ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಮಠಗಳು ಮುಂದಾಗಲಿ: ಶಾಸಕ ಯತ್ನಾಳ್ ಸಲಹೆ
ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಬಡವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಮಠಗಳು ಮುಂದಾಗಬೇಕೆಂದು ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ತಿಳಿಸಿದರು.
ರಾಣಿಬೆನ್ನೂರು (ಫೆ.14): ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಬಡವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಮಠಗಳು ಮುಂದಾಗಬೇಕೆಂದು ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ತಿಳಿಸಿದರು.
ತಾಲೂಕಿನ ಕೋಡಿಯಾಲ ಹೊಸಪೇಟೆ ಪುಣ್ಯಕೋಟಿ ಮಠದ ಆವರಣದಲ್ಲಿ ನಡೆದ 5ನೇ ತುಂಗಾರತಿ ಕಾರ್ಯಕ್ರಮದಲ್ಲಿ ವಿಶ್ವಮಾತೆ ಪುಣ್ಯಕೋಟಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ನಾನೊಮ್ಮೆ ಓರ್ವ ಮಠಾಧೀಶರಿಗೆ ಒಬ್ಬ ಬಡ ವಿದ್ಯಾರ್ಥಿಯ ಶುಲ್ಕದಲ್ಲಿ ₹ 2 ಲಕ್ಷ ರಿಯಾಯಿತಿ ನೀಡಲು ಕೋರಿದಾಗ ಅವರು ನಿರಾಕರಿಸಿದರು. ಹಾಗಾದರೆ ಮಠಗಳು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಬಡ ಮಕ್ಕಳಿಗೆ ಅನುಕೂಲ ಮಾಡಿಕೊಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಸರ್ಕಾರದ ಕೋಟಿ, ಕೋಟಿ ಮೊತ್ತದ ಅನುದಾನ ಹರಿದು ಬರಲಿ ಎಂದು ಕೆಲವು ಮಠಾಧೀಶರು ಹಾಲಿ, ಮಾಜಿ ಸಿಎಂಗಳನ್ನು ಕಾರ್ಯಕ್ರಮಕ್ಕೆ ಕರೆಯಿಸಿ ಹೊಗಳುವ ಕೆಲಸ ಮಾಡುತ್ತಿವೆ. ಆದರೆ ಅವರದ್ದೆ ಸಮುದಾಯದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಅವರಿಗೆ ಮನಸ್ಸು ಬರುವುದಿಲ್ಲ ಎಂದು ಟೀಕಿಸಿದರು.
ನಾನು ಆಡಳಿತ ಚುಕ್ಕಾಣಿ ಹಿಡಿದರೆ ರಾಜ್ಯದಲ್ಲಿ ಗೋಶಾಲೆ ಹೊಂದಿರುವ ಹಾಗೂ ಒಂದು ಸಾವಿರ ಬಡ ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯ ಒದಗಿಸುವ ಮಠಗಳಿಗೆ ಮಾತ್ರ ಅನುದಾನ ಎಂದು ನಿಯಮ ರೂಪಿಸುತ್ತೇನೆ. ಆಯಾ ಸಮುದಾಯದ ಬಡ ಮಕ್ಕಳನ್ನು ಮೇಲೆತ್ತುವ ಕೆಲಸ ಆಗಬೇಕಿದೆ ಎಂದರು. ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾಗ ನನ್ನ ಕ್ಷೇತ್ರದ ದೇವಸ್ಥಾನಕ್ಕೆ ಆಡಳಿತಾಧಿಕಾರಿ ನೇಮಿಸಿ ಮುಜರಾಯಿ ವ್ಯಾಪ್ತಿಗೆ ಸೇರಿಸಿದ್ದರು. ನಂತರ ಬಂದ ಕಾಂಗ್ರೆಸ್ ಸರ್ಕಾರದಲ್ಲಿ ಮುಜರಾಯಿ ಸಚಿವರಾಗಿದ್ದ ರುದ್ರಪ್ಪ ಲಮಾಣಿಯವರು ಮತ್ತೆ ಆ ದೇವಸ್ಥಾನವನ್ನು ಸಂಸ್ಥೆಯ ವಶಕ್ಕೆ ನೀಡಿದರು ಎಂದರು.
ನಿಸರ್ಗವನ್ನೆ ಆಧರಿಸಿ ಜೀವನ ನಡೆಸುತ್ತಿರುವ ಭಾರತೀಯರು ನದಿ, ಕಲ್ಲು, ಮರ, ಗಿಡಗಳನ್ನು ಪೂಜಿಸುತ್ತಾರೆ, ಆದರೆ ಇದನ್ನು ಕೆಲವರು ಟೀಕಿಸುವುದು ಸರಿಯಲ್ಲ. ನಿಸರ್ಗವನ್ನು ಪೂಜ್ಯ ಭಾವನೆಯಿಂದ ಕಂಡಲ್ಲಿ ಮಾತ್ರ ಮನುಷ್ಯನ ಅಸ್ತಿತ್ವ ಸಾಧ್ಯವಿದೆ. ಇದೇ ಕಾರಣದಿಂದ ಹಿಂದೂ ಧರ್ಮದಲ್ಲಿ ನಿಸರ್ಗ ಪೂಜೆಗೆ ಆದ್ಯತೆ ನೀಡಲಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಪುಣ್ಯಕೋಟಿ ಮಠದ ಪೀಠಾಧಿಪತಿ ಬಾಲಯೋಗಿ ಜಗದೀಶ್ವರ ಶ್ರೀ ಮಾತನಾಡಿ, ಸರ್ಕಾರ ಹಾಗೂ ಭಕ್ತಾದಿಗಳ ಸಹಕಾರದಿಂದ ಕಾಡಾಗಿದ್ದ ನದಿ ತೀರದಲ್ಲಿ ಜನಮುಖಿ ಮಠ ಹಾಗೂ ಅಧ್ಯಾತ್ಮಿಕ ವಾತಾವರಣ ಸೃಷ್ಟಿಸಲಾಗಿದೆ. ನಮ್ಮೆಲ್ಲರ ಅಸ್ತಿತ್ವಕ್ಕೆ ಆಧಾರವಾಗಿರುವ ತುಂಗಭದ್ರ ನದಿಗೆ ಆರತಿ ಮಾಡುವ ವಿಶಿಷ್ಟ ಕಾರ್ಯಕ್ರಮ ಆಚರಿಸಲಾಗುತ್ತಿದೆ ಎಂದರು.
ಸ್ಪಟಿಕಪುರಿ ಮಹಾಸಂಸ್ಥಾನದ ನಂಜಾವಧೂತ ಸಾನ್ನಿಧ್ಯ ವಹಿಸಿದ್ದರು. ಸಜ್ಜನ ಜನನಾಯಕ ಪ್ರಶಸ್ತಿ ಸ್ವೀಕರಿಸಿದ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ರೂಪಾ ಕರೂರ ಅಧ್ಯಕ್ಷತೆ ವಹಿಸಿದ್ದರು. ಶಾಕಾಪುರ ವಿಶ್ವಾರಾಧ್ಯ ತಪೋವನ ಮಠದ ಡಾ. ಸಿದ್ದರಾಮ ಶ್ರೀ ನೇತೃತ್ವ ವಹಿಸಿದ್ದರು.
ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಡಿಕೆ ಶಿವಕುಮಾರ್ ವಿರುದ್ಧ ಲೋಕಾಯುಕ್ತ ಎಫ್ಐಆರ್!
ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನದ ಚಂದ್ರಶೇಖರ ಶ್ರೀ, ಹೊದಲೂರು ನೂಲಿ ಚಂದಯ್ಯ ಗುರುಪೀಠದ ವೃಷಭೇಂದ್ರ ದೇಶೀಕೇಂದ್ರ ಶ್ರೀ, ಶಾಸಕರಾದ ಬಿ.ಪಿ. ಹರೀಶ, ಪ್ರಕಾಶ ಕೋಳಿವಾಡ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಜೆಡಿಎಸ್ ಮುಖಂಡ ಮಂಜುನಾಥ ಗೌಡಶಿವಣ್ಣನವರ ಮತ್ತಿತರರಿದ್ದರು.
ನಂತರ ನಡೆದ ಸಂಗೀತಯುಕ್ತ ತುಂಗಾರತಿ ಕಾರ್ಯಕ್ರಮವನ್ನು ನೂರಾರು ಜನ ಭಕ್ತರು ಕಣ್ತುಂಬಿಕೊಂಡರು.