ಬೆಂಗಳೂರು(ಸೆ.17): ನಗರದ 38 ವಾರ್ಡ್‌ಗಳಲ್ಲಿ ಹಸಿ, ಒಣ ಹಾಗೂ ಸ್ಯಾನಿಟರಿ ತ್ಯಾಜ್ಯ ಪ್ರತ್ಯೇಕವಾಗಿ ಸಂಗ್ರಹಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದ್ದು, ನಿಗದಿತ ಸಮಯದಲ್ಲಿ ಮನೆಗಳಿಂದ ತ್ಯಾಜ್ಯ ಸಂಗ್ರಹಿಸದೇ ನಿಯಮ ಉಲ್ಲಂಘಿಸಿದರೆ ಗುತ್ತಿಗೆದಾರರಿಗೆ ನೋಟಿಸ್‌ ಜಾರಿಗೊಳಿಸುವುದಕ್ಕೆ ಎಚ್ಚರಿಕೆ ನೀಡಿದೆ.

ಬುಧವಾರ ಬಿಬಿಎಂಪಿಯ ಮಲ್ಲೇಶ್ವರ ಕಚೇರಿಯಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌ ಅಧ್ಯಕ್ಷತೆಯಲ್ಲಿ ಘನತ್ಯಾಜ್ಯ ವಿಭಾಗದ ಅಧಿಕಾರಿಗಳು, ಗುತ್ತಿಗೆದಾರರು, ಒಣ ತ್ಯಾಜ್ಯ ಸಂಗ್ರಹಿಸುವ ಸಂಘ ಸಂಸ್ಥೆಗಳು ಹಾಗೂ ಚಿಂದಿ ಆಯುವವರು, ಘನತ್ಯಾಜ್ಯ ಸಂಪರ್ಕ ಕಾರ್ಯಕರ್ತರೊಂದಿಗೆ ಸಭೆ ನಡೆಸಲಾಯಿತು. ಈ ವೇಳೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಹಸಿ, ಒಣ ಹತ್ತು ಸ್ಯಾನಿಟರಿ ತ್ಯಾಜ್ಯ ಪ್ರತ್ಯೇಕವಾಗಿ ಸಂಗ್ರಹಿಸುವ ಕುರಿತು ಸಭೆಗೆ ಮಾಹಿತಿ ನೀಡಲಾಯಿತು.

ಸಮಯ ನಿಗದಿ:

ನಗರದಲ್ಲಿ ಪತ್ರಿದಿನ ಬೆಳಗ್ಗೆ 6.30 ರಿಂದ 10.30 ಗಂಟೆ ವರೆಗೆ ಮನೆ-ಮನೆ ಕಸ ಸಂಗ್ರಹಿಸಬೇಕು. ಬೆಳಗ್ಗೆ 11.00 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಸಣ್ಣ ಉದ್ದಿಮೆಗಳ ಕಸ ಸಂಗ್ರಹ ಮಾಡಬೇಕು. ಬೆಳಗ್ಗೆ 11.00 ರಿಂದ ಮಧ್ಯಾಹ್ನ 2.00 ಗಂಟೆ ವರೆಗೆ ರಸ್ತೆ ಗುಡಿಸಿದ ಕಸ ಸಂಗ್ರಹಿಸಲು ಸಮಯ ನಿಗದಿಪಡಿಸಲಾಗಿದೆ ಎಂದು ಮಂಜುನಾಥ್‌ ಸಭೆಗೆ ತಿಳಿಸಿದರು.

ಕಸ ವಿಗಂಡಣೆ: ಯದ್ವಾತದ್ವಾ ದಂಡ ವಸೂಲಿ, ಸಾರ್ವಜನಿಕರ ಆಕ್ರೋಶ

ಕಸ ವಿಂಗಡಿಸದಿದ್ದರೆ ದಂಡ:

ಪ್ರತ್ಯೇಕ ಕಸ ಸಂಗ್ರಹಿಸುವ ಬಗ್ಗೆ ಘನತ್ಯಾಜ್ಯ ಸಂಪರ್ಕ ಕಾರ್ಯಕರ್ತರು ಮನೆ-ಮನೆಗೆ ಭೇಟಿ ನೀಡಿ ನಾಗರಿಕರಲ್ಲಿ ಅರಿವು ಮೂಡಿಸಬೇಕು. ಪ್ರತ್ಯೇಕವಾಗಿ ಕಸ ನೀಡುವ, ವಿಂಗಡಿಸಿ ಕೊಡದಿದ್ದರೆ ದಂಡ ವಿಧಿಸುವ ಬಗ್ಗೆ ಮಾಹಿತಿ ನೀಡಬೇಕು. ಈಗಾಗಲೇ ಪ್ಲಾಸ್ಟಿಕ್‌ ಬಳಕೆಯನ್ನು ನಿಷೇಧಿಸಲಾಗಿದೆ. ಆದರೂ, ನಗರದಲ್ಲಿ ಪ್ಲಾಸ್ಟಿಕ್‌ ಬಳಕೆ ಕಡಿಮೆಯಾಗಿಲ್ಲ. ಈ ಬಗ್ಗೆ ಸಂಬಂಧಪಟ್ಟಆರೋಗ್ಯಾಧಿಕಾರಿಗಳು ಹೆಚ್ಚು ಗಮನವರಿಸಿ ಸಂಪೂರ್ಣ ಪ್ಲಾಸ್ಟಿಕ್‌ ನಿಷೇಧ ಮಾಡಲು ಕ್ರಮ ವಹಿಸಬೇಕು ಎಂದು ಸೂಚಿಸಿರುವುದಾಗಿ ಹೇಳಿದರು.

ಸಭೆಯಲ್ಲಿ ವಿಶೇಷ ಆಯುಕ್ತ (ಘನತ್ಯಾಜ್ಯ) ಡಿ.ರಂದೀಪ್‌, ಜಂಟಿ ಆಯುಕ್ತ (ಘನತ್ಯಾಜ್ಯ) ಸರ್ಫರಾಜ್‌ ಖಾನ್‌, ಅಧೀಕ್ಷಕ ಅಭಿಯಂತರ (ಘನತ್ಯಾಜ್ಯ) ಬಸವರಾಜ್‌ ಕಬಾಡೆ, ಮುಖ್ಯ ಅಭಿಯಂತರ (ಘನತ್ಯಾಜ್ಯ) ವಿಶ್ವನಾಥ್‌ ಉಪಸ್ಥಿತರಿದ್ದರು.

ಪ್ರತ್ಯೇಕ ಹಸಿ ತ್ಯಾಜ್ಯ ಸಂಗ್ರಹ ಜಾರಿಯಾಗುವ 38 ವಾರ್ಡ್‌ಗಳು

ಕೆಂಪೇಗೌಡ ವಾರ್ಡ್‌, ಚೌಡೇಶ್ವರಿ ವಾರ್ಡ್‌, ಅಟ್ಟೂರು, ವಿದ್ಯಾರಣ್ಯಪುರ, ದಾಸರಹಳ್ಳಿ, ಕಾವಲ್‌ ಬೈರಸಂಗ್ರ, ಚೊಕ್ಕಸಂದ್ರ, ಮುನೇಶ್ವರ ನಗರ, ವಿಜ್ಞಾನಪುರ, ಕೆ.ಆರ್‌.ಪುರ, ಬಸವನಪುರ, ಹೂಡಿ, ಗರುಡಾಚಾರ್‌ ಪಾಳ್ಯ, ಭಾರತೀನಗರ, ಶಿವಾಜಿನಗರ, ದಯಾದಂನಗರ, ರಾಜಾಜಿನಗರ, ಬಸವೇಶ್ವರನಗರ, ಗೋವಿಂದರಾಜನಗರ, ಮೂಡಲಪಾಳ್ಯ, ನಾಗರಬಾವಿ, ನಾಯಂಡಹಳ್ಳಿ, ರಾಯಪುರ, ಛಲವಾದಿಪಾಳ್ಯ, ಆಜಾದ್‌ ನಗರ, ಸಿದ್ದಾಪುರ, ಲಕ್ಕಸಂದ್ರ, ಶ್ರೀನಗರ, ಗಾಳಿ ಆಂಜನೇಯ ದೇವಸ್ಥಾನ, ದೀಪಾಂಜಲಿನಗರ, ಹೊಸಕೆರೆಹಳ್ಳಿ, ಗಣೇಶ ಮಂದಿರ, ಯಡಿಯೂರು, ಭೈರಸಂದ್ರ, ಬೊಮ್ಮನಹಳ್ಳಿ, ಮಂಗಮ್ಮನಪಾಳ್ಯ ಹಾಗೂ ಸಿಂಗಸಂದ್ರ ವಾರ್ಡ್‌ನಲ್ಲಿ ಜಾರಿಗೊಳಿಸಲಾಗುತ್ತಿದೆ.

ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು, ಬಿಬಿಎಂಪಿ ವ್ಯಾಪ್ತಿಯ 38 ವಾರ್ಡ್‌ಗಳಲ್ಲಿ ಪ್ರತ್ಯೇಕ ಕಸ ಸಂಗ್ರಹ ಯೋಜನೆ ಜಾರಿಗೊಳಿಸಲಾಗುತ್ತಿದೆ. ಮುಂದಿನ ಮೂರು ತಿಂಗಳಲ್ಲಿ ಶೇ.100 ರಷ್ಟುಕಸ ವಿಂಗಡಣೆ ಹಾಗೂ ಇರುವ ಬ್ಲಾಕ್‌ ಸ್ಪಾಟ್‌ (ಕಸ ಸುರಿಯುವ ಸ್ಥಳ) ಗಳನ್ನು ತೆರವುಗೊಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.