Asianet Suvarna News Asianet Suvarna News

ಅಸ್ಪೃಶ್ಯತೆ ವಿರುದ್ಧ ಅಂದು ಅಂಬೇಡ್ಕರ್‌ ಹೋರಾಡಿದ್ದರು, ಇಂದು ನಾವು!

ಕೊರೋನಾ ವೈರಸ್‌, ದುಡಿದು ಬಂದ ತಂದೆ ತನ್ನ ಪ್ರೀತಿಯ ಮಗುವನ್ನು ತಬ್ಬಿಕೊಂಡು ಮುದ್ದಾಡಲು ಸಾಧ್ಯವಾಗದಂತ, ದುಡಿಯಲು ಪೇಟೆ-ಪಟ್ಟಣಕ್ಕೆ ಹೋಗಿ ಬಂದವರಿಗೆ ಕ್ವಾರಂಟೈನ್‌ ಎಂಬ ದಿಗ್ಬಂಧನ ವಿಧಿಸುವಂತ ಅಸ್ಪೃಶ್ಯತೆ ಸೃಷ್ಟಿಸಿದೆ.

Medical Education Minister Dr K Sudhakar writes about Dr BR Ambedkar untouchability fight
Author
Bengaluru, First Published Apr 14, 2020, 9:44 AM IST

ಡಾ.ಬಿ.ಆರ್‌.ಅಂಬೇಡ್ಕರ್‌ ಸಾಹೇಬರಿಗೆ ಇದೇ ಏಪ್ರಿಲ್ 14, 2020 ಕ್ಕೆ 129 ವರ್ಷಗಳು ತುಂಬುತ್ತವೆ. ಅವರು ಸೃಷ್ಟಿಸಿದ ಇತಿಹಾಸದ ಹೆಜ್ಜೆ ಗುರುತುಗಳಲ್ಲಿ ನಾವೆಲ್ಲರೂ ಸಾಗುತ್ತಿದ್ದೇವೆ. ಅವರು ಮಾಡಿದ ಕಾರ್ಯವೆಲ್ಲವೂ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿ ಉಳಿದಿವೆ.

ಅಂಬೇಡ್ಕರ್‌ ಈ ಜಗತ್ತು ಕಂಡ ಪರಮೋಚ್ಛ ಮನುಷ್ಯತ್ವವಾದಿ. ವಿಭಿನ್ನ ಸಂಸ್ಕೃತಿ, ನೂರಾರು ಜಾತಿ, ಸಾವಿರಾರು ಭಾಷೆ, ನಾಲ್ಕಾರು ಧರ್ಮಗಳನ್ನೊಳಗೊಂಡ ಭವ್ಯ ಭಾರತಕ್ಕೆ ಸಮಗ್ರವಾದ ಸಕಲರೂ ಒಪ್ಪುವಂಥ ಸಂವಿಧಾನವನ್ನು ಅಂಬೇಡ್ಕರ್‌ ಕೊಡದೇ ಇದಿದ್ದರೆ ನಾವೆಲ್ಲರೂ ಪರೋಕ್ಷವಾಗಿ ಮತ್ತೆ ದಾಸ್ಯಕ್ಕೆ ಒಳಪಡುತ್ತಿದ್ದೆವೇನೋ?

ಅಸ್ಪೃಶ್ಯತೆ ಮೆಟ್ಟಿನಿಂತ ಛಲಗಾರ

ತಾವು ಅನುಭವಿಸಿದ ನರಕವನ್ನು ನನ್ನ ಜನ ಅನುಭವಿಸಬಾರದು ಎಂದು ಹಗಲಿರುಳು ಕುಳಿತು ರಚಿಸಿದ ನಮ್ಮ ಸಂವಿಧಾನದ ಪೀಠಿಕೆಯೇ ‘ಭಾರತೀಯರಾದ ನಾವು’ ಎಂದು ಆರಂಭಗೊಂಡು, ನಮ್ಮ ಸಂವಿಧಾನವನ್ನು ನಮಗೆ ನಾವೇ ನವೆಂಬರ್‌-26-1949 ಅರ್ಪಿಸಿಕೊಂಡಿದ್ದೇವೆ.ಆದರೆ ಅಂಬೇಡ್ಕರ್‌ ಅವರು ಮಾತ್ರ ಹುಟ್ಟಿನಿಂದ ಮಣ್ಣಾಗುವವರೆಗೂ ಅಸ್ಪೃಶ್ಯತೆಯ ಸುಂಟರಗಾಳಿಗೆ ಸಿಲುಕಿ ನರಳಾಡಿದರು.
ಅದೊಂದು ಘಟನೆ ನನಗೆ ಇನ್ನೂ ಕಾಡುತ್ತಿದೆ. 1927 ಮಾಚ್‌ರ್‍ 19, ಮಹಡ್‌ ನಗರದ ಚೌಡರ ಕೆರೆಯ ಚಳವಳಿ. ಅಸ್ಪೃಶ್ಯರಿಗೆ ನಿರಾಕರಣೆಯಿದ್ದ ಆ ಕೆರೆಯ ನೀರನ್ನು ಸಾವಿರಾರು ಮಂದಿ ಅಸ್ಪೃಶ್ಯರನ್ನು ಕರೆದುಕೊಂಡು ಬಂದು ಮುಟ್ಟಿ ಕುಡಿದಿರು. ಅಂಬೇಡ್ಕರ್‌ ಮತ್ತು ಅನುಯಾಯಿಗಳನ್ನು ಜಾತಿವಾದಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದರು. ಆದರೆ ಶಾಂತಿ ಕಾಯ್ದುಕೊಳ್ಳುವಂತೆ ಅಂಬೇಡ್ಕರ್‌ ನೀಡಿದ್ದ ಕರೆಯಿಂದ ಅಸ್ಪೃಶ್ಯರು ತಿರುಗಿ ಬೀಳಲಿಲ್ಲ.

ಕೊರೋನಾ ಭೀತಿ ನಡುವೆಯೂ ಅಂಬೇಡ್ಕರ್ ಜಯಂತಿಗೆ ಗ್ರೀನ್ ಸಿಗ್ನಲ್: ಶರತ್ತುಗಳು ಅನ್ವಯ

ಅದಷ್ಟೇ ಅಲ್ಲ, ಅಂಬೇಡ್ಕರ್‌ ಅವರು ತಾವು ಮಾಧ್ಯಮಿಕ ಶಾಲೆಗೆ ಪ್ರವೇಶಿಸಿದಾಗ ಜಾತಿಯ ತಾರತಮ್ಯದಿಂದ ಎಲ್ಲ ಮಕ್ಕಳ ಜೊತೆಯಲ್ಲಿ ಕೂರುವಂತಿರಲಿಲ್ಲ. ಅಲ್ಲಿಂದ ಆರಂಭವಾಗುವ ಶೋಷಣೆಗಳು ಒಂದಾ ಎರಡಾ... ಕ್ಷೌರಿಕನ ಮುಂದೆ ಕುಳಿತಾಗ ತಾನೊಬ್ಬ ದಲಿತ ಎಂದು ಗೊತ್ತಾಗುತ್ತಿದ್ದಂತೆ ತಲೆ ಕೂದಲನ್ನೂ ಅರೆಬರೆ ಕತ್ತರಿಸಿ ಕ್ಷೌರಿಕನು ಮಾಡಿದ ಅವಮಾನ, ಎತ್ತಿನ ಬಂಡಿಯಲ್ಲಿ ಹೋಗುವಾಗ ಗಾಡಿ ಮಾಲೀಕ ಬಂಡಿಯನ್ನೇ ಹಾರಿ ಬಿಟ್ಟು ಗಾಯಗೊಳಿಸಿದ ಘಟನೆ.. ಇಂತಹ ನೂರಾರು ಅವಮಾನಗಳನ್ನು ಅನುಭವಿಸಿದ ಅಂಬೇಡ್ಕರ್‌ ಈ ಅಸ್ಪೃಶ್ಯತೆ, ಜಾತೀಯತೆಯನ್ನು ಹೋಗಲಾಡಿಸಲು ಪಟ್ಟಶ್ರಮ ಅಷ್ಟಿಷ್ಟಲ್ಲ. ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಕರೆಕೊಟ್ಟು ತಮ್ಮ ಜನರನ್ನು ಮೇಲೆತ್ತಲು ಮಾಡಿದ ಪ್ರಯತ್ನಗಳು ‘ಭೀಮ’ನ ಸಾಹಸವೇ ಸರಿ.

ಕಾಡುತ್ತಲೇ ಇದೆ ಅಸ್ಪೃಶ್ಯತೆ

ಆಡು ಮುಟ್ಟದ ಸೊಪ್ಪಿಲ್ಲ. ಅಂಬೇಡ್ಕರ್‌ ಅವರಿಗೆ ತಿಳಿಯದ ವಿಚಾರಳಿಲ್ಲ. ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ತತ್ವಶಾಸ್ತ್ರ, ಮಾನವಶಾಸ್ತ್ರ ಮತ್ತು ರಾಜನೀತಿಗಳನ್ನು ಅಧ್ಯಯನ ಮಾಡಿದವರು. ‘ಭಾರತದಲ್ಲಿ ಜಾತಿಗಳು’ ಪ್ರಬಂಧ ಮಂಡಿಸಿ ವಿದ್ವಾಂಸರಿಂದ ಪ್ರಶಂಸೆಗೊಳಗಾದವರು. ಕೊಲಂಬಿಯಾ ವಿವಿ 1917ರಲ್ಲಿ ಅಂಬೇಡ್ಕಗೆ ಡಾಕ್ಟರೇಟ್‌ ನೀಡಿತು. ಮುಂಬೈನ ಸಿಡನ್‌ ಹ್ಯಾಮ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾದರು. 1920 ಜನವರಿ 31ರಂದು ಕೊಲ್ಲಾಪುರದ ಶಾಹು ಮಹಾರಾಜರ ನೆರವಿನಿಂದ ತಮ್ಮ ಮೊದಲ ಪತ್ರಿಕೆ ‘ಮೂಕನಾಯಕ’ ಆರಂಭಿಸಿ, ದೇಶದಲ್ಲಿ ತಾಂಡವಾಡುತ್ತಿರುವ ಜಾತಿ ವ್ಯವಸ್ಥೆ, ಶೋಷಣೆ, ಅಸಮಾನತೆಯ ವಿರುದ್ಧ ತಮ್ಮ ಲೇಖನಗಳಲ್ಲಿ ಪ್ರಸ್ತಾಪಿಸುತ್ತಿದ್ದರು.

ಅನಂತರ ‘ಬಹಿಷ್ಕೃತ ಭಾರತ’, ‘ಸಮತಾ’ ಮತ್ತು‘ಜನತಾ’ ಪತ್ರಿಕೆಗಳ ಮೂಲಕ ‘ನಿಮ್ನ ವರ್ಗ’ದ ಜನರ ಶ್ರೇಯೋಭಿವೃದ್ಧಿಗೆ ಲೇಖನಗಳನ್ನು ಬರೆದು ಜನರನ್ನು ಎಚ್ಚರಿಸುತ್ತಿದ್ದರು. ದಲಿತ ನಾಯಕರಾಗಿ ತಮ್ಮೊಡಲಲ್ಲಿ ಅದೆಷ್ಟೋ ಅವಮಾನ, ಅಪಮಾನ ಅನುಭವಿಸಿದರೂ ಭವಿಷ್ಯದಲ್ಲಿ ನನ್ನ ಜನ ಅನುಭವಿಸಬಾರದೆಂದು ಹಗಲಿರುಳು ಅವರ ಅಭಿವೃದ್ಧಿಗೆ ಶ್ರಮಿಸಿದ ಧೀಮಂತ ನಾಯಕ ಅಂಬೇಡ್ಕರ್‌.

ಶಿಕ್ಷಣದಿಂದಲೇ ದಲಿತರ ಅಭಿವೃದ್ಧಿ ಸಾಧ್ಯ ಎಂದು ಕರೆಕೊಟ್ಟು, ಸ್ವಾತಂತ್ರ್ಯ ಬಂದು 7 ದಶಕಗಳೇ ಕಳೆದರೂ ಅಸ್ಪೃಶ್ಯತೆ ಎಂಬ ಅನಿಷ್ಠ ಮಾತ್ರ ಸಮಾಜವನ್ನು ಭಾಗಶಃ ಇನ್ನು ಕಾಡುತ್ತಲೇ ಇದೆ. ಕಾನೂನುಗಳ ಮೂಲಕ ಕಠಿಣ ಕಾಯ್ದೆ ತಂದರೂ 21ನೇ ಶತಮಾನದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹಳ್ಳಿಯಿಂದ ದಿಲ್ಲಿಯವರೆಗೂ ಇನ್ನೂ ಜಾತೀಯತೆ, ಅಸ್ಪೃಶ್ಯತೆ, ಅಂಧಕಾರ ಎಂಬ ಪಿಡುಗು ನಿಂತಿಲ್ಲ.

ಅಂಬೇಡ್ಕರ್‌ ಅಂತ್ಯಕ್ರಿಯೆಗೂ ದಿಲ್ಲಿಯಲ್ಲಿ ಜಾಗ ನೀಡಲಿಲ್ಲ!

ಕೊರೋನಾ ಸೃಷ್ಟಿಸಿದ ಅಸ್ಪೃಶ್ಯತೆ

ಈಗ ಇಡೀ ವಿಶ್ವದಲ್ಲೇ ಮತ್ತೊಂದು ಅಸ್ಪೃಶ್ಯತೆ ಸೃಷ್ಟಿಯಾಗಿದೆ. ಅದುವೇ ಮಹಾಮಾರಿ ಕೋವಿಡ್‌-19 ಎಂಬ ವೈರಾಣು ತಂದ ಸ್ವಯಂ ನಿಯಂತ್ರಿತ ಜಾಗತಿಕ ಅಸ್ಪೃಶ್ಯತೆ. ನೆರೆಯ ಚೀನಾ ದೇಶದಿಂದ ಹರಡಿದ ವೈರಸ್‌ ಇಡೀ ವಿಶ್ವವನ್ನೇ ಬಾಧಿಸುತ್ತಿದೆ. ದುಡಿದು ಬಂದ ತಂದೆ ತನ್ನ ಪ್ರೀತಿಯ ಮಗುವನ್ನು ತಬ್ಬಿಕೊಂಡು ಮುದ್ದಾಡಲು ಸಾಧ್ಯವಾಗದ ಅಸ್ಪೃಶ್ಯತೆ. ದುಡಿಯಲು ಪೇಟೆ-ಪಟ್ಟಣ ಮತ್ತು ವಿದೇಶಗಳಿಗೆ ಹೋಗಿ ಬಂದವರಿಗೆ ಕ್ವಾರಂಟೈನ್‌ ಎಂಬ ದಿಗ್ಬಂಧನ. ವೈದ್ಯ ತನ್ನ ರೋಗಿಯನ್ನು ಸ್ಪರ್ಶಿಸದೇ ಕಣ್ಣಲ್ಲೇ ನೋಡಿ ಚಿಕಿತ್ಸೆಗೆ ಒಳಪಡಿಸುವ ಕೊರೋನಾ ಭಯದ ಅಸ್ಪೃಶ್ಯತೆ.

ದುಡಿದು ಬಂದ ಪತಿಗೆ ನೆಮ್ಮದಿಯಿಂದ ಊಟ ಬಡಿಸಲು ಅಂತರ ಕಾಯ್ದುಕೊಳ್ಳುವ ಅಸ್ಪೃಶ್ಯತೆ. ಸ್ನೇಹಿತ ಅಥವಾ ಸಹೋದರ ಮನೆಗೆ ಬಂದಾಗ ಹಸ್ತಲಾಘವನ್ನು ಕೊಡದಂತೆ ಮಾಡಿದೆ ಈ ಜಾಗತಿಕ ಕೊರೋನಾ ಅಸ್ಪೃಶ್ಯತೆ. ಪಕ್ಕದಲ್ಲಿದ್ದ ಒಬ್ಬರು ಸೀನಿದರೆ, ಕೆಮ್ಮಿದರೆ ಸಾಕು ಆ ವ್ಯಕ್ತಿಗೆ ಕೊರೋನಾ ಬಂದಿದೆಯಾ ಎಂದು ಚಿಂತಿಸುವಂತೆ ಮಾಡಿದೆ ಈ ವೈರಸ್‌. ನಿರುದ್ಯೋಗ, ಆರ್ಥಿಕ, ಸಾಮಾಜಿಕ ಮತ್ತು ಬಡತನದ ರೇಖೆಯನ್ನು ದಶಕಗಳಷ್ಟುಹಿಂದೆ ತಳ್ಳಿದೆ ಈ ಕೊರೋನಾ ಅಸ್ಪೃಶ್ಯತೆ.

ಸಾಮಾಜಿಕ ಅಂತರವೇ ಮದ್ದು

ಮದ್ದಿಲ್ಲದ ರೋಗದ ವಿರುದ್ಧ ಇಡೀ ವಿಶ್ವದ ವೈದ್ಯ ಸಮೂಹವೇ ಗುದ್ದಾಡುತ್ತಿದೆ. ಕಣ್ಣಿಗೆ ಕಾಣದ ವೈರಸ್‌ವೊಂದು ಸೃಷ್ಟಿಸಿದ ಈ ಜಾಗತಿಕ ಸಂಕಟತನ ಜನರನ್ನಷ್ಟೇ ಅಲ್ಲ, ಜೈವಿಕ ಸರಪಳಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಪ್ರಾಣಿ, ಪಕ್ಷಿ ಸಂಕಲವೇ ಒದ್ದಾಡುವಂತೆ ಮಾಡಿದೆ. ವಿಶ್ವದ 210 ರಾಷ್ಟ್ರಗಳ ಲಕ್ಷಕ್ಕೂ ಅಧಿಕ ಮಂದಿ ಕೋವಿಡ್‌ ವೈರಸ್‌ಗೆ ಬಲಿಯಾಗಿದ್ದಾರೆ. ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಸ್ವಯಂ ನಿಯಂತ್ರಣವೆಂಬ ಔಷಧವೇ ಇದಕ್ಕೆ ಮದ್ದು. ಸಾಮಾಜಿಕ ಅಂತರವೇ ಇದಕ್ಕೆ ಸಿದ್ಧ ಔಷಧ.

ಒಬ್ಬ ಜವಾಬ್ದಾರಿಯುತ ವೈದ್ಯನಾಗಿ, ವೈದ್ಯಕೀಯ ಶಿಕ್ಷಣ ಸಚಿವನಾಗಿ ಜನರಲ್ಲಿ ನಮ್ರತೆಯಿಂದ ವಿನಂತಿಸುವುದಿಷ್ಟೇ. ತಾವೆಲ್ಲರೂ ಸರ್ಕಾರ ರೂಪಿಸಿರುವ ಗೈಡ್‌ಲೈನ್ಸ್‌ ಪಾಲಿಸಬೇಕು. ಸರ್ಕಾರವೂ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ವೈದ್ಯಕೀಯ ಸುಧಾರಣೆಗಳು ನಡೆಯುತ್ತಲೇ ಇವೆ. ವೈದ್ಯರು ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಜನರ ಜೀವ ಉಳಿಸಲು ಹರಸಾಹಸ ಪಡುತ್ತಿದ್ದಾರೆ. ನಿಮ್ಮ ರಕ್ಷಣೆ ನಮ್ಮ ಸರ್ಕಾರದ ಜವಾಬ್ದಾರಿ.

ನೀವೂ ನಮ್ಮೊಂದಿಗೆ ಸಹಕರಿಸಿದರೆ ಜಾಗತಿಕ ಕೊರೋನಾ ಅಸ್ಪೃಶ್ಯತೆಯನ್ನು ನಿರ್ನಾಮ ಮಾಡಬಹುದು. ‘ನಮ್ಮ ಜೀವನ ಸಾರ್ಥಕವಾಗುವುದು ನಾವು ಎಷ್ಟುಸುಖ ಸಂತೋಷದಿಂದ ಇದ್ದೇವೆ ಎಂಬುದರಿಂದಲ್ಲ. ನಮ್ಮಿಂದ ಎಷ್ಟುಜನ ಸುಖ ಸಂತೋಷದಿಂದ ಇದ್ದಾರೆ ಎಂಬುವುದರಿಂದ’ ಈ ಮಾತನ್ನು ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಪ್ರತಿಪಾದಿಸಿದ್ದರು. ಅವರು ಹಾಕಿಕೊಟ್ಟದಾರಿಯಲ್ಲಿ ನಾವೆಲ್ಲರೂ ಸುಶಿಕ್ಷಿತರಾಗಿ ಬಾಳೋಣ. ಕೊರೋನಾ ವೈರಸ್‌ ನಾಶಕ್ಕೆ ಕಂಕಣ ಬದ್ಧರಾಗಿ ಹೋರಾಡೋಣ.

- ಡಾ.ಕೆ.ಸುಧಾಕರ್‌, ವೈದ್ಯಕೀಯ ಶಿಕ್ಷಣ ಸಚಿವ
Follow Us:
Download App:
  • android
  • ios