಿ ಇದೊಂದು ಐತಿಹಾಸಿಕ ಹಾಗೂ ವೈಶಿಷ್ಠ್ಯಪೂರ್ಣ ಸಮ್ಮೇಳನ.
ನಾವು ಬಂದೇವ, ಸಮ್ಮೇಳನ ನೋಡಲಿಕ್ಕ: ನಾಡಿನ ಬರಹಗಾರರ ಸಂತಸದ ನುಡಿಗಳು!
- 50 ವರ್ಷದ ನೆನಪಿಗೆ ಸಮ್ಮೇಳನದಲ್ಲಿ ವಿಶೇಷ ಕಾರ್ಯಕ್ರಮಗಳು ಇರುತ್ತವಾ?
ಖಂಡಿತಾ. ವಿಶೇಷ ಕಾರ್ಯಕ್ರಮಗಳಿರುತ್ತವೆ. ಇದೀಗ ಮೂರನೇ ಬಾರಿಗೆ ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಮೊದಲನೇ ಸಮ್ಮೇಳನ 1974ರಲ್ಲಾಯ್ತು. ಆ ಬಳಿಕ 1994ರಲ್ಲಿ ನಡೆಯಿತು. ಇದೀಗ ಮೂರನೇ ಬಾರಿ 2024ರಲ್ಲಿ ನಡೆಯುತ್ತಿದೆ. ಎಲ್ಲೋ ಒಂದು ಕಡೆ ನಾಲ್ಕರ ನಂಟಿದೆ ಎಂದು ತೋರುತ್ತದೆ. ಎರಡನೇ ಸಮ್ಮೇಳನ ಮಾಡಿದಾಗ ಈಗಿನ ಸಮ್ಮೇಳನದ ಸರ್ವಾಧ್ಯಕ್ಷರಾದ ಗೊ ರು ಚನ್ನಬಸಪ್ಪ ಅವರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದರು. ಈ ಎಲ್ಲ ಅಂಶಗಳ ಮೆಲುಕು, ನೆನಪು ಕಾರ್ಯಕ್ರಮದಲ್ಲಿ ಇದ್ದೇ ಇರುತ್ತದೆ.
ಈ ಬಾರಿ ಒಟ್ಟು 31 ಗೋಷ್ಠಿಗಳಿವೆ. ಇದರಲ್ಲಿ ಮಾತಾಡುವವರು ಸಹಜವಾಗಿ ಈ ವಿಶೇಷತೆಗಳ ಉಲ್ಲೇಖ ಮಾಡುತ್ತಾರೆ. ಇತರ ಗೋಷ್ಠಿಗಳಲ್ಲೂ ವಿಶೇಷತೆ ಇದೆ. ಮೊದಲ ಬಾರಿಗೆ ಕಣ್ಣು ಕಾಣದ ದೃಷ್ಟಿ ಚೇತನರಿಂದ ಮೊದಲನೇ ಕವಿಗೋಷ್ಠಿ ನಡೆಯುತ್ತದೆ. ಮಹಿಳೆಯರಿಗೆ ವಿಶೇಷ ಗೋಷ್ಠಿಯಿದೆ. ಮೊದಲನೇ ಬಾರಿಗೆ ‘ರಾಜಕೀಯದಲ್ಲಿ ಸಾಹಿತ್ಯ-ಸಾಹಿತ್ಯದಲ್ಲಿ ರಾಜಕೀಯ’ ಎಂಬ ಥೀಮ್‌ನಡಿ ಚಿಂತನಾಗೋಷ್ಠಿ ನಡೆಯಲಿದೆ.
- ಈ ಬಾರಿ ದೃಷ್ಟಿ ಚೇತನರ ಕವಿಗೋಷ್ಠಿ ಇಡಲು ಕಾರಣ?
ಈ ವ್ಯಕ್ತಿಗಳಿಗೆ ನಿಜಕ್ಕೂ ಇಂಥಾದ್ದೊಂದು ಗೌರವ ಸಲ್ಲಬೇಕು ಅನಿಸಿತು. ಏಕೆಂದರೆ ಕವಿತೆಯಂಥಾ ಸೃಜನಶೀಲ ರಚನೆಯ ಹಿಂದಿನ ಅವರ ಶ್ರಮ ನಮ್ಮ ಊಹೆಗೂ ನಿಲುಕದ್ದು. ನೀವೇ ಯೋಚಿಸಿ, ಬೇರೆ ಯಾವುದೇ ಅಂಗಗಳ ವೈಕಲ್ಯ ಇರುವವರು ಓದಬಹುದು, ನೋಡಬಹುದು. ಆದರೆ ಇವರಿಗೆ ನೋಡುವುದೇ ಸಾಧ್ಯವಿಲ್ಲ. ಇವರು ಕವಿತೆಗಳ ವಾಚನ ಮಾಡಲು ಸಾಧ್ಯವಾಗುವುದು ಎರಡೇ ರೀತಿಯಿಂದ. ಮೊದಲನೆಯದು ಜ್ಞಾಪಕ ಶಕ್ತಿಯಿಂದ, ಇಲ್ಲವಾದರೆ ಬ್ರೈಲ್ ಲಿಪಿಯ ಸಹಾಯದಿಂದ. ತಮ್ಮ ಮುಂದಿರುವ ಬಹುದೊಡ್ಡ ಸವಾಲಿಗೆ ಮುಖಾಮುಖಿಯಾಗಿ ಕವಿತೆಯಂಥಾ ರಚನೆಗಳಲ್ಲಿ ತೊಡಗುವುದು ಸಣ್ಣ ಸಾಧನೆ ಅಲ್ಲ. ಸಮಸ್ಯೆಗಳನ್ನೇ ಮೆಟ್ಟಿ ಪ್ರತಿಭೆ ಮೆರೆಯುವ ಇವರು ನಿಜಕ್ಕೂ ವಿಶೇಷರು.
- ಇವರ ಗುರುತಿಸುವಿಕೆ ಪ್ರೊಸೆಸ್ ಹೇಗಿತ್ತು?
ನಿಮಗೆಲ್ಲ ತಿಳಿದಿರುವಂತೆ ನಾನು ದೂರದರ್ಶನದ ಮಹಾ ನಿರ್ದೇಶಕನಾಗಿದ್ದವನು. ಅಲ್ಲಿದ್ದಾಗ ಮೊದಲನೇ ಬಾರಿ ಒಂದು ವಿಶ್ವಮಟ್ಟದಲ್ಲಿ ದಾಖಲೆ ಬರೆಯುವಂಥಾ ಕಾರ್ಯಕ್ರಮ ಮಾಡಿಸಿದ್ದೆ. ಯು ಇ ಬ್ರೈಲ್ ಅವರ ಹುಟ್ಟುಹಬ್ಬದ ದಿನ ಬ್ರೈಲ್‌ನಲ್ಲಿ ಟ್ರೈನಿಂಗ್ ಕೊಟ್ಟು, ದೃಷ್ಟಿ ಚೇತನರನ್ನು ವಾರ್ತಾ ವಾಚಕರಾಗಿ ಮಾಡಿ ಅವರಿಂದ ವಾರ್ತೆ ಓದಿಸಿದ್ದೆ. ಈ ಕಾರ್ಯಕ್ಕೆ ಇಡೀ ಜಗತ್ತಿನಿಂದ ಮೆಚ್ಚುಗೆ ಬಂತು. ಇಂಥಾ ಕೆಲಸವನ್ನು ದೂರದರ್ಶನದಲ್ಲಿ ಮಾಡಲು ಅನೇಕ ಟೆಕ್ನಿಕಲ್ ಸವಾಲುಗಳು ಎದುರಾಗುತ್ತವೆ. ಆದರೂ ಈ ಪ್ರಯತ್ನ ಯಶಸ್ವಿಯಾಯಿತು. ಅಲ್ಲಿ ಯಶಸ್ವಿ ಆದಾಗ ಇಲ್ಲೂ ಯಾಕೆ ಮಾಡಬಾರದು ಅನಿಸಿತು. ಹೀಗಾಗಿ ಇಂಥದ್ದೊಂದು ಪ್ರಯತ್ನಕ್ಕೆ ಮುಂದಾದೆ.
- ಈ ಬಾರಿಯ ಸಮ್ಮೇಳನದಲ್ಲಿ ಸಾಹಿತಿಗಳ ಪಾಲ್ಗೊಳ್ಳುವಿಕೆ ಹೇಗಿದೆ?
ಬಹಳ ಚೆನ್ನಾಗಿದೆ. ಗೋಷ್ಠಿಗಳಲ್ಲಿ ಪಾಲ್ಗೊಳ್ಳುವವರೆಲ್ಲರೂ ವಿದ್ವಾಂಸರೇ ಇದ್ದಾರೆ. ಒಟ್ಟು 239 ಚಿಂತಕರು ಭಾಗವಹಿಸುತ್ತಿದ್ದಾರೆ. 31 ಗೋಷ್ಠಿ ಇದೆ. ಪ್ರಧಾನ ವೇದಿಕೆ, ಸಮಾನಾಂತರ ವೇದಿಕೆಗಳಿವೆ. 156 ವಿದ್ವಾಂಸರು, 83 ಮಂದಿ ಕವಿಗಳು ಇರುತ್ತಾರೆ. ಮೊದಲ ಬಾರಿಗೆ ಕನ್ನಡದ ಜೊತೆಗೆ ಉಪ ಭಾಷೆಗಳಾದ ಹವ್ಯಕ, ತುಳು, ಕೊಡವ, ಕೊಂಕಣಿ, ಕುಂದ ಕನ್ನಡ, ಬ್ಯಾರಿ, ಲಂಬಾಣಿ ಭಾಷೆಗಳ ಕವಿತಾ ವಾಚನ ಇರುತ್ತದೆ.
- ಅನಿವಾಸಿ ಕನ್ನಡಿಗರನ್ನು ಕರೆಸುತ್ತಿದ್ದೀರಿ. ಈ ಬಾರಿ 200 ಜನ ಭಾಗವಹಿಸುತ್ತಿರುವುದರ ಹಿನ್ನೆಲೆ?
ಸಾಹಿತ್ಯ ಪರಿಷತ್ತು ಅಧ್ಯಕ್ಷನಾಗುವ ಮೊದಲು ಅನಿವಾಸಿ ಕನ್ನಡಿಗರು ಸಾಹಿತ್ಯ ಪರಿಷತ್ತಿನ ಸದಸ್ಯರಾಗಲು ಅಂಥಾ ಆಸಕ್ತಿ ತೋರಿಸುತ್ತಿರಲಿಲ್ಲ. ವಿದೇಶದಲ್ಲಿರುವ ಕೆಲವು ಕನ್ನಡಿಗರಿಗೆ ಸಾಹಿತ್ಯ ಪರಿಷತ್ತಿನ ಬಗ್ಗೆ ಗೊತ್ತಿರಲಿಲ್ಲ. ಇಂಥಾ ಸಮಯದಲ್ಲಿ ಅನೇಕರು ನಮ್ಮನ್ನೂ ಪರಿಗಣಿಸಬೇಕು ಎಂದಾಗ ನಾನು ಕೆಲವು ಸಾಹಿತ್ಯ ಪರಿಷತ್‌ಗೆ ಸಂಬಂಧಿಸಿದ ಕೆಲವು ನಿಬಂಧನೆಗಳಿಗೆ ತಿದ್ದುಪಡಿ ತಂದಿದ್ದೆ. ವಿದೇಶದಲ್ಲಿರುವ ಕನ್ನಡಿಗರೂ ಸಾಹಿತ್ಯ ಪರಿಷತ್ತಿನ ಸದಸ್ಯರಾಗಬಹುದು ಎಂದು ತಿದ್ದುಪಡಿ ಮಾಡಿದ್ದೆ. ಜೊತೆಗೆ ಅಲ್ಲಿನ ಕನ್ನಡ ಸಂಘ ಸಂಸ್ಥೆಗಳು, ನಮ್ಮ ಕನ್ನಡ ಸಾಹಿತ್ಯ ಪರಿಷತ್ತಿನ ಅಂಗ ಸಂಸ್ಥೆಗಳಾಗಬಹುದು ಎಂಬುದನ್ನೂ ಸೇರಿಸಿದೆ. ಇದಕ್ಕೆ ಬಂದಿರುವ ಪ್ರತಿಕ್ರಿಯೆ ದೊಡ್ಡದು. ಇದರ ಜೊತೆ ಅನೇಕ ಕಡೆ ಹೋಗಿ ಇಂಥಾ ಸಂಸ್ಥೆಗಳ ಮುಖ್ಯಸ್ಥರನ್ನು ಭೇಟಿಯಾಗಿ ಕಸಾಪ ಹಾಗೂ ವಿದೇಶದಲ್ಲಿರುವ ಕನ್ನಡ ಸಂಘ ಸಂಸ್ಥೆಗಳ ನಡುವೆ ಸೌಹಾರ್ದ ವಾತಾವರಣ ಸೃಷ್ಟಿಸಲು ಪ್ರಯತ್ನಿಸಿದ್ದೆ.
ಇದಕ್ಕೆ ಪೂರಕವಾಗಿ ಕಳೆದ ಬಾರಿ ಹಾವೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಆಗಿನ ಮುಖ್ಯಮಂತ್ರಿ ಬೊಮ್ಮಾಯಿ ಅವರು, ‘ಲಂಡನ್‌ನಂಥಾ ಊರಲ್ಲಿ ಒಬ್ಬ ಕನ್ನಡಿಗ ಥೇಮ್ಸ್ ನದಿ ಮೇಲೆ ಬಸವಣ್ಣನ ಮೂರ್ತಿಯನ್ನು ಮಾಡಿ ಬಸವಣ್ಣನನ್ನು ಜಗತ್ತಿಗೆ ತೋರಿಸಿದ್ದಾರೆ. ಅಂಥವರು ನಾವು ಆಹ್ವಾನಿಸಬೇಕು’ ಎಂದಿದ್ದರು. ಆ ವ್ಯಕ್ತಿ ನನಗೆ ಒಳ್ಳೆಯ ಸ್ನೇಹಿತರೂ ಹೌದು. ಜೊತೆಗೆ ಮುಖ್ಯಮಂತ್ರಿಗಳು, ‘ಇಂಥವರನ್ನು ಕರೆಯಲು ಕಸಾಪ ಪರವಾಗಿ ವಿದೇಶ ಪ್ರವಾಸ ಮಾಡಿ. ಅನುದಾನದ ಖರ್ಚಿನಲ್ಲಿ ಹೋಗಿ ಆಹ್ವಾನ ಮಾಡಿ’ ಎಂದಿದ್ದರು. ಹೀಗೆ ನಾನು ಹೋಗಿದ್ದೆ. ಎಲ್ಲರಿಗೂ ಆಹ್ವಾನ ಕೊಟ್ಟು ಕನ್ನಡ ಸಂಘ ಸಂಸ್ಥೆಗಳನ್ನು ಭೇಟಿ ಮಾಡಿ ಬಂದಿದ್ದೆ.
ಇದರ ಜೊತೆಗೆ ಅನೇಕ ವಿದೇಶಿಗರು ಕನ್ನಡವನ್ನು ಅತ್ಯಂತ ಶ್ರೀಮಂತ ಮಾಡಿದ್ದಾರೆ. ಉದಾಹರಣೆಗೆ ಕಿಟ್ಟೆಲ್. ಆತನ ಮಾತೃಭಾಷೆ ಜರ್ಮನ್. ಆತ ಇಂಗ್ಲೀಷ್ ಮುಖಾಂತರ ಕನ್ನಡ ಕಲಿಯಬೇಕಾಗಿತ್ತು. ಏಕೆಂದರೆ ಜರ್ಮನ್‌ನಲ್ಲಿ ಆ ಹೊತ್ತಿಗೆ ಕನ್ನಡ ಕಲಿತವರು ಇರಲೇ ಇಲ್ಲ ಎನ್ನಬಹುದು. ಆತ ಇಂಗ್ಲೀಷ್ ಮೂಲಕ ಕನ್ನಡದಲ್ಲಿ ಪಾಂಡಿತ್ಯ ಹೊಂದಿ ಕೊನೆಗೆ ಕನ್ನಡ ನಿಘಂಟನ್ನೇ ಬರೆದ ಮಹಾನುಭಾವ. ಅವರ ಕುಟುಂಬದವರನ್ನು ಪತ್ತೆ ಮಾಡಿ ಆಹ್ವಾನಿಸಿದ್ದೆ. ಅವರು ಬರುವುದಾಗಿ ತಿಳಿಸಿದ್ದಾರೆ. ಇವೆಲ್ಲ ಹೊಸತನ ತಂದಿದ್ದೇವೆ.
ಈಗಾಗಲೇ ಅಮೆರಿಕಾದ ಅಕ್ಕ ಸಮ್ಮೇಳನದ ಜೊತೆಗೆ ಅನೇಕ ಕನ್ನಡದ ಸಂಘ ಸಂಸ್ಥೆಗಳು ಗುರುತಿಸಿಕೊಂಡಿವೆ. ಕೆಲವು 50 ವರ್ಷ ಪೂರೈಸಿವೆ. ಅವುಗಳನ್ನು ಸನ್ಮಾನ ಮಾಡಬೇಕು ಅಂದುಕೊಂಡೆವು. ಬಹಳ ವರ್ಷಗಳ ಹಿಂದೆಯೇ ಉದ್ಯೋಗ ನಿಮಿತ್ತ ವಿದೇಶಕ್ಕೆ ಹೋದವರು ಅಲ್ಲಿ ಕನ್ನಡ ಪ್ರೇಮ ಮೆರೆದಿದ್ದಾರೆ. ಕೆಲವು ಮಂದಿಯಂತೂ ಕನ್ನಡದ ಕೆಲಸಕ್ಕಾಗಿ ಓಟಿ ಮಾಡಿ, ಆ ಹಣದಲ್ಲಿ ಕನ್ನಡಿಗರನ್ನು ಭೇಟಿ ಮಾಡಿ ಕನ್ನಡ ಕಟ್ಟುವ ಕೆಲಸ ಮಾಡಿದ್ದಾರೆ. ಅಂಥವರನ್ನು ಗುರುತಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮಲ್ಲಿ ನಾವು ಕನ್ನಡ ಮಾತನಾಡುತ್ತಿರುತ್ತೇವೆ. ಇಲ್ಲಿ ಕನ್ನಡ ಕಟ್ಟೋದರಲ್ಲಿ ವಿಶೇಷತೆ ಇಲ್ಲ. ಬೇರೆ ದೇಶಗಳಿಗೆ ಹೋಗಿ ಕನ್ನಡ ಎಂಬ ಭಾಷೆ ಇದೆ ಎಂಬುದನ್ನೇ ಅರಿಯದವರ ಮಧ್ಯೆ ವಿರಳವಾಗಿರುವ ಕನ್ನಡಿಗರನ್ನು ಗುರುತಿಸಿ, ಸಂಘಟಿಸುವುದು ಸಣ್ಣ ಸಾಧನೆ ಏನಲ್ಲ.
- ಈ ಸಲದ ಯಾವೆಲ್ಲ ನಿರ್ಣಯ ಕೈಗೊಳ್ಳುತ್ತಿದ್ದೀರಿ?
ನಾನು ಕನ್ನಡ ಸಾಹಿತ್ಯ ಪರಿಷತ್ತಿಗೆ ಅಧ್ಯಕ್ಷನಾಗಿ ಬಂದಮೇಲೆ ನಿರ್ಣಯಗಳು ಕಡಿಮೆ ಸಂಖ್ಯೆಯಲ್ಲಿರುತ್ತದೆ. ಆದರೆ ಅನುಷ್ಠಾನಗೊಳ್ಳುವಂಥಾ ನಿರ್ಣಯಗಳನ್ನೇ ಕೈಗೊಳ್ಳುತ್ತೇವೆ. ಅಂದರೆ ಅನುಷ್ಠಾನಗೊಳ್ಳುವ ಸಾಮರ್ಥ್ಯ ಇರುವ ನಿರ್ಣಯಗಳನ್ನೇ ತೆಗೆದುಕೊಳ್ಳುತ್ತೇವೆ.
ಹೋದ ಸಲ ಮಾಡಿರುವ ನಿರ್ಣಯಗಳಲ್ಲಿ ಮೂರು ನಿರ್ಣಯಗಳು ಅನುಷ್ಠಾನಗೊಂಡಿರುವುದೇ ಇವುಗಳ ಗಟ್ಟಿತನಕ್ಕೆ ಸಾಕ್ಷಿ. ಈ ಸಲವೂ ಎರಡೋ ಮೂರೋ ನಿರ್ಣಯಗಳನ್ನಷ್ಟೇ ಮಾಡಿ ಅದನ್ನು ಅನುಷ್ಠಾನಗೊಳಿಸುವ ಕೈಂಕರ್ಯಕ್ಕೆ ಬದ್ಧರಾಗಿರುತ್ತೇವೆ. ಅವುಗಳನ್ನು ಸರ್ಕಾರದ ಮುಂದಿಟ್ಟು ಅನುಷ್ಠಾನಕ್ಕೆ ಸಂಬಂಧಿಸಿ ನಾನೇ ಮುಂದಾಳತ್ವ ವಹಿಸುತ್ತೇನೆ.
- ಈ ಬಾರಿಯ ನಿರ್ಣಯಗಳೇನು ಅಂತ ಹೇಳಬಹುದಾ? ಈಗ ಹೇಳೋದು ಕಷ್ಟ.
- ಸಮ್ಮೇಳಾಧ್ಯಕ್ಷರ ಭಾಷಣದಲ್ಲಿರುವ ಅಂಶಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು?
ಖಂಡಿತಾ ಮಾಡುತ್ತೇವೆ. ಸರ್ವಾಧ್ಯಕ್ಷತೆ ಅತ್ಯಂತ ಗೌರವಯುತವಾದ ಸ್ಥಾನ. ಈ ಬಾರಿಯ ಅಧ್ಯಕ್ಷರಾದ ಗೊರುಚ ಅವರು ಪಾಂಡಿತ್ಯ ಹೊಂದಿರುವವರು. ಆಳ, ಅಗಲ ನೋಡಿರುವಂಥವರು. ಅವರು ಕೊಡುವ ಸಲಹೆಗಳನ್ನು ನಾವು ಖಂಡಿತವಾಗಿಯೂ ಪರಿಗಣಿಸುತ್ತೇವೆ.
- ಕಳೆದ ಬಾರಿ ಸಮ್ಮೇಳನದಲ್ಲಿ ಪುಸ್ತಕ ವ್ಯಾಪಾರಿಗಳಿಗೆ ನೆಟ್‌ವರ್ಕ್ ಸಮಸ್ಯೆಯಿಂದ ಆನ್‌ಲೈನ್ ಹಣ ಪಾವತಿ ಸಾಧ್ಯವಾಗದೇ ಸಮಸ್ಯೆ ಆಯ್ತು..
ಹೋದ ಸಲ ಏನೇನೆಲ್ಲ ಅನಾನುಕೂಲಗಳಾದವು, ಇದರಿಂದ ಜನರಿಗೆ ಸಮಸ್ಯೆ ಆಯಿತೋ; ಅವು ಯಾವುವೂ ಮರುಕಳಿಸದೇ ಇರುವಂತೆ ಎಲ್ಲ ಜಾಗರೂಕತೆಗಳನ್ನು ಕೈಗೊಳ್ಳಲಾಗಿದೆ. ನೀವು ಈಗ ಹೇಳಿರುವ ಸಮಸ್ಯೆಗಳು ನಮ್ಮ ಗಮನಕ್ಕೆ ಬಂದಿವೆ. ಆದರೆ ಈ ಬಾರಿ ಇಂಥಾ ಸಮಸ್ಯೆಗಳಿಲ್ಲದ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು.
ಅನ್ನ ಬೇಕು ಅಂದ್ರೆ ಕನ್ನಡ ಕಲೀಬೇಕು ಎಂಬ ವಾತಾವರಣ ಉಂಟಾಗಬೇಕು: ಗೊ.ರು. ಚನ್ನಬಸಪ್ಪ
- ಏನು ಕ್ರಮ ಕೈಗೊಳ್ಳುತ್ತಿದ್ದೀರಿ?
ಈಗಾಗಲೇ ಹೆಚ್ಚು ಟವರ್‌ಗಳನ್ನು ಹಾಕಲಾಗಿದೆ. ಬೂಸ್ಟರ್ಸ್‌ಗಳನ್ನು ಅಳವಡಿಸಲಾಗಿದೆ. ಈ ಬಗ್ಗೆ ಜಿಲ್ಲಾ ಸಮಿತಿಯವರಿಗೆ ಬಹಳ ಸ್ಪಷ್ಟವಾದ ಸೂಚನೆಯನ್ನು ನೀಡಿದ್ದೇನೆ. ಯಾವುದೇ ತೊಂದರೆ ಆಗಬಾರದು ಎಂದಿದ್ದೇನೆ. ಇಂದಿನ ಕಾಲದಲ್ಲಿ ಯಾರೂ ಜೇಬಲ್ಲಿ ಹಣ ಇಟ್ಟುಕೊಂಡು ಬರೋದಿಲ್ಲ. ಎಲ್ಲರೂ ಆನ್‌ಲೈನ್ ಮೂಲಕವೇ ಹಣ ಸಂದಾಯ ಮಾಡುತ್ತಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಬಗ್ಗೆ ಮಂಡ್ಯದ ಸಮಿತಿ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ. ಹೀಗಾಗಿ ಈ ಸಲ ಈ ಸಮಸ್ಯೆ ಇರೋದಿಲ್ಲ.
- ಕಳೆದ ಸಲದ ಸಮ್ಮೇಳನ ವ್ಯವಸ್ಥೆಯ ದೃಷ್ಟಿಯಿಂದ ಯಶಸ್ವಿಯಾಗಿತ್ತು. ಈ ಬಾರಿ ಆ ಥರದ ವ್ಯವಸ್ಥೆಯ ನಿರೀಕ್ಷೆಯಲ್ಲಿ ಜನರಿದ್ದಾರೆ..
ಆ ಸಮ್ಮೇಳನವನ್ನು ಮೀರಿಸುವಂಥಾ ವ್ಯವಸ್ಥೆಯನ್ನು ಈ ಬಾರಿ ಮಾಡಲು ಮುಂದಾಗಿದ್ದೇವೆ. ಸದ್ಯ ಅದೇ ಪ್ರಯತ್ನದಲ್ಲಿದ್ದೇವೆ.