ಈಗಾಗಲೇ 38 ವಾರ್ಡ್‌ಗಳಲ್ಲಿ ಚಾಲನೆ 78 ಕಡೆ ಶೀಘ್ರ ಚಾಲನೆ| ಸಂಸ್ಕರಣಾ ಘಟಕಗಳಲ್ಲಿ ವಾಸನೆ ಬರದಂತೆ ಕ್ರಮ| ವೇಸ್ಟ್‌ ಟು ಎನರ್ಜಿ ಘಟಕಗಳನ್ನು ತ್ವರಿತಗತಿಯಲ್ಲಿ ಪ್ರಾರಂಭಿಸಲು ಕ್ರಮ| 

ಬೆಂಗಳೂರು(ಸೆ.18): ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತ್ಯೇಕ ಕಸ ಸಂಗ್ರಹ ಯೋಜನೆಯನ್ನು ಈಗಾಗಲೇ 38 ವಾರ್ಡ್‌ಗಳಲ್ಲಿ ಜಾರಿಗೊಳಿಸಲಾಗಿದ್ದು, ಇನ್ನೂ 78 ವಾರ್ಡ್‌ಗಳಲ್ಲಿ ಶೀಘ್ರದಲ್ಲಿ ಆರಂಭಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ. 

ಗುರುವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಆಡಳಿತಾಧಿಕಾರಿ ಗೌರವ್‌ ಗುಪ್ತಾ ಅವರ ಅಧ್ಯಕ್ಷತೆಯಲ್ಲಿ ಘನತ್ಯಾಜ್ಯ ವಿಭಾಗದ ಅಧಿಕಾರಿಗಳ ಸಭೆ ನಡೆಸಿ ಪ್ರತ್ಯೇಕ ಕಸ ಸಂಗ್ರಹ ಯೋಜನೆ ಜಾರಿ ಕುರಿತು ಚರ್ಚೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಮಂಜುನಾಥ ಪ್ರಸಾದ್‌, ನಗರದಲ್ಲಿ ಯಾವುದೇ ರೀತಿಯಲ್ಲಿ ಕಸದ ಸಮಸ್ಯೆ ಆಗದಂತೆ ಹಾಗೂ ವೈಜ್ಞಾನಿಕವಾಗಿ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ 38 ವಾರ್ಡ್‌ಗಳಿಗೆ ಕಾರ್ಯಾದೇಶ ನೀಡಿ ಕೆಲಸ ಆರಂಭಿಸಲಾಗುತ್ತಿದೆ. ಉಳಿದಂತೆ ಇನ್ನೂ 78 ವಾರ್ಡ್‌ಗಳಲ್ಲಿ ಪ್ರತ್ಯೇಕ ಕಸ ಸಂಗ್ರಹಿಸುವ ಜಾರಿ ಕುರಿತು ಗುತ್ತಿಗೆದಾರರಿಗೆ ಕೆಲಸ ಆರಂಭಕ್ಕೆ ಸ್ವೀಕೃತಿ ಪತ್ರ ನೀಡಲಾಗಿದೆ. ಶೀಘ್ರವಾಗಿ ಕೆಲಸ ಆರಂಭಿಸಲು ತಿಳಿಸಲಾಗಿದೆ. ಗುತ್ತಿಗೆದಾರರ ಜೊತೆ ಸಭೆ ನಡೆಸಿ ಮುಂದಿನ ಮೂರು ತಿಂಗಳಲ್ಲಿ ನಗರದಲ್ಲಿ ಶೇ.100 ರಷ್ಟುಕಸ ವಿಂಗಡಣೆ ಆಗಬೇಕೆಂದು ಸೂಚನೆ ನೀಡಲಾಗಿದೆ ಎಂದು ಸೂಚಿಸಲಾಗಿದೆ.

ಸಕಾಲಕ್ಕೆ ಕಸ ಸಂಗ್ರಹಿಸದ ಗುತ್ತಿಗೆದಾರರಿಗೆ ನೋಟಿಸ್‌: ಬಿಬಿಎಂಪಿ

ಹೊಸ ಆ್ಯಪ್‌:

ಒಣ ಹಾಗೂ ಹಸಿ ಕಸವನ್ನು ವಿಂಗಡಣೆ ಮಾಡಿಕೊಡಬೇಕು. ಈ ಬಗ್ಗೆ ನಾಗರಿಕರಿಗೆ ನೂತನ ಬಿಬಿಎಂಪಿ ಆ್ಯಪ್‌ ಬಿಡುಗಡೆ ಮಾಡುತ್ತಿದ್ದು, ಪ್ರತಿ ನಾಗರಿಕರೂ ಆ್ಯಪ್‌ ಡೌನ್ಲೋಡ್‌ ಮಾಡಿ, ಕಸದ ವಾಹನದ ಲೈವ್‌ ಲೊಕೇಷನ್‌ (ಆಟೋ ಇರುವ ಸ್ಥಳ) ಮಾಹಿತಿ ಪಡೆಯಬಹುದು. ಕಸದ ವಾಹನ ನಮ್ಮ ಮನೆಗೆ ಎಷ್ಟುಹೊತ್ತಿಗೆ ಬರಬಹುದು ಎಂದು ತಿಳಿಯಬಹುದು. ಒಂದು ವೇಳೆ ಬರದಿದ್ದರೆ ದೂರು ಕೊಡಬಹುದು ಎಂದರು.

ಸಭೆಯಲ್ಲಿ ವಿಶೇಷ ಆಯುಕ್ತ (ಘನತ್ಯಾಜ್ಯ) ಡಿ.ರಂದೀಪ್‌, ಜಂಟಿ ಆಯುಕ್ತ ಸರ್ಫರಾಜ್‌ ಖಾನ್‌, ಅಧೀಕ್ಷಕ ಅಭಿಯಂತರರಾದ ಬಸವರಾಜ್‌ ಕಬಾಡೆ, ಮುಖ್ಯ ಅಭಿಯಂತರ ವಿಶ್ವನಾಥ್‌ ಉಪಸ್ಥಿತರಿದ್ದರು.

ಬಿಬಿಎಂಪಿ ಆದಾಯ ಹೆಚ್ಚಳಕ್ಕೆ ಕ್ರಮ

ಬಿಬಿಎಂಪಿಯ ಆದಾಯ ಸಂಪನ್ಮೂಲಗಳ ಹೆಚ್ಚಳದ ಬಗ್ಗೆ ಈಗಾಗಲೇ ಸಂಬಂಧಪಟ್ಟಹಿರಿಯ ಅಧಿಕಾರಿಗಳ ಜೊತೆ ಸಭೆ ಮಾಡಲಾಗಿದೆ. ಆದಾಯಕ್ಕಿಂತ ಖರ್ಚು ಹೆಚ್ಚಾಗಿದೆ. ಆದ್ದರಿಂದ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ಪರಿಷ್ಕರಿಸಿ ಮಂಡನೆ ಮಾಡಲಿದ್ದಾರೆ. ಆ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಆದಾಯ ಸಂಪನ್ಮೂಲವನ್ನು ಹೆಚ್ಚಳ ಮಾಡುವ ಬಗ್ಗೆ ಚರ್ಚಿಸಲಾಗಿದ್ದು, ಯಾವುದಕ್ಕೆ ಖರ್ಚು ಮಾಡಬೇಕು ಹಾಗೂ ಯಾವುದನ್ನು ಕೈಬಿಡಬಹುದು ಎಂಬುದರ ಬಗ್ಗೆ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಆಡಳಿತಾಧಿಕಾರಿ ಗೌರವ್‌ ಗುಪ್ತಾ ತಿಳಿಸಿದರು.

ಹಸಿ ಕಸವನ್ನು ಸ್ಥಳೀಯವಾಗಿ ‘ನಮ್ಮ ಕಸ ನಮ್ಮ ಜವಾಬ್ದಾರಿ’ಯಡಿ ಸಂಸ್ಕರಿಸಲು ಕ್ರಮ ಕೈಗೊಳ್ಳಬೇಕು. ಇದರಿಂದ ಸಾಗಾಣಿಕೆ ವೆಚ್ಚ ಕಡಿಮೆಯಾಗಲಿದೆ. ಕಸ ವಿಲೇವಾರಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಶಾಲಾ-ಕಾಲೇಜು ಮಕ್ಕಳ ಜವಾಬ್ದಾರಿ ಏನು, ನಾಗರಿಕರ ಜವಾಬ್ದಾರಿ ಏನು, ಯಾವ ರೀತಿ ಕಸ ವಿಂಗಡಣೆ ಮಾಡಿ ಸಂಸ್ಕರಿಸುತ್ತಾರೆ ಎಂಬುದರ ಬಗ್ಗೆ ಸಮಗ್ರ ಮಾಹಿತಿಯ ಕೈಪಿಡಿ ಸಿದ್ಧತೆ ಮಾಡಲಾಗುವುದು. ಇದರಿಂದ ನಾಗರಿಕರಿಗೆ ಅನುಕೂಲವಾಗಲಿದೆ ಎಂದರು.

ಸಂಸ್ಕರಣಾ ಘಟಕಗಳಲ್ಲಿ ವಾಸನೆ ಬರದಂತೆ ಕ್ರಮ ಕೈಗೊಳ್ಳಲಾಗುವುದು. ವೇಸ್ಟ್‌ ಟು ಎನರ್ಜಿ ಘಟಕಗಳನ್ನು ತ್ವರಿತಗತಿಯಲ್ಲಿ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಬೆಸ್ಕಾಂ ಹಾಗೂ ಕೆಪಿಸಿಎಲ್‌ ಜೊತೆ ಸೇರಿ ಅನುಷ್ಠಾನಕ್ಕೆ ತರಲಾಗುವುದು. ಬಿಡದಿ ಬಳಿ ಜಮೀನು ಗುರುತಿಸಲಾಗಿದ್ದು, ಈಗಾಗಲೇ ಟೆಂಡರ್‌ ಅಂತಿಮಗೊಂಡಿದೆ. ಇನ್ನು ಕನ್ನಹಳ್ಳಿ, ಸೀಗೇಹಳ್ಳಿ ವೇಸ್ಟ್‌ ಟು ಎನರ್ಜಿ ಘಟಕ ಸ್ಥಾಪಿಸಲು ಕ್ರಮ ವಹಿಸಲಾಗುತ್ತಿದೆ. ಅಲ್ಲದೆ ಮಾವಳ್ಳಿಪುರದಲ್ಲಿ ಎರಡು ಹಾಗೂ ದೊಡ್ಡಬಿದರೆಕಲ್ಲಿ ಒಂದು ಪ್ಲಾಂಟ್‌ ಸ್ಥಾಪಿಸುವ ಪ್ರಸ್ತಾವನೆ ಇದೆ. ಕಾರ್ಯಾದೇಶ ನೀಡಿದರೆ ಕೆಲಸ ಪ್ರಾರಂಭವಾಗಲಿದೆ. ಈ ಕುರಿತು ಆಡಳಿತಾಧಿಕಾರಿಗಳು ಅನುಮತಿ ನೀಡಿದ್ದಾರೆ ಎಂದು ಆಯುಕ್ತರು ವಿವರಿಸಿದರು.

ಪ್ಯಾನಲ್‌ ಕೋಟ್‌

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ, ಸಾಗಾಣಿಕೆ, ವಿಲೇವಾರಿ ಬಗ್ಗೆ ಘನತ್ಯಾಜ್ಯ ವಿಭಾಗದ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ. ಈಗಾಗಲೇ ಕೆಲವು ಕಡೆ ಹೊಸ ಟೆಂಡರ್‌ಗೆ ಚಾಲನೆ ನೀಡಲಾಗಿದೆ. ಇರುವ ಸಮಸ್ಯೆ ಪರಿಹಾರಕ್ಕೆ ಏನೆಲ್ಲಾ ಕ್ರಮ ಕೊಳ್ಳಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಬಿಬಿಎಂಪಿ ಆಡಳಿತಾಧಿಕಾರಿ, ಗೌರವ್‌ ಗುಪ್ತಾ ಅವರು ತಿಳಿಸಿದ್ದಾರೆ.