ಪೊಲೀಸ್‌, ಅಗ್ನಿಶಾಮಕ ದಳ ಸೇರಿದಂತೆ ಇತರೆ ಇಲಾಖೆ ಸಿಬ್ಬಂದಿಯ ಸಮವಸ್ತ್ರವನ್ನು ಕೈಮಗ್ಗ ಅಭಿವೃದ್ಧಿ ನಿಗಮದ ಮೂಲಕ ಪೂರೈಸುವ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚೆ ನಡೆಸಲಾಗುವುದು ಎಂದು ಜವಳಿ ಸಚಿವ ಶಿವಾನಂದ ಪಾಟೀಲ್‌ ಆಶ್ವಾಸನೆ ನೀಡಿದ್ದಾರೆ.

ವಿಧಾನಸಭೆ (ಜು14) : ಪೊಲೀಸ್‌, ಅಗ್ನಿಶಾಮಕ ದಳ ಸೇರಿದಂತೆ ಇತರೆ ಇಲಾಖೆ ಸಿಬ್ಬಂದಿಯ ಸಮವಸ್ತ್ರವನ್ನು ಕೈಮಗ್ಗ ಅಭಿವೃದ್ಧಿ ನಿಗಮದ ಮೂಲಕ ಪೂರೈಸುವ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚೆ ನಡೆಸಲಾಗುವುದು ಎಂದು ಜವಳಿ ಸಚಿವ ಶಿವಾನಂದ ಪಾಟೀಲ್‌ ಆಶ್ವಾಸನೆ ನೀಡಿದ್ದಾರೆ.

ಗುರುವಾರ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಬಿಜೆಪಿ ಸದಸ್ಯ ಸಿದ್ದು ಸವದಿ, ‘ಕೈಮಗ್ಗ ಅಭಿವೃದ್ಧಿ ನಿಗಮ ಪೂರೈಸಿದ ಸಮವಸ್ತ್ರ ಕಳಪೆಯಾಗಿದೆ ಎಂದು ಆರೋಪಿಸಲಾಗಿದೆ. ಅಲ್ಲದೇ, ಸಮವಸ್ತ್ರ ತಯಾರಿಯನ್ನು ನೇಕಾರರಿಗೆ ಬದಲು ಮಾರ್ವಾಡಿಗೆ ನೀಡಿ ಉದ್ಧಾರ ಮಾಡಲು ಸರ್ಕಾರ ಮುಂದಾಗಿದೆ’ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಾನಂದ ಪಾಟೀಲ್‌, ‘ನಾನು ಸಚಿವನಾದ ಬಳಿಕ ಸಮವಸ್ತ್ರ ಪೂರೈಸಲು ಯಾವುದೇ ಮಾರ್ವಾಡಿಗೂ ಅನುಕೂಲ ಮಾಡಿಕೊಟ್ಟಿಲ್ಲ. ಹಿಂದಿನ ಸರ್ಕಾರದ ಆದೇಶವನ್ನು ಪಾಲನೆ ಮಾಡಿದ್ದೇನೆ’ ಎಂದು ತಿರುಗೇಟು ನೀಡಿದರು.

ಬಿಜೆಪಿಗೆ ವಿರೋಧ ಪಕ್ಷದ ನಾಯಕರು ಎಲ್ಲಿದ್ದಾರೆ ?: ಪ್ರಿಯಾಂಕ್ ಖರ್ಗೆ ಲೇವಡಿ

‘ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ತನಿಖೆಗೆ ಶಿಕ್ಷಣ ಇಲಾಖೆ ಆದೇಶಿಸಿದೆ. ಹಿಂದಿನ ಸರ್ಕಾರ ಮಾಡಿರುವ ಆದೇಶವನ್ನು ಪಾಲನೆ ಮಾಡಲಾಗಿದೆ ಅಷ್ಟೇ. ಇನ್ನು, ಮಾರ್ವಾಡಿಗೆ ಸಮವಸ್ತ್ರ ಸಿದ್ಧಪಡಿಸುವ ನೀಡಿಲ್ಲ. ನಾನು ಸಚಿವನಾದ ಬಳಿಕವಂತೂ ಯಾವುದೇ ತೀರ್ಮಾನ ಮಾಡಿಲ್ಲ. ನೇಕಾರರ ಏಳ್ಗೆಯಾಗಬೇಕು ಎಂಬುದು ನಮ್ಮ ಉದ್ದೇಶವೂ ಆಗಿದೆ. ಮುಂದಿನ ದಿನದಲ್ಲಿ ಪೊಲೀಸ್‌, ಅಗ್ನಿಶಾಮಕ ದಳ ಮತ್ತಿತರ ಇಲಾಖೆಯ ಸಿಬ್ಬಂದಿಯ ಸಮವಸ್ತ್ರವನ್ನು ನಿಗಮದಿಂದ ಪೂರೈಸುವ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು’ ಎಂದು ಭರವಸೆ ನೀಡಿದರು.

ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು ಜೈನಮುನಿ ಹತ್ಯೆ: ಐಸಿಸ್ ಶಂಕೆ..ಸಿಬಿಐ ತನಿಖೆಗೆ ಬಿಜೆಪಿ ಒತ್ತಾಯ..!

ಇದಕ್ಕೂ ಮುನ್ನ ಸಿದ್ದು ಸವದಿ, ‘ವಿದ್ಯಾವಿಕಾಸ ಯೋಜನೆಯಡಿ ಪೂರೈಸಿದ ಶಾಲಾ ಮಕ್ಕಳ ಸಮವಸ್ತ್ರ ಕಳಪೆಯಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ನಿಗಮದ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ. ಇದು ಸರಿಯಲ್ಲ. ಸಮವಸ್ತ್ರವನ್ನು ನಿಗಮವು ತಯಾರಿಸಿಲ್ಲ. ಕೇವಲ ಪೂರೈಕೆ ಮಾಡಲಾಗಿದೆ. ಕಳಪೆ ಸಮವಸ್ತ್ರದ ಬಗ್ಗೆ ಸುಳ್ಳು ಆಪಾದನೆ ಮಾಡಿ ನಿಗಮದ ಅಧಿಕಾರಿ ವಿರುದ್ಧ ತನಿಖೆ ನಡೆಸಲಾಗುತ್ತಿದೆ. ಸಂಕಷ್ಟದಲ್ಲಿರುವ ನೇಕಾರರನ್ನು ರಕ್ಷಿಸುವ ಬದಲು ಬಲಿ ಕೊಡಲಾಗುತ್ತಿದೆ. ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ಮಾಡಲಾಗುತ್ತಿದ್ದು, ಅವರ ಕಡೆ ಗಮನಹರಿಸಬೇಕು’ ಎಂದರು.