ನಟ ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಲೈಂಗಿಕ ಕಿರುಕುಳ ಆರೋಪ ಮಾಡಿದ್ದು ಈ ಸಂಬಂಧ ನಟ ಅರ್ಜುನ್ ಸರ್ಜಾ ನೀಡಿದ್ದ ದೂರಿನ ಹಿನ್ನೆಲೆ ಎಫ್ ಐ ಆರ್ ದಾಖಲಾಗಿದ್ದು ಈ ಎಫ್ ಐ ಆರ್ ರದ್ದು ಕೋರಿ ನಟಿ ಶ್ರುತಿ ಹೈ ಕೋರ್ಟ್ ಮೊರೆ ಹೋಗಿದ್ದು ಈ ಸಂಬಂಧ ಬುಧವಾರ ವಿಚಾರಣೆ ನಡೆಯಲಿದೆ. 

ಬೆಂಗಳೂರು : ನಟ ಅರ್ಜುನ್‌ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಪ್ರಕರಣದಲ್ಲಿ ಸೈಬರ್‌ ಕ್ರೈಂ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ ರದ್ದು ಕೋರಿ ನಟಿ ಶ್ರುತಿ ಹರಿಹರನ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿ​ಸಿದ್ದು, ನ್ಯಾಯಾ​ಲಯ ಬುಧ​ವಾರ ಈ ಅರ್ಜಿ​ಯನ್ನು ವಿಚಾ​ರ​ಣೆಗೆ ತೆಗೆ​ದು​ಕೊ​ಳ್ಳುವ ಸಾಧ್ಯ​ತೆ​ಯಿ​ದೆ.

ಅರ್ಜುನ್‌ ಸರ್ಜಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹೇಳಿಕೆ ನೀಡಿರುವುದು ಮತ್ತು ವಂಚನೆ ಮಾಡಿದ್ದಾರೆ ಎಂದು ಎಫ್‌ಐಆರ್‌ ದಾಖಲಾಗಿದೆ. ಆದರೆ, ಅಜುನ್‌ ಸರ್ಜಾ ಮತ್ತು ತನ್ನ ನಡುವೆ ಯಾವುದೇ ವ್ಯವಹಾರ ನಡೆದಿಲ್ಲ. ಹೀಗಿರುವಾಗ ವಂಚನೆ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಆದರೂ, ವಂಚನೆ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಅರ್ಜುನ್‌ ಸರ್ಜಾ ವಿರುದ್ಧ ನಾನು ಯಾವುದೇ ರೀತಿಯ ಅಪಮಾನಕಾರ ಹೇಳಿಕೆ ಪ್ರಕಟಿಸಿಲ್ಲ. ಆದರೂ ಪೊಲೀಸರು ವ್ಯಾಪ್ತಿ ಮೀರಿ ಎಫ್‌ಐಆರ್‌ನಲ್ಲಿ ಈ ಎರಡು ಆರೋಪಗಳನ್ನು ಹೊರಿಸಿದ್ದಾರೆ. ಆದ್ದರಿಂದ ಎಫ್‌ಐಆರ್‌ ರದ್ದು ಮಾಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.

ಪ್ರಕರಣದ ಹಿನ್ನೆಲೆ: ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಟ್ವೀಟರ್‌, ಇನ್‌ಸ್ಟಾಗ್ರಾಂನಲ್ಲಿ ನಟ ಅರ್ಜುನ್‌ ಸರ್ಜಾ ವಿರುದ್ಧ ಶ್ರುತಿ ಹರಿಹರನ್‌ ಅವಹೇಳನಕಾರಿ ಹೇಳಿಕೆಗಳನ್ನು ಪ್ರಕಟಿಸಿದ್ದಾರೆ. ನಟ ಅರ್ಜುನ್‌ ಸರ್ಜಾ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ವ್ಯವಸ್ಥಿತವಾಗಿ ಷಡ್ಯಂತ್ರ ರೂಪಿಸಿದ್ದಾರೆ ಎಂದು ಅರ್ಜುನ್‌ ಸರ್ಜಾ ಮ್ಯಾನೇಜರ್‌ ಶಿವಾರ್ಜುನ್‌ ಪೊಲೀಸ್‌ ಕಮಿಷನರ್‌ ಸುನಿಲ್‌ ಕುಮಾರ್‌ ಅವರಿಗೆ ದೂರು ನೀಡಿದ್ದರು.

ದೂರಿನ ಆಧಾರದಲ್ಲಿ ಸೈಬರ್‌ ಕ್ರೈಂ ಪೊಲೀಸರು ಶ್ರುತಿ ಹರಿಹರನ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು. ಎಫ್‌ಐಆರ್‌ ರದ್ದು ಕೋರಿ ಶ್ರುತಿ ಹರಿಹರನ್‌ ಹೈಕೋರ್ಟ್‌ ಮೆಟ್ಟಿಲೇರಿದ್ದು, ಬುಧವಾರ ವಿಚಾರಣೆಗೆ ಬರುವ ಸಾಧ್ಯತೆಯಿದೆ.