ಬೆಂಗಳೂರು(ಮೇ.23): ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಚಾಮರಾಜಪೇಟೆ ಶಾಖೆಯು ತ್ರಿಭಾಷಾ ಸೂತ್ರಕ್ಕೆ ತಿಲಾಂಜಲಿ ನೀಡಿ, ಕನ್ನಡ ಬಳಕೆಯನ್ನು ನಿರ್ಲಕ್ಷಿಸಿರುವುದಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ತೀವ್ರ ಖಂಡನೆ ವ್ಯಕ್ತಪಡಿಸಿದೆ.
ಈ ಬಗ್ಗೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಚಾಮರಾಜಪೇಟೆ ಶಾಖೆಯ ಪ್ರಧಾನ ವ್ಯವಸ್ಥಾಪಕರಿಗೆ ಪತ್ರ ಬರೆದಿರುವ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್‌ ಕನ್ನಡ ನಿರ್ಲಕ್ಷ್ಯ ಮಾಡಿದರೆ ಬ್ಯಾಂಕಿನ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಕೇಂದ್ರ ಸರ್ಕಾರ 1968ರಲ್ಲಿ ಜಾರಿಗೆ ತಂದಿರುವ ತ್ರಿಭಾಷಾ ಸೂತ್ರಗಳನ್ನು ಬ್ಯಾಂಕುಗಳು ಕಡ್ಡಾಯವಾಗಿ ಜಾರಿ ಮಾಡಬೇಕು. ಕೂಡಲೇ ಪಾಸ್‌ಬುಕ್‌ ಮುಖಪುಟದಲ್ಲಿ ಹಿಂದಿನಂತೆ ಕನ್ನಡದಲ್ಲಿ ಭಾರತೀಯ ಸ್ಟೇಟ್‌ ಬ್ಯಾಂಕ್‌ ಎಂದು ಮುದ್ರಿಸಬೇಕು. ಬ್ಯಾಂಕಿನ ವ್ಯವಹಾರವನ್ನು ಕನ್ನಡದಲ್ಲೇ ನಡೆಸಬೇಕು. ಈ ರೀತಿ ಕನ್ನಡಕ್ಕೆ ಅಪಮಾನ ಮಾಡಿರುವವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಬ್ಯಾಂಕ್‌ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಕೊರೋನಾ ಆತಂಕದ ಮಧ್ಯೆ ಬಿಎಂಟಿಸಿಯಲ್ಲಿ ಸಾಮಾಜಿಕ ಅಂತರಕ್ಕೆ ಬೆಲೆಯೇ ಇಲ್ಲ!

ಚಾಮರಾಜ ನಗರದ ಸ್ಟೇಟ್‌ಬ್ಯಾಂಕ್‌ ಆಫ್‌ ಇಂಡಿಯಾ ಶಾಖೆಯಲ್ಲಿ ಈ ಹಿಂದೆ ಬ್ಯಾಂಕಿನ ಪಾಸ್‌ ಬುಕ್‌ ಮುಖಪುಟದಲ್ಲಿ ಮೊದಲ ಸಾಲಿನಲ್ಲಿ ಭಾರತೀಯ ಸ್ಟೇಟ್‌ ಬ್ಯಾಂಕ್‌ ಎಂದು ಕನ್ನಡದಲ್ಲಿ ಮುದ್ರಿಸಲಾಗಿತ್ತು. ಆದರೆ ಇತ್ತೀಚೆಗೆ ಕನ್ನಡದಲ್ಲಿದ್ದ ಈ ಬರಹವನ್ನು ತೆಗೆದುಹಾಕಿ, ಕೇವಲ ಹಿಂದಿ ಮತ್ತು ಇಂಗ್ಲಿಷ್‌ ಮಾತ್ರ ಉಳಿಸಿಕೊಳ್ಳಲಾಗಿದೆ. ಬ್ಯಾಂಕ್‌ನ ಈ ಧೋರಣೆಗೆ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗಿತ್ತು.