ಶಿವಮೊಗ್ಗದಲ್ಲಿ ಹೊಸ ಸರ್ಕಾರಿ ಬಸ್ ಸಂಚಾರಕ್ಕೆ ಚಾಲನೆ ನೀಡಿದ ಸಚಿವ ಮಧು ಬಂಗಾರಪ್ಪ, ರಾಜ್ಯದ ಎಲ್ಲ ಮಹಿಳೆಯರಿಗೂ ಶಕ್ತಿ ಯೋಜನೆಯ ಲಾಭ ಸಿಗಬೇಕೆಂದು ಹೇಳಿದರು. ಬೊಮ್ಮನಕಟ್ಟೆಗೆ ಸರ್ಕಾರಿ ನಗರ ಸಾರಿಗೆ ಸಂಚಾರದ ಬೇಡಿಕೆ ಈಡೇರಿದೆ.
ಶಿವಮೊಗ್ಗ (ಜೂ.15): ರಾಜ್ಯದ ಎಲ್ಲ ಮಹಿಳೆಯರಿಗೂ ಶಕ್ತಿ ಯೋಜನೆಯ ಲಾಭಸಿಗಬೇಕು ಎಂಬುದು ಕಾಂಗ್ರೆಸ್ ಸರ್ಕಾರದ ಆಶಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ ಶಿವಮೊಗ್ಗ-ಬೊಮ್ಮನಕಟ್ಟೆ, ಭದ್ರಾವತಿ ಮಾರ್ಗದಲ್ಲಿ ಆರಂಭವಾದ ಸರ್ಕಾರಿ ನಗರ ಸಾರಿಗೆ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಬೊಮ್ಮನಕಟ್ಟೆಗೆ ಸರ್ಕಾರಿ ನಗರ ಸಾರಿಗೆ ಸಂಚಾರದ ಅಗತ್ಯತೆ ಇದೆ ಎಂದು ಯುವ ಮುಖಂಡ ಚೇತನ್ ಮತ್ತವರ ತಂಡದ ಬಹುದಿನದ ಬೇಡಿಕೆಯಾಗಿತ್ತು. ಆ ಪ್ರಯತ್ನದ ಫಲವಾಗಿ ಕಾಂಗ್ರೆಸ್ ಸರ್ಕಾರ ಇಂದು ಬೊಮ್ಮನಕಟ್ಟೆ ಜೊತೆಗೆ ಇನ್ನೂ ಬೇರೆ ಬೇರೆ ಗ್ರಾಮಾಂತರ ಪ್ರದೇಶಗಳಿಗೂ ಸರ್ಕಾರಿ ಬಸ್ ವ್ಯವಸ್ಥೆ ಮಾಡುತ್ತಿದೆ. ಸರ್ಕಾರ ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ನೀಡಿದ ಪಂಚ ಗ್ಯಾರಂಟಿ ಯೋಜನೆಗಳನ್ನು ನಿಯತ್ತಾಗಿ ಅನುಷ್ಠಾನಕ್ಕೆ ತಂದಿದೆ ಎಂದರು.
ಬಡವರ ಬಗ್ಗೆ ನನ್ನ ಅಪ್ಪಾಜಿ ಎಸ್.ಬಂಗಾರಪ್ಪನವರು ಹೊಂದಿದ್ದ ದೂರದರ್ಶಿತ್ವದ ಪರಿಣಾಮವೇ ದೇಶದಲ್ಲೇ ಪ್ರಥಮ ಬಾರಿಗೆ ಆಶ್ರಯ ಬಡಾವಣೆ ಅಸ್ತಿತ್ವಕ್ಕೆ ಬರಲು ಕಾರಣವಾಯಿತು. ಅಂದು ಆಶ್ರಯ ನಿವೇಶನ ಪಡೆದವರು ಇಂದು ತಮ್ಮ ಹತ್ತಿರ ಬಂದು ನನ್ನ ತಂದೆಯವರ ಬಡವರ ಕಾಳಜಿಯನ್ನು ಸ್ಮರಿಸಿದರು ಎಂದರು.
ಕಾರ್ಯಕ್ರಮದ ಬಳಿಕ ಸಚಿವರು ಅಲ್ಲಿಯೇ ಇರುವ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಇದಕ್ಕೂ ಮೊದಲು ಅಲ್ಲೇ ಇರುವ ಶ್ರೀ ಮಾತಾ ವಿದ್ಯಾ ಮಂದಿರದ ಚಿಣ್ಣರೊಂದಿಗೆ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಡಿಟಿಒ ದಿನೇಶ್, ಡಿಪೋ ವ್ಯವಸ್ಥಾಪಕ ರಾಮಚಂದ್ರಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್, ಮುಖಂಡರಾದ ಎಚ್.ಸಿ.ಯೋಗೀಶ್, ಎನ್.ರಮೇಶ್, ವಿಜಯಲಕ್ಷ್ಮಿ ಪಾಟೀಲ್, ಕಾಂಗ್ರೆಸ್ ಮುಖಂಡರಾದ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಶಿವಕುಮಾರ್, ಖಲೀಂ ಪಾಷ, ಕಾಂಗ್ರೆಸ್ ಮುಖಂಡರಾದ ಕೆ.ಚೇತನ್, ಮಧುಸೂದನ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಹರ್ಷಿತ್ ಗೌಡ, ಯುವ ಕಾಂಗ್ರೆಸ್ ನಗರಾಧ್ಯಕ್ಷ ಚರಣ್, ಜಿಲ್ಲಾ ಎನ್.ಎಸ್.ಯು.ಐ ಅಧ್ಯಕ್ಷ ವಿಜಯ್, ಜಿಲ್ಲಾ ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಗಿರೀಶ್, ವಾರ್ಡ್ ಅಧ್ಯಕ್ಷರಾದ ಕಾಂತರಾಜ್, ಮಾಲತೇಶ್, ತಂಗರಾಜ್, ಧೀರರಾಜ್ ಹೊನ್ನವಿಲೆ, ವಿಶ್ವನಾಥ್ ಕಾಶಿ, ರವಿಕುಮಾರ್, ಲಿಂಗರಾಜು, ಕಾರ್ತಿಕ್, ನರಸಿಂಹ, ಅನಂತು, ಶಿವು ಮತ್ತಿತರರಿದ್ದರು.
