ಬೆಂಗಳೂರು [ಮಾ.07]:  ಸ್ವಾತಂತ್ರ್ಯ ನಂತರದ ಭಾರತದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಇತರೆ ಗಾಂಧಿಗಳಿಗೆ ಮಾತ್ರ ಪ್ರಾತಿನಿಧ್ಯ ದೊರೆತಿದೆ. ಈ ದೇಶಕ್ಕೆ ನಿಜವಾಗಿಯೂ ಡಾ.ಬಿ.ಆರ್‌. ಅಂಬೇಡ್ಕರ್‌ ಅವರೇ ಪ್ರಧಾನಮಂತ್ರಿಗಳಾಗಬೇಕಿತ್ತು. 

ಆದರೆ, ಅವರಿಗೆ ದೆಹಲಿಯಲ್ಲಿ ಅಂತ್ಯಕ್ರಿಯೆಗೂ ಜಾಗ ನೀಡಲಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಆಕ್ರೋಶ ವ್ಯಕ್ತಪಡಿಸಿದರು.

ಸಂವಿಧಾನದ ಬಗೆಗಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾನತೆಗಾಗಿ ಇಡೀ ಜೀವನವನ್ನು ಮುಡುಪಾಗಿಟ್ಟಸಮಾಜ ಚಿಕಿತ್ಸಕ ಡಾ.ಬಿ.ಆರ್‌. ಅಂಬೇಡ್ಕರ್‌. ಈ ದೇಶದಲ್ಲಿ ಸಂವಿಧಾನ ರಚಿಸುವ ತಜ್ಞರಿಲ್ಲ ಎಂದು ಜವಾಹರಲಾಲ್‌ ನೆಹರೂ ಅವರು ವಿಶ್ವದ ಸಂವಿಧಾನ ತಜ್ಞರನ್ನು ಹುಡುಕುವಾಗ ವಿಶ್ವಕ್ಕೆ ಶ್ರೇಷ್ಠ ಸಂವಿಧಾನ ರಚಿಸಿಕೊಟ್ಟವರು ಅಂಬೇಡ್ಕರ್‌. ನನ್ನ ಪ್ರಕಾರ ಅಂಬೇಡ್ಕರ್‌ ಅವರೇ ದೇಶದ ಪ್ರಧಾನಮಂತ್ರಿಯಾಗಬೇಕಾಗಿತ್ತು ಎಂದರು.

ಮಹಾಭಾರತ ಬರೆದದ್ದು ಕೀಳುಜಾತಿಯ ವಾಲ್ಮೀಕಿ: ಯತ್ನಾಳ್ ಮತ್ತೊಂದು ಎಡವಟ್ಟು..

ಹಿಂದೂಗಳಿಗೆ ಅಸ್ಪೃಶ್ಯರೇ ನೆರವಾಗಿದ್ದಾರೆ:

ಹಿಂದೂಗಳಿಗೆ ಪ್ರಮುಖ ಗ್ರಂಥಗಳು ಬೇಕಾದಾಗೆಲ್ಲಾ ಅಸ್ಪೃಶ್ಯರೇ ನೆರವಾಗಿದ್ದಾರೆ. ಇದನ್ನು ಡಾ.ಬಿ.ಆರ್‌. ಅಂಬೇಡ್ಕರ್‌ ಅವರು 1954ರ ಅಕ್ಟೋಬರ್‌ 3ರಂದು ಆಕಾಶವಾಣಿಗೆ ಮಾತನಾಡುತ್ತಾ ಹೇಳಿದ್ದಾರೆ. ‘ಹಿಂದೂಗಳಿಗೆ ವೇದಗಳು ಬೇಕಾಗಿದ್ದವು. ಆಗ ಕೆಳಜಾತಿಯವನಾದ ವ್ಯಾಸನನ್ನು ಕರೆದರು. ರಾಮಾಯಾಣ ಬೇಕಾದಾಗ ಅಸ್ಪೃಶ್ಯನಾದ ವಾಲ್ಮೀಕಿ ಬೇಕಾದ. ಆಡಳಿತಕ್ಕೆ ಸಂವಿಧಾನದ ಅಗತ್ಯವಿದೆ. ಹೀಗಾಗಿ ನನ್ನನ್ನು ಕರೆದರು’ ಎಂದು ಅಂಬೇಡ್ಕರ್‌ ಹೇಳಿದ್ದರು. ಇದು ಭಾರತೀಯ ಸಂಸ್ಕೃತಿ ಎಂದೂ ಜಾತಿ ಮೇಲೆ ನಿಂತಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಯತ್ನಾಳ್‌ ಹೇಳಿದರು.