ಬೆಂಗಳೂರು [ನ.01]:  ಶಾಲಾ ಪಠ್ಯದಿಂದ ಟಿಪ್ಪು ಸುಲ್ತಾನ್‌ ಇತಿಹಾಸವನ್ನು ತೆಗೆದು ಹಾಕುವ ಕುರಿತಂತೆ ಆಡಳಿತ ಹಾಗೂ ವಿಪಕ್ಷಗಳ ನಾಯಕರ ನಡುವೆ ಭಾರೀ ‘ಯುದ್ಧ’ವೇ ನಡೆಯುತ್ತಿರುವ ಸಂದರ್ಭದಲ್ಲೇ, ಪಠ್ಯದ ಕುರಿತು ನಿರ್ಧಾರ ಕೈಗೊಳ್ಳಲು ಮಹತ್ವದ ಸಭೆ ಆಯೋಜನೆಯಾಗಿದೆ. ಟಿಪ್ಪು ಇತಿಹಾಸವನ್ನು ಪಠ್ಯದಿಂದ ತೆಗೆದುಹಾಕುವಂತೆ ಕೊಡಗು ಶಾಸಕ ಅಪ್ಪಚ್ಚು ರಂಜನ್‌ ಬರೆದಿರುವ ಪತ್ರದ ಬಗ್ಗೆ ನವೆಂಬರ್‌ 7ರಂದು ನಡೆಯಲಿರುವ ಪಠ್ಯ ಪುಸ್ತಕ ಸಮಿತಿ ಸಭೆಯಲ್ಲಿ ಚರ್ಚಿಸುವಂತೆ ಸೂಚಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

ಟಿಪ್ಪು ಬಗ್ಗೆ ಮಾತಾಡಿದ್ದ ಶರತ್ ‘ಕೈ’ ತಪ್ಪಿದ ಹೊಸಕೋಟೆ, ಮುಂದಿನ ಹಾದಿ..?...

ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಟಿಪ್ಪು ಇತಿಹಾಸವನ್ನು ಪಠ್ಯದಿಂದ ತೆಗೆದುಹಾಕುವ ಬಗ್ಗೆ ಸರ್ಕಾರ ನಿರ್ಧರಿಸಿಲ್ಲ. ಕೊಡಗು ಶಾಸಕರಾಗಿರುವ ಅಪ್ಪಚ್ಚು ರಂಜನ್‌ ಅವರು ಪತ್ರ ಬರೆದು ಕೊಡಗಿನ ಜನರಿಗೆ ಟಿಪ್ಪುವಿನಿಂದ ಅನ್ಯಾಯವಾಗಿದೆ, ಹಾಗಾಗಿ ಆತನನ್ನು ವೈಭವೀಕರಿಸುವ ಇತಿಹಾಸವನ್ನು ಪಠ್ಯದಿಂದ ತೆಗೆದು ಹಾಕಬೇಕೆಂದು ಕೋರಿದ್ದಾರೆ. ಹಿರಿಯ ಶಾಸಕರಾಗಿರುವ ಅಪ್ಪಚ್ಚು ರಂಜನ್‌ ಪತ್ರವನ್ನು ಪರಿಗಣಿಸಲೇಬೇಕಾಗುತ್ತದೆ ಎಂದರು.

ನ.7ರಂದು ಪಠ್ಯಪುಸ್ತಕ ಸಮಿತಿ ಸಭೆ ನಡೆಯಲಿದೆ. ಈ ಸಭೆಗೆ ಶಾಸಕರು ಬರೆದ ಪತ್ರವನ್ನು ಕಳಿಸಿ, ಪತ್ರದಲ್ಲಿ ಶಾಸಕರ ವಾದ, ಪಠ್ಯ ಕ್ರಮದಿಂದ ಬೀಡಬೇಕೆಂಬ ಅವರ ವಾದಕ್ಕೆ ಇರುವ ಆಧಾರಗಳ ಬಗ್ಗೆ ಅಧ್ಯಯನ ಮಾಡುವಂತೆ ತಿಳಿಸಲಾಗುವುದು. ಅಷ್ಟೇ ಅಲ್ಲ, ಸಭೆಗೆ ಶಾಸಕರನ್ನು ಆಹ್ವಾನಿಸಿ ಅವರ ಅಭಿಪ್ರಾಯ ಕೇಳುವಂತೆ ತಿಳಿಸಲಾಗಿದೆ. ನಂತರ ಸಮಿತಿಗೆ ಈ ಬಗ್ಗೆ ವರದಿ ನೀಡುವಂತೆ ತಿಳಿಸಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.